ಪ್ರಧಾನಿ ಜವಾಬ್ದಾರಿ ನೀಡಿಲ್ಲ, ಸವಾಲು ನೀಡಿದ್ದಾರೆ : ಹೆಗಡೆ
ಕಾರವಾರ, ಸೆಪ್ಟೆಂಬರ್ 25 : "ಸಂಸದನಾಗಿ 5ನೇ ಬಾರಿ ಆಯ್ಕೆಯಾದ ಬಳಿಕ ಜನರ ಬಳಿ ಬೇಕು ಅಂತಾನೇ ಹೋಗುತ್ತಿರಲಿಲ್ಲ. ರಾಜಕೀಯ ಬೇಡ ಎಂದು ಕುಳಿತಿದ್ದ ನನಗೆ ಕೇಂದ್ರದ ಹುದ್ದೆ ದೇವರೇ ನೀಡಿದ ಸವಾಲು" ಎಂದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಕಾರವಾರ ತಾಲ್ಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದಾಗಿ ನನಗೆ ಈ ಸ್ಥಾನ ಸಿಕ್ಕಿದೆ. ಆದರೆ ನಾನು ಈ ಕುರ್ಚಿಗೆ ಲಾಯಕ್ಕಲ್ಲ. ನಿರೀಕ್ಷೆ, ಅಪೇಕ್ಷೆ ಎರಡೂ ಕೂಡ ನನಗಿರಲಿಲ್ಲ ಎಂದು ಅವರು ಭಾನುವಾರ ಆತ್ಮವಿಮರ್ಶೆ ಮಾಡಿಕೊಂಡರು.
ಅನೇಕರು ಈ ಹಿಂದೆ ನನಗೆ 'ನೀವು ಜಿಲ್ಲೆ ಕಡೆ ಬಹಳ ಅಪರೂಪ ಆಗಿದ್ದೀರಿ’ ಎಂದು ಹೇಳುತ್ತಿದ್ದರು. ಹೌದು, ಅಪರೂಪನೇ ಆಗಿದ್ದೆ. ಬರಬಾರದು ಅಂತಾನೇ ಉತ್ತರಕನ್ನಡ ಜಿಲ್ಲೆಯ ಕಡೆ, ಇಲ್ಲಿನ ಜನರ ಬಳಿ ಬಂದಿರಲಿಲ್ಲ. ರಾಜಕೀಯ ಬೇಡ ಎಂದು ಕುಳಿತಿದ್ದೆ. ಮುಂದಿನ ಚುನಾವಣೆಗೆ ಸ್ಪರ್ಧಿಸಲೇಬಾರದು ಎಂದು ನಿರ್ಧರಿಸಿದ್ದೆ ಎಂದು ಹೇಳಿ ಎಲ್ಲರನ್ನೂ ಚಕಿತಗೊಳಿಸಿದರು.

ಈ ಬಗ್ಗೆ ಪಕ್ಷದ ಮುಖಂಡರ ಬಳಿ ಕೂಡ ಚರ್ಚಿಸಿದ್ದೆ. ಆದರೆ ಹತ್ತು ಹಲವು ಕನಸುಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಕರೆದು, ಈ ಹುದ್ದೆಯನ್ನು ಸವಾಲಾಗಿ ನೀಡಿದ್ದಾರೆ. 'ಜವಾಬ್ದಾರಿ ನೀಡುತ್ತಿಲ್ಲ. ಸವಾಲು ನೀಡುತ್ತಿದ್ದೇನೆ. ಒಂದು ವರ್ಷದಲ್ಲಿ ಇದನ್ನು ಸಾಕಾರಗೊಳಿಸಬೇಕು. ನೀನು ಮಾಡುತ್ತೀಯ ಎಂಬ ಭರವಸೆ ನನಗೆ ಇದೆ’ ಎಂದು ಮೋದಿಯವರು ಹೇಳಿ ಅಧಿಕಾರ ನೀಡಿದರು. ಇರುವ ಈ ಒಂದು ವರ್ಷದಲ್ಲಿ ಅದನ್ನು ಸಾಧಿಸುತ್ತೇವೆ ಎಂಬ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಜವಾಬ್ದಾರಿ ತುಂಬಾ ದೊಡ್ಡದಿದೆ. ಆದರೆ ಅದನ್ನು ನಿಭಾಯಿಸಬೇಕು. ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೆಹಲಿಗೆ ಬಂದು ಮಾತನಾಡಿದ್ದರು. 'ಈಗ ಸರಿಯಾಯಿತಲ್ವಾ! ನಿನ್ನ ಕುಂಡಲಿಯಲ್ಲಿ ರಾಜಕೀಯ ಬಿಡುವ ವಿಚಾರ ಬರೆದಿಲ್ಲ. ಮಾಡು’ ಅಂದಿದ್ದರು. ಜಿಲ್ಲೆ ಹೆಮ್ಮೆ ಪಡುವಂಥ ಸಾಧನೆಯನ್ನು ಮಾಡಲು ಜಿಲ್ಲೆಯ ಜನ ಅಷ್ಟೊಂದು ಶಕ್ತಿ ನೀಡಬೇಕು’ ಎಂದು ಕೇಳಿಕೊಂಡರು.
'ಪ್ರಧಾನಿ ಮೋದಿಯವರು ಪ್ರತೀ ಭಾಷಣದಲ್ಲಿಯೂ ಕೌಶಲದ ಬಗ್ಗೆ ವಿವರಿಸುತ್ತಾರೆ. ದೇಶದ ಯುವಜನತೆಗೆ ಭವಿಷ್ಯ ಕಲ್ಪಿಸಲು ಇದನ್ನು ಮಾಡಲೇ ಬೇಕು. ದೇಶದ ಕೋಟಿ ಕೋಟಿ ಜನರ ಕನಸು ಕೌಶಲ ಅಭಿವೃದ್ಧಿ ಮಂತ್ರಾಲಯದ ಜತೆಗೆ ಹೆಣೆದುಕೊಂಡಿದೆ. ಕಳೆದ 70 ವರ್ಷದಲ್ಲಿ ದೇಶದಲ್ಲಿ ಇರುವುದು ಕೇವಲ 4,600 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ). ಅದನ್ನು ಈಗಿರುವ ಒಂದು ವರ್ಷದಲ್ಲಿ 20 ಸಾವಿರವನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ವಿವರಿಸಿದರು.
'ಜಿಲ್ಲೆಯ ಜ್ವಲಂತ ಸಮಸ್ಯೆಗಳು ಈಗಾಗಲೇ ತಾರ್ಕಿಕ ಅಂತ್ಯ ಕಂಡುಕೊಂಡಿದೆ. ಇನ್ನು ವ್ಯಾವಹಾರಿಕವಾಗಿ ನಿವಾರಣೆಯಾಗಬೇಕಿದೆ ಅಷ್ಟೇ. ಯೋಗ್ಯತೆನೇ ಬೇರೆ, ಪ್ರಮಾಣಪತ್ರಾನೇ ಬೇರೆ. ದೇಶದಲ್ಲೆಲ್ಲ ಸೋ ಕಾಲ್ಡ್ ವಿದ್ಯಾವಂತರೇ ಹೆಚ್ಚಾಗಿದ್ದಾರೆ. ಶ್ರಮವಿಲ್ಲದ ಜೀವನ ಲಾಟರಿ ಟಿಕೆಟ್ ಇದ್ದಂತೆ’ ಎಂದು ಹೇಳಿದರು.












Click it and Unblock the Notifications