Breaking: ರಾಷ್ಟ್ರಪತಿ ಚುನಾವಣೆ: ಬೆಂಗಳೂರಿಗೆ ಬಂದ ಯಶವಂತ ಸಿನ್ಹಾ
ಬೆಂಗಳೂರು, ಜೂ.2: ಎನ್‌ಡಿಎ ಹೊರತಾದ ಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಕರ್ನಾಟಕದ ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಲು ಶನಿವಾರ ಸಂಜೆ ಬೆಂಗಳೂರಿಗೆ ಬಂದಿಳಿದರು.
ಶನಿವಾರ ಬೆಳಗ್ಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದ ಯಶವಂತ ಸಿನ್ಹಾ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಭೇಟಿ ಮಾಡಿದರು. ಅಲ್ಲಿ ಪ್ರಚಾರ ಕಾರ್ಯ ಕೈಗೊಂಡ ಬಳಿಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಂ, ಕೆಪಿಸಿಸಿ ಉಪಾಧ್ಯಕ್ಷರಾದ ಅಶೋಕ್ ಪಟ್ಟಣ, ಸುಧೀಂದ್ರ ಸನ್ಮಾನಿಸಿ ಸ್ವಾಗತಿಸಿದರು. ಶನಿವಾರ ರಾತ್ರಿ ಯಶವಂತ ಸಿನ್ಹಾ ಅವರು ಹೋಟೆಲ್ ಶಾಂಗ್ರಿಲಾದಲ್ಲಿ ಉಳಿದುಕೊಳ್ಳಲಿದ್ದಾರೆ.

ಜುಲೈ 3 ಭಾನುವಾರ ಬೆಳಗ್ಗೆ 11 ಗಂಟೆಗೆ ಹೋಟೆಲ್ ಶಾಂಗ್ರಿಲಾದಲ್ಲಿಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಯಶವಂತ ಸಿನ್ಹಾ ಅವರು ಸಂಜೆ 4 ಗಂಟೆಗೆ ವಿಶೇಷ ವಿಮಾನ ಮೂಲಕ ದೆಹಲಿಗೆ ಮರಳಲಿದ್ದಾರೆ.











Click it and Unblock the Notifications