ರೂಪ ಐಪಿಎಸ್ ವಿರುದ್ಧದ ಬೆಂಕಿ ಬಿರುಗಾಳಿ ತಣ್ಣಗಾಗಿಸಲು ಪ್ರತಾಪ್ ಯತ್ನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 17: ತಮ್ಮ ಹಾಗೂ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಅವರ ನಡುವಿನ ಫೇಸ್ ಬುಕ್ ವಾಕ್ಸಮರಕ್ಕೆ ಕೊನೆ ಹಾಡಲು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು, ಟ್ವಿಟರ್ ನಲ್ಲಿ ಪ್ರಯತ್ನಿಸಿದ್ದಾರೆ.

ರೂಪಾ ಅವರು ತಮ್ಮ ಸ್ನೇಹಿತರಾಗಿದ್ದು, ಅವರು ಉತ್ತಮ ಅಧಿಕಾರಿಯಾಗಿದ್ದಾರೆ. ಅವರ ಐಪಿಎಸ್ ಪತಿಯಂತೆ ಅವರೂ ದಕ್ಷ ಅಧಿಕಾರಿಯಾಗಿದ್ದಾರೆಂದು ಪ್ರತಾಪ್ ಸಿಂಹ ಟ್ವೀಟ್ ಮಾಡುವ ಮೂಲಕ ಶುಕ್ರವಾರ ಯಾವುದೇ ಸಕಾರಣವಿಲ್ಲದೇ ಅವರ ವಿರುದ್ಧ ಎದ್ದಿದ್ದ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

Pratap Simha v/s Roopa IPS v/s Facebook

ಈ ಮೂಲಕ ಶುಕ್ರವಾರವೇ ಅವರು ತಮ್ಮ ವಿರುದ್ಧ ಹರಿಹಾಯ್ದಿದ್ದ ಐಪಿಎಸ್ ಅಧಿಕಾರಿ ರೂಪಾ ಅವರಿಗೂ ಸೂಕ್ತ ಉತ್ತರ ನೀಡಿದ್ದಾರೆ. ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ತಮ್ಮ ಫೇಸ್ ಬುಕ್ ರೀ ಪೋಸ್ಟ್ ಹಾಗೂ ರೂಪಾ ಅವರ ಉತ್ತರವನ್ನು ಸೇರಿಸಿ ಸುದ್ದಿ ಮಾಡಿದ್ದ ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಆವೃತ್ತಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ.

ವಿವಾದ ಏಕೆ?:ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲಿ ಬಂದಿದ್ದ ಬರಹವೊಂದ ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲೇ ರೀ ಪೋಸ್ಟ್ ಮಾಡಿದಕ್ಕೆ ಗರಂ ಆಗಿದ್ದ ರೂಪಾ ಅವರು ಸುದೀರ್ಘವಾದ ಪತ್ರವನ್ನು ಬರೆದು ಫೇಸ್ ಬುಕ್ ನಲ್ಲೇ ಪೋಸ್ಟ್ ಮಾಡಿದ್ದರು.

ಆದರೆ, ಅವರು ಸುದೀರ್ಘವಾಗಿ ಉತ್ತರಿಸಿದ್ದ ಆ ಬರಹ ಅವರ ಅರಿವಿಗೇ ಬಾರದಂತೆ ಮಾಯವಾಗಿತ್ತು! ಈ ಕಾರಣಕ್ಕಾಗಿ ಫೇಸ್ ಬುಕ್ ಸಂಸ್ಥೆಯನ್ನು ಅವರು ಪ್ರಶ್ನಿಸಿದ್ದರು.[ತಂದೆಯ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡ ಗುರ್ಮೆಹರ್: ಪ್ರತಾಪ್ ಸಿಂಹ]

ಫೇಸ್ ಬುಕ್ ವಿರುದ್ಧ ಸರಣಿ ಪೋಸ್ಟಿಂಗ್ಸ್ ಗಳನ್ನು ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಹಾಗೂ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಅವರು ಫೇಸ್ ಬುಕ್ ಸಂಸ್ಥೆಯು ಜನರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ ಕಿತ್ತುಕೊಂಡಿದೆ ಎಂದು ಟೀಕಿಸಿದ್ದರು.

