ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ: ಕಿರು ಪರಿಚಯ

By ಮಮತಾ ದೇವ
|
Google Oneindia Kannada News

(ಎಂಬತ್ತರ ಆಸುಪಾಸಿನಲ್ಲಿರುವ ವಿದ್ಯಾ ವಾಚಸ್ಪತಿ, ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ನಾಡಿನ ಪ್ರಮುಖ ವಿದ್ವಾಂಸರಲ್ಲೊಬ್ಬರು. ಮಾಧ್ವ ತತ್ವದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿರುವ ಬನ್ನಂಜೆಯವರ ಬಗ್ಗೆ ನಮ್ಮ ಓದುಗರೊಬ್ಬರು ಬರೆದು ಕಳುಹಿಸಿದ ಲೇಖವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ, ಸಂ)

ತಮ್ಮ ವಿದ್ವತ್ತಿನಿಂದಾಗಿ ಜನರನ್ನು ಸಮ್ಮೋಹನಗೊಳಿಸಬಲ್ಲ , ನಮ್ಮ ದೇಶದಲ್ಲೇ ಶ್ರೇಷ್ಠ ವ್ಯಕ್ತಿಗಳಲ್ಲೋರ್ವರಾಗಿರುವ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ ಭಾಷಾ ಪಾಂಡಿತ್ಯದಲ್ಲಿ ಸಮಾನರಿಲ್ಲ.

ಕನ್ನಡ, ಸಂಸ್ಕೃತ, ಇಂಗ್ಲೀಷ್, ತುಳು ಭಾಷೆಗಳಲ್ಲಿ ಅಪಾರ ಹಿಡಿತವಿರುವ ಇವರು ಜನರ ಮನಸ್ಸನ್ನು ಸೆರೆಹಿಡಿಯಬಲ್ಲ ಭಾಷಣ ಕೌಶಲ್ಯವಿರುವ ಘನ ವಿದ್ವಾಂಸರು, ದಾರ್ಶನಿಕ, ಕವಿ, ಬರವಣಿಗೆಯಲ್ಲೂ ಅದ್ವಿತೀಯರು.

ಭಾರತೀಯ ವೇದ ಮತ್ತು ಸಂಸ್ಕೃತಿಯ ರಾಯಭಾರಿಯಾಗಿರುವ ಇವರು ಮಾಧ್ವ ತತ್ವವನ್ನು, ಸಂಸ್ಕೃತದ ಅನೇಕ ಕೃತಿಗಳನ್ನು , ಶ್ಲೋಕ, ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನೂತನ ಪದ ಪ್ರಯೋಗದಲ್ಲಿ ನಿಪುಣರಾಗಿರುವ ಇವರು ಹೊಸ ಪದಗಳನ್ನೂ ಕನ್ನಡಕ್ಕೆ ನೀಡಿದ ಭಾಷಾತಜ್ಞರು.

ಸಾಹಿತ್ಯದ ದಿಗ್ಗಜರಾದ ಡಿವಿಜಿಯವರಂತೆಯೇ ಉತ್ತಮ ಪದರಚನಾ ಸಾಮರ್ಥ್ಯ ಹೊಂದಿದವರು. ಘನ ಗಂಭೀರತೆಯಿದ್ದರೂ ರಸಿಕತೆಯ ಲೇಪನದೊಂದಿಗೆ ಮಾತನಾಡುವ ಕಲೆ ಕರಗತವಾಗಿರುವ ಬನ್ನಂಜೆಯವರ ಪ್ರವಚನಗಳು ಹೊಸ ಚಿಂತನೆ ಹುಟ್ಟಿಸುವಂತಹವಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತವಾಗಿವೆ.

ಅವರ ವಿಚಾರಧಾರೆಗಳು ಸಾರ್ವಕಾಲಿಕವಾಗಿ ಪ್ರಸ್ತುತವೆನಿಸುವಂತಹವು. ಉದಯವಾಣಿ ಪತ್ರಿಕೆಯಲ್ಲಿ ಅವರ ವಿಡಂಬನಾತ್ಮಕ ಅಂಕಣ ಕಿಷ್ಕಿಂದಾ ಕಾಂಡ ಜನಪ್ರಿಯವಾಗಿದ್ದು ಶಾಲಾ- ಕಾಲೇಜು ದಿನಗಳಲ್ಲಿ ಪತ್ರಿಕೆಯ ಪ್ರತಿ ಸಿಕ್ಕಿದಲ್ಲಿ ಮತ್ತೆ ಮತ್ತೆ ಓದುತ್ತಿದ್ದ ನೆನಪು ಇಂದಿಗೂ ಹಸಿರಾಗಿದೆ.

