ಚಿಕ್ಕಮಗಳೂರು ಪ್ರವೇಶಿಸದಂತೆ ತೊಗಾಡಿಯಾಗೆ ನಿಷೇಧ
ಚಿಕ್ಕಮಗಳೂರು, ಮಾ.9 : ಚಿಕ್ಕಮಗಳೂರಿನಲ್ಲಿ ಮಾ.10ರಂದು ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ತೊಗಾಡಿಯಾ ಭಾಷಣವನ್ನು ಪ್ರಸಾರ ಮಾಡದಂತೆ ಆಯೋಜಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ವರದಿ ಪಡೆದು ನಿರ್ಬಂಧದ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಮಾ.10ರ ಮಂಗಳವಾರ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದ್ದು, ಇದರಲ್ಲಿ ತೊಗಾಡಿಯಾ ಅವರು ಪಾಲ್ಗೊಳ್ಳಬೇಕಾಗಿತ್ತು. [ಉಡುಪಿ ಪ್ರವೇಶಿಸದಂತೆ ತೊಗಾಡಿಯಾಗೆ ನಿಷೇಧ]

ಜಿಲ್ಲಾಧಿಕಾರಿಗಳ ಆದೇಶದಂತೆ ಮಾ.9ರಿಂದ 13ರ ತನಕ ಪ್ರವೀಣ್ ತೊಗಾಡಿಯಾ ಅವರು ಚಿಕ್ಕಮಗಳೂರು ಪ್ರವೇಶಿಸುವಂತಿಲ್ಲ. ಮಂಗಳವಾರ ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಅವರ ಆಡಿಯೋ ಅಥವ ವಿಡಿಯೋ ಭಾಷಣವನ್ನು ಪ್ರಸಾರ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.[ಬೆಂಗಳೂರು ತೊಗಾಡಿಯಾ ಭಾಷಣ ಮುಖ್ಯಾಂಶ]
ವಿಎಚ್‌ಪಿ ಖಂಡನೆ : ಪ್ರವೀಣ್ ತೊಗಾಡಿಯಾ ಅವರು ಚಿಕ್ಕಮಗಳೂರು ಪ್ರವೇಶಿಸದಂತೆ ನಿರ್ಬಂಧ ಹೇರಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಹಾಸನ ವಿಎಚ್‌ಪಿ ಘಟಕ ಖಂಡಿಸಿದೆ. ಜಿಲ್ಲಾಡಳಿತದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಸಂಘಟನೆಯ ಪ್ರಮುಖ ನಾಯಕರು ಹೇಳಿದ್ದಾರೆ.
ನಿಷೇಧ ಇದೇ ಮೊದಲಲ್ಲ : ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಫೆ.9ರಂದು ಬೆಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ಅವರಿಗೆ ನಿಷೇಧ ಹೇರಲಾಗಿತ್ತು. ಮಾ.9ರಂದು ಉಡುಪಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪಾಲ್ಗೊಳ್ಳದಂತೆಯೂ ನಿಷೇಧ ವಿಧಿಸಲಾಗಿದೆ.
ಮೈಸೂರಿಗೆ ಆಗಮಿಸದಂತೆ ನಿಷೇಧ : ಅಂದಹಾಗೆ ಮಾ.11ರ ಬುಧವಾರ ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಮಾಡಲಾಗಿದ್ದು, ಮುಖ್ಯ ಭಾಷಣಕಾರರಾಗಿ ಪ್ರವೀಣ್ ತೊಗಾಡಿಯಾ ಆಗಮಿಸಬೇಕಾಗಿತ್ತು. ಆದರೆ, ನಗರ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.












Click it and Unblock the Notifications