ಎಂಬಿ ಪಾಟೀಲ್ ಸೇರಿ 8 ಮಂದಿ ಸಚಿವರ ಕಿರು ಪರಿಚಯ
ಬೆಂಗಳೂರು, ಡಿಸೆಂಬರ್ 23: ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆ ಹಾಗೂ ಪ್ರಾಂತ್ಯ, ಜಾತಿ, ಪಂಗಡಗಳ ಲೆಕ್ಕಾಚಾರ ಹಾಕಿ, ಅಳೆದು ತೂಗಿ 8 ಮಂದಿ ಶಾಸಕರನ್ನು ಸಂಪುಟ ದರ್ಜೆಯ ಸಚಿವರನ್ನಾಗಿ ಆಯ್ಕೆ ಮಾಡಿದೆ.
ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಾಲಿನ ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, 8 ಮಂದಿ ಶಾಸಕರು ನೂತನ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಶನಿವಾರದಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದು ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆಗೆ ಮುಂದಾಗಿತ್ತು. ಈಗಲೂ ಅತೃಪ್ತ ಶಾಸಕರ ಅಸಮಾಧಾನ ಗೊಂದಲಗಳ ನಡುವೆಯೇ ಎಂಟು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಸಂಪುಟದಲ್ಲಿದ್ದ ರಮೇಶ್ ಜಾರಕಿಹೊಳಿ ಮತ್ತು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಒಟ್ಟು ಆರು ಸ್ಥಾನಗಳಿಗೆ ಸಚಿವರನ್ನು ಸೇರ್ಪಡೆ ಮಾಡಿಕೊಂಡಂತಾಗಿದೆ.

ಎಂ.ಬಿ.ಪಾಟೀಲ್
* ವಿದ್ಯಾರ್ಹತೆ: ಬಿ.ಇ, ಸಿವಿಲ್.
* ವೃತ್ತಿ : ಕೃಷಿ, ವ್ಯಾಪಾರ
* ಲಿಂಗಾಯತ ಸಮುದಾಯದ ಪ್ರಬಲ ನಾಯಕರು.
* ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬಲ ತುಂಬಿದರು. ಇದರಿಂದ ಅನೇಕ ವಿರೋಧ ಕಟ್ಟಿಕೊಂಡರು.
* ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕರು
* 1989, 2004,2008,2013,2018ರಲ್ಲಿ ವಿಧಾನಸಭೆಗೆ ಹಾಗೂ 1998ರಲ್ಲಿ ಲೋಕಸಭೆಗೆ ಆಯ್ಕೆ.
* ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿ, ಉತ್ತರ ಕರ್ನಾಟಕದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಜನನಾಯಕ ಎನಿಸಿಕೊಂಡರು.

ಸಿ.ಎಸ್.ಶಿವಳ್ಳಿ
* ವಿದ್ಯಾರ್ಹತೆ: 12ನೇ ತರಗತಿ
* ವೃತ್ತಿ: ಕೃಷಿ
* ಧಾರವಾಡ ಜಿಲ್ಲೆಯ ಕುಂದಗೋಳದ ಶಾಸಕ ಸಿ.ಎಸ್. ಶಿವಳ್ಳಿ ಮೂರು ಬಾರಿ ಶಾಸಕರಾಗಿ ಆಯ್ಕೆ
* ಕುರುಬ ಸಮುದಾಯದ ಪ್ರಬಲ ನಾಯಕ.
* 1994ರಲ್ಲಿ ಬಂಗಾರಪ್ಪ ಅವರ ಕೆಸಿಪಿಯಿಂದ ಸ್ಪರ್ಧಿಸಿ ಸೋಲು ಕಂಡರು.
* 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು, 2013,2018ರಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಗೆಲುವು

ಎಂಟಿಬಿ ನಾಗರಾಜ್
* ವಿದ್ಯಾರ್ಹತೆ: 8ನೇ ತರಗತಿ
* ವೃತ್ತಿ: ಕೃಷಿ ಮತ್ತು ವ್ಯಾಪಾರ.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಶಾಸಕರು.
* ಕುರುಬ ಸಮುದಾಯದ ಪ್ರಭಾವಿ ಮುಖಂಡ.
* ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಪಕ್ಷದಲ್ಲಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆ.
* ಹಾಲಿ ಶಾಸಕರ ಪೈಕಿ ಅತಿ ಶ್ರೀಮಂತ ಶಾಸಕರು.
* 2004,2013, 2018ರಲ್ಲಿ ವಿಧಾನಸಭೆಗೆ ಆಯ್ಕೆ
* ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಯೋಜನೆಯ ಅಧ್ಯಕ್ಷ
* ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇ ತುಕಾರಾಂ
* ವಿದ್ಯಾರ್ಹತೆ: ಎಂ.ಕಾಂ, ಪಿಜಿ ಡಿಬಿಎ
* ವೃತ್ತಿ: ಕೃಷಿಕ
* ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ
* ಇ. ತುಕಾರಾಂ ವಾಲ್ಮೀಕಿ ಸಮುದಾಯದ ನಾಯಕ
* 2008,2013 ಹಾಗೂ 2018ರಲ್ಲಿ ಆಯ್ಕೆಯಾಗಿ ಮೂರನೆ ಬಾರಿ ಶಾಸಕರಾಗಿದ್ದಾರೆ.
* ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
* ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿಯಾಗಿದ್ದರು