ಇತ್ತ, ತಮ್ಮನ್ನು ಗುರಿಯಾಗಿಸಿಕೊಂಡು ಬರೆದಿದ್ದ ಲೇಖನಕ್ಕೆ ಪ್ರತ್ಯುತ್ತರ ನೀಡಿರುವ ಸಂಸದ ಪ್ರತಾಪ್ ಸಿಂಹ, ''ರೂಪಾ ಅವರೇ, ನಾನು ಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲಿ ಬಂದಿದ್ದ ಲೇಖನವನ್ನು ಪೋಸ್ಟ್ ಮಾಡಿದ್ದೆನಷ್ಟೇ. ನಿಮಗೆ ಇರಬಹುದಾದ ಬಿಡುವಿನ ಸಮಯದಲ್ಲಿ ಆ ಲೇಖನವನ್ನು ಓದಿ'' ಎಂದು ಫೇಸ್ ಬುಕ್ ನಲ್ಲೂ, ಟ್ವಿಟರ್ ನಲ್ಲೂ ಹೇಳಿದ್ದಾರೆ. ಜತೆಗೆ, ಪಬ್ಲಿಕ್ ಟಿವಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ಲೇಖನದ ಲಿಂಕ್ ಅನ್ನೂ ಹಾಕಿದ್ದರು.

ಲೇಖನದಲ್ಲಿ ಇದ್ದಿದ್ದೇನು?: ಪಬ್ಲಿಕ್ ಟಿವಿಯ ಜಾಲತಾಣದಲ್ಲಿ ಬಂದಿದ್ದ ಈ ಲೇಖನದಲ್ಲಿ ''ಇತ್ತೀಚೆಗೆ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳ ಸೇವೆಗೆ ರಾಜ್ಯ ಸರ್ಕಾರ ಕಿಮ್ಮತ್ತು ಕೊಡುತ್ತಿಲ್ಲ. ಹಾಗಾಗಿಯೇ ಕೆಲ ದಕ್ಷ ಪೊಲೀಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರದ ಕಡೆ ಮುಖ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಲಾಗಿತ್ತು. ಲೇಖನದ ಆಶಯಕ್ಕೆ ಸಮರ್ಥನೆಗಾಗಿ ಕೆಲವು ಉದಾಹರಣೆಗಳನ್ನೂ ಕೊಡಲಾಗಿತ್ತು.

ರಾಜ್ಯದ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿಯವರು ತಮಗೆ ರಾಜ್ಯದಲ್ಲಿ ಉತ್ತಮ ಸ್ಥಾನದಲ್ಲಿ ನೇಮಕಾತಿ ಸಿಗದ ಕಾರಣ ಕೇಂದ್ರ ಸೇವೆಗೆ ತೆರಳಲು ಸಜ್ಜಾಗಿದ್ದಾರೆ. ಈ ಮೂಲಕ ರಾಜ್ಯದಿಂದ ಕೇಂದ್ರಕ್ಕೆ ತೆರಳುತ್ತಿರುವ ದಕ್ಷ ಅಧಿಕಾರಿಗಳ ಸಂಖ್ಯೆ ನಾಲ್ಕಕ್ಕೇರಿದೆ. ಪಿಯುಸಿ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಲಾಭೂರಾಮ್, ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಕೂಡ ಕೇಂದ್ರ ಸರ್ಕಾರದ ಸೇವೆಗೆ ತೆರಳಲು ಸಿದ್ಧರಾಗಿದ್ದಾರೆಂದು ಹೇಳಲಾಗಿತ್ತು.

ಒಟ್ಟಾರೆಯಾಗಿ ಈ ಲೇಖನದ ಉದ್ದೇಶ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸುವುದೇ ಆಗಿತ್ತು. ಇದನ್ನು ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಖಾತೆಯಿಂದ ಮರು ಪ್ರಕಟಣೆ (ರೀ ಪೋಸ್ಟ್) ಮಾಡಿದ್ದರು.

ಪಬ್ಲಿಕ್ ಟಿವಿಯ ಲೇಖನವನ್ನು ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಮರು ಪ್ರಕಟಿಸಿದ್ದನ್ನು ಗಂಭೀರವಾಗಿ ತೆಗೆದುಕೊಂಡ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್, ಇದಕ್ಕೆ ಉತ್ತರವಾಗಿ ಸುದೀರ್ಘವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. (ಪ್ರಾಯಶಃ ಅವರು ಪಬ್ಲಿಕ್ ಟಿವಿಯ ಲೇಖನವನ್ನು ಪ್ರತಾಪ್ ಅವರೇ ಬರೆದಿರಬೇಕು ಎಂದು ತಪ್ಪಾಗಿ ಅರ್ಥೈಸಿದರೋ ಏನೋ ಗೊತ್ತಿಲ್ಲ).