ಹಲವು ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಬನ್ನಂಜೆಯವರದ್ದು ಬಹುಮುಖ ಪ್ರತಿಭೆ. ಭಗವದ್ಗೀತೆ, ಕಾಳಿದಾಸ, ಮೃಚ್ಛಕಟಿಕ, ಮಹಾಶ್ವೇತ, ಮೊದಲಾದ ಕೃತಿಗಳನ್ನು ಭಾಷಾಂತರ ಮಾಡಿರುವುದಲ್ಲದೇ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ. ಮುಂದೆ ಓದಿ..

ಚಲನಚಿತ್ರಗಳಿಗೆ ಸಾಹಿತ್ಯ, ಸಂಭಾಷಣೆ

ಚಲನಚಿತ್ರಗಳಿಗೆ ಸಾಹಿತ್ಯ, ಸಂಭಾಷಣೆ

ಇವರ ಚಿಂತನಗಳು, ವಾಚನ-ವ್ಯಾಖ್ಯಾನಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ. ಬನ್ನಂಜೆಯವರ ಪ್ರವಚನಗಳಿಗೆ ಜನರು ಯಾವತ್ತೂ ಕಿಕ್ಕಿರಿದು ಸೇರುತ್ತಾರೆ. ಸಂಸ್ಕೃತದಲ್ಲಿ ಪ್ರಥಮವಾಗಿ ತೆರೆ ಕಂಡಿರುವ ಜಿ.ವಿ.ಅಯ್ಯರ್ ರವರ ಶಂಕರಾಚಾರ್ಯ, ಮಧ್ವಾಚಾರ್ಯ ಮೊದಲಾದ ಚಲನಚಿತ್ರಗಳಿಗೆ ಸಾಹಿತ್ಯ, ಸಂಭಾಷಣೆ ಬರೆದ ಖ್ಯಾತಿ ಇವರದ್ದು.

ಆಧ್ಯಾತ್ಮಿಕ ಪ್ರವಚನ

ಆಧ್ಯಾತ್ಮಿಕ ಪ್ರವಚನ

ಜ್ಞಾನದ ಗಣಿಯಾಗಿರುವ ಇವರು ದೇಶ-ವಿದೇಶದಲ್ಲಿ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿ ಹಲವಾರು ಶಿಷ್ಯರನ್ನು,ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಸ್ಕೃತದ ವಿಶ್ವಕೋಶವಿದ್ದಂತಿರುವ ಇವರ ಅನೇಕ ಪ್ರವಚನಗಳನ್ನು ಕೇಳಿ ಹೊಸತನವನ್ನು ಕಂಡುಕೊಂಡ ಅನುಭವವಾಗಿದೆ.

ಅಮೆರಿಕಾದಲ್ಲಿ ಬನ್ನಂಜೆ ಪ್ರವಚನ

ಅಮೆರಿಕಾದಲ್ಲಿ ಬನ್ನಂಜೆ ಪ್ರವಚನ

ಅಮೆರಿಕಾದಲ್ಲಿ ನಡೆದ ವಿಶ್ವ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ತಮ್ಮ ಜ್ಞಾನದ ಜ್ಯೋತಿಯನ್ನು ವಿಶ್ವದ ನಾನಾ ಭಾಗಗಳಲ್ಲಿ ಬೆಳಗುತ್ತಾ ಜನರಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಅಮೆರಿಕಾದಲ್ಲಿ ನಡೆದ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದ ಧ್ವನಿ ಮುದ್ರಿಕೆಯನ್ನು ಆಲಿಸಿದಾಗ ವಿಜ್ಞಾನ ಮತ್ತು ಧರ್ಮದ ಬಗ್ಗೆ ಅವರ ವಿಶ್ಲೇಷಣೆ ಅರಿವಿನ ಪರಿಧಿಯನ್ನು ವಿಸ್ತರಿಸಿತು.

ಬನ್ನಂಜೆಯವರ ವ್ಯಾಖ್ಯಾನ

ಬನ್ನಂಜೆಯವರ ವ್ಯಾಖ್ಯಾನ

ಬನ್ನಂಜೆಯವರ ವ್ಯಾಖ್ಯಾನಗಳಲ್ಲಿ ಆಸಕ್ತಿ ಮೂಡಲು ಕಾರಣ ಮನೆಗೆ ವರ್ಷಕ್ಕೊಮ್ಮೆ ಆಗಮಿಸುತ್ತಿದ್ದ ಹಿರಿಯರೋರ್ವರು ಮಹಾಭಾರತ (ಕುಮಾರವ್ಯಾಸ ವಿರಚಿತ )ವನ್ನು ವಾಚನ-ವ್ಯಾಖ್ಯಾನದೊಂದಿಗೆ ಕೊಡಗಿನ ಮಳೆಗಾಲದ ದಿನಗಳಲ್ಲಿ ಮನರಂಜನೆ ನೀಡುತ್ತಿದ್ದುದು, ತಂದೆಯವರೂ ನಿತ್ಯವೂ ಕಾವ್ಯ ವಾಚನ ಮಾಡುತ್ತಿದ್ದುದು, ನಮಗೂ ಪ್ರಭಾವ ಬೀರಿತ್ತು.