ಪಿ.ಟಿ.ಪರಮೇಶ್ವರ ನಾಯ್ಕ್
* ವಿದ್ಯಾರ್ಹತೆ: 12ನೇ ತರಗತಿ
* ವೃತ್ತಿ : ಕೃಷಿಕ
* ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದಿಂದ ಶಾಸಕರು.
* 1999 ಹಾಗೂ 2004ರಲ್ಲಿ ಹರಪನಹಳ್ಳಿಯಿಂದ ವಿಧಾನಸಭೆಗೆ ಆಯ್ಕೆ.
* 2013 ಹಾಗೂ 2018ರಲ್ಲಿ ಹೂವಿನ ಹಡಗಲಿಯಿಂದ ಆಯ್ಕೆ
* ಲಂಬಾಣಿ ಸಮುದಾಯದ ಪ್ರಮುಖ ನಾಯಕ.
* ಸಿದ್ದರಾಮಯ್ಯ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದವರು.
* ಬಳ್ಳಾರಿಯ ಗಣಿಧಣಿ ಶ್ರೀರಾಮುಲು ಅವರಿಗೆ ಸಡ್ಡು ಹೊಡೆದು ಪಕ್ಷ ಸಂಘಟನೆ ಮಾಡಿ, ಸಿದ್ದರಾಮಯ್ಯ ಅವರಿಗೆ ಬಲ ತಂದಿದ್ದರು.
* ಮೈತ್ರಿ ಸರಕಾರದಲ್ಲಿ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದ್ದಾರೆ.

ಸತೀಶ್ ಜಾರಕಿಹೊಳಿ
* ವಿದ್ಯಾರ್ಹತೆ: 12ನೇ ತರಗತಿ
* ವೃತ್ತಿ: ಕೃಷಿ, ಕೈಗಾರಿಕೆ
* ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರ
* 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
* 2004ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯ
* 2008, 2013 ಹಾಗೂ 2018ರಲ್ಲಿ ವಿಧಾನಸಭಾ ಸದಸ್ಯ,
* ಸತೀಶ್ ಜಾರಕಿಹೊಳಿ ನಾಯಕ ಜನಾಂಗಕ್ಕೆ ಸೇರಿದವರು.
* ಸಿದ್ದರಾಮಯ್ಯನವರ ಸರಕಾರದಲ್ಲಿ ಜವಳಿ ಸಚಿವರಾಗಿದ್ದವರು, ಕಾರಣಾಂತರಗಳಿಂದ ಸ್ಥಾನ ತೊರೆದಿದ್ದರು. 2013ರಲ್ಲಿ ಅಬಕಾರಿ ಸಚಿವರಾಗಿದ್ದರು.
* ಕಂದಾಚಾರ, ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುವ ಪ್ರಗತಿಪರ ವಿಚಾರಧಾರೆಯ ಪರವಿರುವ ಸತೀಶ್, ಅವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಸಚಿವರಾಗಿ ಪ್ರಮಾಣದ ವಚನ ಸ್ವೀಕರಿಸಿದರು.

ಆರ್.ಬಿ ತಿಮ್ಮಾಪುರ
* ವಿದ್ಯಾರ್ಹತೆ: ಬಿ ಎ, ಎಲ್ ಎಲ್ ಬಿ
* ವೃತ್ತಿ: ಸಮಾಜ ಸೇವೆ
* ಬಾಗಲಕೋಟೆಯ ಮುಧೋಳ ಮೀಸಲು ಕ್ಷೇತ್ರ ಮೇಲ್ಮನೆ ಸದಸ್ಯ
* ಆರ್.ಬಿ.ತಿಮ್ಮಾಪುರ, ಪರಿಶಿಷ್ಟ ಜಾತಿಯ ಎಡ ಪಂಗಡಕ್ಕೆ ಸೇರಿದವರು.
* 1989 ಹಾಗೂ 1999ರಲ್ಲಿ ಮುಧೋಳ ವಿಧಾನಸಭಾ ಸದಸ್ಯ, 2016ರಲ್ಲಿ ಎಂಎಲ್ ಸಿ
* ಎಸ್.ಎಂ ಕೃಷ್ಣ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು.
* ಎರಡು ಗೆಲುವು, ನಾಲ್ಕು ಸೋಲು ಕಂಡಿರುವ ಇವರು ಮಾದಿಗ ಸಮುದಾಯಕ್ಕೆ ಸೇರಿದ ಉತ್ತರ ಕರ್ನಾಟಕದ ಏಕೈಕ ನಾಯಕ

ರಹೀಂ ಖಾನ್
* ವಿದ್ಯಾರ್ಹತೆ : ಬಿಎ
* ವೃತ್ತಿ: ವ್ಯಾಪಾರ
* 2009ರ ಉಪ ಚುನಾವಣೆಯಲ್ಲಿ ಮೊದಲ ಗೆಲುವು
* 2013 ಹಾಗೂ 2018ರಲ್ಲಿ ಸತತ ಎರಡು ಬಾರಿ ಜಯ.
* ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವರಾಗಿದ್ದಾರೆ.
* ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್
* ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು.
* ಹೈದರಾಬಾದ್ ಕರ್ನಾಟಕ ಭಾಗದ ಮುಸ್ಲಿಮ್ ಸಮುದಾಯದ ಪ್ರತಿನಿಧಿ.
* ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದ್ದಾರೆ.












Click it and Unblock the Notifications