ದೇವೇಗೌಡರ ರಾಜಕೀಯ ನಿವೃತ್ತಿ ತಡೆದದ್ದು ಮೋದಿಯೇ!
ಬೆಂಗಳೂರು, ಸೆ 9: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಲು ಮುಂದಾಗಿದ್ದೆ, ಆದರೆ ನಾನು ರಾಜೀನಾಮೆ ನೀಡದಂತೆ ತಡೆದದ್ದು ಪ್ರಧಾನಿ ಮೋದಿ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ.
ನರೇಂದ್ರ ಮೋದಿಯವರ ಮುಖಂಡತ್ವದ ಎನ್ಡಿಎ ಮೈತ್ರಿಕೂಟ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ, ನಾನು ಮತ್ತು ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ದೆಹಲಿಗೆ ಹೋಗಿದ್ದೆವು. (ಮೋದಿ ಮೋಡಿ: ದೊಡ್ಡಗೌಡ್ರ ಹೃದಯ ಗೆದ್ದ ಮೋದಿ)
ಆ ಸಂದರ್ಭದಲ್ಲಿ ನಾನು ನನ್ನ ರಾಜೀನಾಮೆಯ ವಿಷಯವನ್ನು ಮೋದಿಯವರ ಬಳಿ ಪ್ರಸ್ತಾಪಿಸಿದ್ದೆ. ಆದರೆ ಮೋದಿಯವರು ನನ್ನ ರಾಜೀನಾಮೆಗೆ ಬಿಲ್ ಕುಲ್ ಒಪ್ಪಲಿಲ್ಲ ಎಂದು ಗೌಡ್ರು ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ದೇವೇಗೌಡ, ಚುನಾವಣೆಯ ಸಮಯದಲ್ಲಿ ನಾನು ಮೋದಿ ಬಹುಮತದಿಂದ ಅಧಿಕಾರಕ್ಕೆ ಬಂದರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ನಿಜ. ಆ ಸಂದರ್ಭ ಆ ರೀತಿ ಇತ್ತು. ನಾನು ಅಂದು ಆಡಿದ ಮಾತನ್ನು ಮತ್ತು ಆ ಸಂದರ್ಭವನ್ನು ಮೋದಿಯವರಿಗೆ ಅಂದಿನ ಭೇಟಿಯ ವೇಳೆ ವಿವರಿಸಿದ್ದೆ.
ಚುನಾವಣೆ ಎಂದಮೇಲೆ ಆರೋಪ, ಪ್ರತ್ಯಾರೋಪ ಸಹಜ. ನೀವು ರಾಜೀನಾಮೆ ನೀಡಲೇಬಾರದೆಂದು ಮೋದಿ ಅಂದು ನನ್ನನ್ನು ತಡೆದಿದ್ದರು ಎಂದು ದೇವೇಗೌಡ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

ದೇವೇಗೌಡ್ರು ಅಂದು ಹೇಳಿದ್ದೇನು
ಜೆಡಿಎಸ್ ಕಚೇರಿಯಲ್ಲಿ ಮಾತನಾಡುತ್ತಿದ್ದ ಗೌಡ್ರು, ದೇಶದಲ್ಲಿ ಸಮ್ಮಿಶ್ರ ಸರಕಾರ ಬರುವುದು ಖಂಡಿತ. ಮೋದಿ ಪ್ರಧಾನಿಯಾಗುವುದು ಕನಸಿನ ಮಾತು. ಯಾವ ಪಕ್ಷಕ್ಕೂ ಮುಂದಿನ ಚುನಾವಣೆಯಲ್ಲಿ ಬಹುಮತ ಬರುವುದಿಲ್ಲ. ಒಂದು ವೇಳೆ ಬಿಜೆಪಿಗೆ
ಬಹುಮತ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ - ದೇವೇಗೌಡ.

ದೇಶ ಬಿಟ್ಟು ಹೋಗುತ್ತೇನೆಂದಿದ್ದ ದೇವೇಗೌಡ
ಲೋಕಸಭಾ ಚುನಾವಣಾಪೂರ್ವ ಸಮೀಕ್ಷೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ದೇವೇಗೌಡ, ಮಾಧ್ಯಮದವರು ಮೋದಿಗೆ ಅವಶ್ಯಕತೆಗಿಂತೆ ಹೆಚ್ಚು ಪ್ರಚಾರ ನೀಡುತ್ತಿದ್ದಾರೆ. ಮೋದಿ ಒಂದು ವೇಳೆ ಪ್ರಧಾನಿಯಾದರೆ ನಾನು ಈ ದೇಶವನ್ನು ಬಿಟ್ಟು ಹೋಗುತ್ತೇನೆಂದಿದ್ದ ದೇವೇಗೌಡ್ರು.

ಗೌಡ್ರ ಹೇಳಿಕೆಗೆ ಖಾರವಾಗಿ ಉತ್ತರಿಸಿದ್ದ ಮೋದಿ
ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದ ಮೋದಿ, ದೇವೇಗೌಡರು ಹಿರಿಯರಿದ್ದಾರೆ. ಅವರು ದೇಶ ಬಿಟ್ಟು ಹೋಗುವುದು ಬೇಡ. ಅವರು ನನ್ನ ಬಳಿ ಬರಲಿ, ಗುಜರಾತಿಗೆ ಬಂದು ಅವರು ನೆಲೆಸಿದರೆ ಸ್ವಂತ ಮಗನಾಗಿ ಅವರನ್ನು ನೋಡಿಕೊಳ್ಳುತ್ತೇನೆ ಎಂದಿದ್ದರು.

ನೀವು ರಾಜೀನಾಮೆ ನೀಡಬಾರದು
ಮೋದಿ ಜೊತೆಗಿನ ಇತ್ತೀಚಿನ ಭೇಟಿಯ ವೇಳೆ, ನೀವು ಪ್ರಧಾನಿಯಾಗಿದ್ದ ಸಮಯದಲ್ಲಿ ನಿಮ್ಮ ಆಡಳಿತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ದೇಶದ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸರಕಾರಕ್ಕೆ ನಿಮ್ಮಂತವರ ಮಾರ್ಗದರ್ಶನ ಅಗತ್ಯ. ರಾಜೀನಾಮೆಯ ವಿಷಯವನ್ನು ಮಾತನಾಡಬಾರದೆಂದು ಮೋದಿ, ನನ್ನಲ್ಲಿ ಮನವಿ ಮಾಡಿದ್ದರು ಎಂದು ಗೌಡ್ರು ಹೇಳಿದ್ದಾರೆ.

ರೈಲ್ವೆ ಯೋಜನೆ ಮತ್ತು ಕಾವೇರಿ
ರಾಜ್ಯದ ರೈಲ್ವೆ ಯೋಜನೆ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮೋದಿಯವರ ಬಳಿ ಅಂದಿನ ಭೇಟಿಯ ವೇಳೆ ಮಾತನಾಡಿದ್ದೆ. ನನ್ನ ಮನವಿಗೆ ಮೋದಿ ಸಕಾರಾತ್ಮಕ ಮಾತನ್ನಾಡಿದ್ದಾರೆ. ಕಾವೇರಿ ಮತ್ತು ಕೃಷ್ಣ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆಂದು ಮೋದಿ ನನಗೆ ಭರವಸೆ ನೀಡಿದ್ದಾರೆಂದು ಗೌಡ್ರು, ಮೋದಿ ಜೊತೆಗಿನ ಚರ್ಚೆಯ ವಿಷಯವನ್ನು ವಿವರಿಸಿದ್ದಾರೆ.












Click it and Unblock the Notifications