Muda: ಮುಡಾ ಮುಜುಗರ ತಪ್ಪಿಸಿಕೊಳ್ಳಲು "ಜಾತಿಗಣತಿ ವೈಟ್ನರ್" ಪ್ರಯೋಗವೇ: ಹೇಳಿದ್ದು ಯಾರು
ರಾಜ್ಯದಲ್ಲಿ ಇದೀಗ ಜಾತಿಗಣತಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದ ಹಗರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಕಾಂಗ್ರೆಸ್ ಇದೀಗ ಮತ್ತೆ ಜಾತಿ ಗಣತಿ ಅಸ್ತ್ರವನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಹೇಳಿವೆ. ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸದೆ ಜಾತಿ ಗಣತಿ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದು ಡ್ರಾಮಾರಾಮಯ್ಯನ ಜಾತಿ ಗಣತಿ ಎಂದು ಜೆಡಿಎಸ್ ಕಿಡಿಕಾರಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಮುಡಾ ಹಗರಣದಲ್ಲಿ ಮೆತ್ತಿಕೊಂಡಿರುವ ಮಸಿ ಅಳಿಸಿ ಹಾಕುವ ಉದ್ದೇಶದಿಂದ ಮುಡಾರಾಮಯ್ಯ ಅವರು ಜಾತಿಗಣತಿ ವೈಟ್ನರ್ ಅನ್ನು ಮುನ್ನಲೆಗೆ ತಂದಿದ್ದಾರೆ ಎಂದು ವ್ಯಂಗ್ಯವಾಡಿದೆ. ಅಲ್ಲದೇ ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳೇ A1 ಆರೋಪಿ, ಭ್ರಷ್ಟಾಚಾರದ ಕಳಂಕ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಿಎಂ ಕುರ್ಚಿಗೆ ಅಂಟಿಕೊಂಡಿದ್ದಾರೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ಜಾತಿಗಣತಿ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಮುಂದುವರಿದು ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲೇ ಜಾತಿಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಬಾರದು ಎಂಬ ಕೂಗು ಎದ್ದಿದೆ ಎಂದು ಸಹ ಹೇಳಿದೆ.

ರಾಜ್ಯದ ಅಭಿವೃದ್ಧಿ ಮರೆತು, ಜನಪರ ಆಡಳಿತ ನೀಡಲು ವಿಫಲವಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಜಾತಿಗಣತಿ ವಿಷಯದಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದೆ ಅಷ್ಟೇ. ಸಿಎಂ ರೇಸ್‌ನಲ್ಲಿ ಕಾಂಗ್ರೆಸ್ ನಾಯಕರಲ್ಲೇ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಮನೆಯೊಂದು ಮೂವತ್ತಾರು ಬಾಗಿಲು ಎನ್ನುವಂತಾಗಿದೆ. ಅವೈಜ್ಞಾನಿಕ ಜಾತಿಗಣತಿ ಮುನ್ನಲೆಗೆ ತರುವ ಮೂಲಕ ಭ್ರಷ್ಟಾಚಾರಗಳಿಂದ ರಕ್ಷಣೆ ಪಡೆಯಲು ಹೊರಟಿದ್ದಾರೆ. ಈ ಅವಕಾಶವಾದಿಗೆ ಜನರೇ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದೂ ಜೆಡಿಎಸ್ ಹೇಳಿದೆ. ಅಲ್ಲದೇ ಈಚೆಗೆ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳನ್ನೂ ಹೈಲೈಟ್ ಮಾಡಲಾಗಿದೆ.
ಡ್ರಾಮಾರಾಮಯ್ಯನ ಜಾತಿ ಗಣತಿ!!
— Janata Dal Secular (@JanataDal_S) October 7, 2024
ಮುಡಾ ಹಗರಣದಲ್ಲಿ ಮೆತ್ತಿಕೊಂಡಿರುವ ಮಸಿ ಅಳಿಸಿ ಹಾಕಲು ಮುಡಾರಾಮಯ್ಯ *ಜಾತಿಗಣತಿ ವೈಟ್ನರ್* ಅನ್ನು ಮುನ್ನಲೆಗೆ ತಂದಿದ್ದಾರೆ.
ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳೇ A1 ಆರೋಪಿ, ಭ್ರಷ್ಟಾಚಾರದ ಕಳಂಕ ಹೊತ್ತಿರುವ @siddaramaiah ಸಿಎಂ ಕುರ್ಚಿಗೆ ಅಂಟಿಕೊಂಡಿದ್ದು, ಜನರನ್ನು ದಾರಿ ತಪ್ಪಿಸಲು… pic.twitter.com/wGc1QQUNv6
ಕಾಂಗ್ರೆಸ್‌ನ ವಿವಿಧ ನಾಯಕರು ಹಾಗೂ ಸಚಿವರು ಹೇಳಿದ್ದರು ಎನ್ನಲಾಗಿರುವ ಹೇಳಿಕೆಗಳನ್ನು ಜೆಡಿಎಸ್ ಕೋಟ್ ಮಾಡಿದ್ದಾರೆ. ಅದರಲ್ಲಿ ಉಪ ಮುಖುಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ನನ್ನ ಸ್ವಂತ ಮನೆಗೆ ಜಾತಿ ಗಣತಿ ಮಾಡುವವರು ಬಂದಿಲ್ಲ. ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾತಿಗಣತಿ ನಡೆಯಬೇಕು ಎಂದು ಹೇಳಿರುವುದು ಇದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು, ಜಾತಿ ಗಣತಿ ವರದಿ ಸಚಿವ ಸಂಪುಟದ ಮುಂದಿಟ್ಟು ತೀರ್ಮಾನ ಎಂದು ಹೇಳಿರುವುದು ಇದೆ. ಅಲ್ಲದೇ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು, ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿಯು ಹಲವು ನ್ಯೂನ್ಯತೆಗಳಿಂದ ಕೂಡಿದೆ. ಯಾವುದೇ ಕಾರಣಕ್ಕೂ ಈಗಿನ ವರದಿಯನ್ನು ನಾನು ಒಪ್ಪುವುದಿಲ್ಲ ಎನ್ನುವುದು ಇದೆ. ಅಲ್ಲದೇ ಹರಿಪ್ರಸಾದ್ ಅವರು ಈಚೆಗೆ ನೀಡಿದ ಹೇಳಿಕೆ, ಕಾಂಗ್ರೆಸ್ ಸರ್ಕಾರ ಬಿದ್ದರೂ ಪರವಾಗಿಲ್ಲ, ಜಾತಿ ಗಣತಿ ಪ್ರಕಟಿಸಿ ಎಂದು ಹೇಳಿದ್ದಾರೆ ಎನ್ನಲಾಗಿರುವ ಹೇಳಿಕೆಗಳನ್ನು ಜೆಡಿಎಸ್ ಕೋಟ್ ಮಾಡಿದೆ.












Click it and Unblock the Notifications