Pratap Simha v/s Roopa IPS v/s Facebook

'ಪ್ರತಾಪ್ ಸಿಂಹ ಅವರ ವೈಚಾರಿಕ ದೃಷ್ಟಿಕೋನವು ಏಕೆ ತಪ್ಪಾಗಿವೆ ಹಾಗೂ ಅವರು ಹೇಗೆ ಮಾರಕ' ಎಂಬ ತಲೆ ಬರಹದಡಿ (ಹೆಡ್ಡಿಂಗ್) ಸುದೀರ್ಘ ಲೇಖನ ಪ್ರಕಟಿಸಿದ್ದ ಅವರು, ಕೇಂದ್ರದ ಸೇವೆಗೆ ತೆರಳುತ್ತಿರುವ ಯಾವುದೇ ಐಪಿಎಸ್ ಅಧಿಕಾರಿಗಳು ಎಲ್ಲಾ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿಲ್ಲ. ಆದರೆ, ಪ್ರತಾಪ್ ಸಿಂಹ ಅವರು ಮಾತ್ರ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕೀಯ ಬೆರೆಸಲು ನಿಂತಿದ್ದಾರೆ. ಹೀಗೆ, ಇಲಾಖೆಯನ್ನು ರಾಜಕೀಯಮಯ ಆಗಿಸುವುದರಿಂದ ದೀರ್ಘಕಾಲಾವಧಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಸೇವೆಗೆ ಬರುವ ಐಪಿಎಸ್ ಅಧಿಕಾರಿಗಳು ಯಾರೂ ತಮಗೆ ಇಂಥದ್ದೇ ನೇಮಕಾತಿ ಆಗಬೇಕು, ಇಂಥದ್ದೇ ಸ್ಥಳದಲ್ಲಿ ನಾವು ಕೆಲಸ ಮಾಡಬೇಕು ಎಂಬ ಆಸೆ ಹೊತ್ತು ಬರುವುದಿಲ್ಲ. ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂಬ ಕನಸನ್ನು ಮಾತ್ರ ಇಟ್ಟುಕೊಂಡಿರುತ್ತಾರೆ. ಉತ್ತಮ ಅಧಿಕಾರಿಗಳು ಎಂಥ ಅಪ್ರಮುಖ ಹುದ್ದೆಗಳಿಗೆ ಹಾಕಿದರೂ ಅಲ್ಲೂ ಉತ್ತಮವಾಗಿಯೇ ಸೇವೆ ಸಲ್ಲಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಕಿರಣ್ ಬೇಡಿ. ತಿಹಾರ್ ಜೈಲಿನ ಅಧಿಕಾರಿಯಾಗಿ ಅವರು ಯಾವ ರೀತಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದರೆಂಬುದು ಎಲ್ಲರಿಗೂ ಗೊತ್ತಿದೆ.

ಹೀಗಿರುವಾಗ, ನಾವು ಐಪಿಎಸ್ ಅಧಿಕಾರಿಗಳು ಕೇಂದ್ರದ ಸೇವೆಗೆ ತೆರಳಲು ಸಿದ್ಧವಾದರೆ ಅದರ ಹಿಂದೆ ನಮ್ಮ ಸೇವಾನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಉದ್ದೇಶವಿರುತ್ತದೆಯೇ ಹೊರತು ನೀವು ಹೇಳಿದ ಯಾವುದೇ ಉದ್ದೇಶವೂ (ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ) ಇರುವುದಿಲ್ಲ. ಹಾಗಾಗಿ, ಸೋನಿಯಾ ನಾರಂಗ್ ಆಗಿರಲಿ, ಮಧುಕರ್ ಶೆಟ್ಟಿಯಾಗಿರಲೀ... ಇವರೆಲ್ಲರೂ ಕೇಂದ್ರದತ್ತ ಮುಖ ಮಾಡಿದ್ದಾರೆಂದರೆ ಅವರಿಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನವಿದೆ ಎಂದರ್ಥವಲ್ಲ ಎಂದು ಲೇಖನದಲ್ಲಿ ರೂಪಾ ಅವರು ವಿವರಿಸಿದ್ದರು.