ವೀಣಾ ಬನ್ನಂಜೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ

ವೀಣಾ ಬನ್ನಂಜೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬನ್ನಂಜೆಯವರು ಲೇಖನಗಳ ಮೂಲಕ ಚಿರಪರಿಚಿತರು. ಅವರ ಪ್ರವಚನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸಿ ಪ್ರೇರಣೆ ಪಡೆದಿದ್ದೇವೆ. ಆತ್ಮೀಯರ ಆಹ್ವಾನಕ್ಕೆ ಸ್ಪಂದಿಸಿ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ 2013ರಲ್ಲಿ ವೀಣಾ ಬನ್ನಂಜೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆಚಾರ್ಯರನ್ನು ಮಾತನಾಡಿಸಲು ಸಾಧ್ಯವಾಗಿರಲಿಲ್ಲ. (ಚಿತ್ರದಲ್ಲಿ ವೀಣಾ ಬನ್ನಂಜೆ)

ಆಳ್ವರ ನುಡಿಸಿರಿ ಪ್ರಶಸ್ತಿ

ಆಳ್ವರ ನುಡಿಸಿರಿ ಪ್ರಶಸ್ತಿ

ಮಾಧ್ಯಮ ಲೋಕದಲ್ಲಿ ತ್ರಿವಿಕ್ರಮನಾಗಿ, ಭಾಷೆ, ಸಂಸ್ಕೃತಿಗಳ ಹರಿಕಾರನಾಗಿ ವಾಚನ-ಪ್ರವಚನಗಳಲ್ಲಿ 'ವಿದ್ಯಾ ವಾಚಸ್ಪತಿ' ಎಂದೆನಿಸಿದ ಸಮಾಜದ ಆದರ್ಶರೂಪಿ ವ್ಯಕ್ತಿತ್ವದ ರಾಮಾನುಜ- ಶ್ರೀ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಸಾಧನೆಗೆ ಪ್ರತಿಷ್ಠಿತ ಆಳ್ವರ ನುಡಿಸಿರಿ ಪ್ರಶಸ್ತಿ ಸ್ವೀಕರಿಸಿದ ಹೊತ್ತು ಉಪಸ್ಥಿತರಿದ್ದು ಅವರ ಚುಟುಕಾದ ಭಾಷಣದಿಂದ ನಿರಾಸೆಯಾದರೂ, ಸಮಾರಂಭದ ಬಳಿಕ ಬನ್ನಂಜೆ ಗೋವಿಂದಾಚಾರ್ಯರೊಡನೆ ಸಂಭಾಷಣೆಗೆ ಸಿಕ್ಕ ಕಾಲ ಜೀವನದಲ್ಲಿ ಏನನ್ನೋ ಸಾಧಿಸಿದಂತೆ ಸಂತೃಪ್ತಿ ನೀಡಿತು.

ಅವರ ಆಶೀರ್ವಾದ

ಅವರ ಆಶೀರ್ವಾದ

ಬಾಯ್ತುಂಬ ಹರಸಿ, ಆನಂದ ಬಾಷ್ಪ ಸುರಿಸಿ, "ಒಳ್ಳೆಯವನಾಗು, ನಿನಗೆ ಒಳ್ಳೆಯದಾಗಲಿ" ಎಂದು ಅವರನ್ನು ತುಂಬಾ ಗೌರವಿಸುವ ನನ್ನ ಪತಿಗೂ, "ನನಗೂ ಒಳ್ಳೆಯದಾಗಲಿ ,ಬದುಕು ಬಂಗಾರವಾಗಲಿ" ಎಂದು ಆಶೀರ್ವದಿಸಿದ್ದು ದಾಖಲೆಯಾಗಿ ಕಿವಿಯಲ್ಲಿ ಸದಾ ಮೊಳಗುತ್ತಿದೆ. ಬನ್ನಂಜೆಯವರೊಂದಿಗಿನ ಆ ಸಂಜೆ ಎಂದೂ ಮರೆಯಲಾಗದ ಸಂಜೆಯೇ ಸರಿ. ಭಾರತದ ಘನತೆಯನ್ನು ಮತ್ತಷ್ಟು ಹೆಚ್ಚಿಸುವ ಉನ್ನತ ಶೈಲಿಯ ಭಾಷಾ ಪ್ರೌಢಿಮೆ ಇರುವ ಅಪರೂಪದ ಸಾಧಕ ಎಂಭತ್ತರ ಹರಯದಲ್ಲಿರುವ ಬನ್ನಂಜೆಯವರ ನಿಷ್ಕೃಷ್ಟ ಪರಿಜ್ಞಾನ ವಿಶ್ವದೆಲ್ಲೆಡೆ ಇನ್ನೂ ಹೆಚ್ಚು ಪಸರಿಸುತ್ತಿರಲಿ.

English summary
Profound scholar Vidya Vachaspathi, Padmashri Dr. Bannanje Govindacharya Profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X