Pratap Simha v/s Roopa IPS v/s Facebook

ಅಲ್ಲದೆ, ತಮ್ಮ ಮಾತುಗಳನ್ನು ಮುಂದುವರಿಸಿ, ಯಾವುದೇ ಪ್ರಕರಣವನ್ನು ಬೇಧಿಸಿದಾಗ ಅದರ ಹಿಂದೆ ಹಿರಿಯ ಅಧಿಕಾರಿಗಳ ಶ್ರಮ ಮಾತ್ರವೇ ಇರುವುದಿಲ್ಲ, ಬದಲಿಗೆ, ಸಾಮಾನ್ಯ ಪೇದೆಯಿಂದ ಹಿಡಿದು ನಿರೀಕ್ಷಕರು, ಉಪ ನಿರೀಕ್ಷಕರು, ಡಿವೈ ಎಸ್ ಪಿಗಳದ್ದು.... ಹೀಗೆೊಂದು ಪಟ್ಟಿಯೇ ಇರುತ್ತದೆ. ಪ್ರಕರಣ ಬೇಧಿಸಿದಾಗ ಬರುವ ಪ್ರಶಂಸೆ ಈ ಎಲ್ಲರಿಗೂ ಸಲ್ಲಬೇಕಾದ್ದು ನ್ಯಾಯ ಸಮ್ಮತ. ಆ ಇಡೀ ಯಶಸ್ಸನ್ನು ಯಾರೋ ಒಬ್ಬ ಹಿರಿಯ ಅಧಿಕಾರಿಗಳ ತಲೆಗೆ ಕಟ್ಟಿ ಅವರನ್ನು ಹೀರೋಗಳನ್ನಾಗಿಸುವುದು ಸರಿಯಲ್ಲ ಎಂದೂ ರೂಪಾ ಹೇಳಿದ್ದರು.

ಇಷ್ಟೆಲ್ಲಾ ವಿವರಣೆ, ಸ್ಪಷ್ಟನೆ ನೀಡಿದ್ದ ಅವರ ಲೇಖನ ಇದೀಗ ಇದ್ದಕ್ಕಿದ್ದಂತೆ ಮಾಯವಾಗಿದೆ. ಅತ್ತ, ಪ್ರತಾಪ್ ಸಿಂಹ್ ಅವರು, ತಾವು ಪಬ್ಲಿಕ್ ಟಿವಿಯ ಲೇಖನವನ್ನಷ್ಟೇ ರೀ ಪೋಸ್ಟ್ ಮಾಡಿದ್ದೆ. ಬೇಕಾದರೆ ಓದಿಕೊಳ್ಳಿ ಎಂದು ರೂಪಾ ಅವರಿಗೆ ಸಮಜಾಯಿಷಿ ಹೇಳಿದ್ದಾರಲ್ಲದೇ, ಆ ಲೇಖನದ ಲಿಂಕ್ ಅನ್ನೂ ಪೋಸ್ಟ್ ಮಾಡಿದ್ದಾರೆ.

ಆದರೆ, ಪ್ರತಾಪ್ ಅವರ ಈ ಉತ್ತರಕ್ಕೆ ರೂಪಾ ಸಮಾಧಾನಗೊಂಡಿಲ್ಲ ಎಂದೆನಿಸುತ್ತದೆ. ಅವರು ಪ್ರತಾಪ್ ವಿರುದ್ಧದ ವಾಕ್ಸಮರ ಕೈಬಿಟ್ಟು ಫೇಸ್ ಬುಕ್ ವಿರುದ್ಧ ವಾಕ್ಸಮರಕ್ಕಿಳಿದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಫೇಸ್ ಬುಕ್ ಸಂಸ್ಥೆಯ ವಿರುದ್ಧ ಹರಿಹಾಯ್ದಿರುವ ಅವರು, ಫೇಸ್ ಬುಕ್ ಸಂಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಫೇಸ್ ಬುಕ್ ಸಂಸ್ಥೆಯು ಜನರಿಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸುವ ವೇದಿಕೆಯನ್ನು ನೀಡಿದೆ. ಆದರೆ, ಅದರ ಜತೆಯಲ್ಲೇ ಪೋಸ್ಟಿಂಗ್ ಗಳನ್ನು ಹೇಳದೇ ಕೇಳದೇ ಕಿತ್ತುಹಾಕುವ ಮೂಲಕ ನಮ್ಮ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಟೀಕಿಸಿದ್ದಾರೆ.

ಅತ್ತ, ಪ್ರತಾಪ್ ಸಿಂಹ ಕೂಡ ರೂಪಾ ಅವರಿಗೆ ಲೇಖನ ಓದಿ ಎಂದು ಹೇಳುವ ಮೂಲಕ, ರೂಪಾ ನೀಡಿರುವ ಸ್ಪಷ್ಟನೆಯನ್ನು ಪ್ರಕಟಿಸಿರುವ ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಆವೃತ್ತಿಯನ್ನು ಈ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru BJP MP Pratap Simha and IPS officer Roopa Moudgil on a flame war over social media posts regarding Sonia Narang, Madhukar Shetty, Labu Ram and Koushalendra Kumar, all IPS officers opting a shift from Karnataka to Central government Service.
Please Wait while comments are loading...