Congress Made Allegation: ಐಟಿ, ಇಡಿ ದಾಳಿ ನಡೆಸುವುದಾಗಿ ಜಗದೀಶ್ ಶೆಟ್ಟರ್‌ಗೆ ಬೆದರಿಕೆ ಹಾಕಿದ ಪ್ರಹ್ಲಾದ್ ಜೋಶಿ:
ಬೆಂಗಳೂರು, ಏಪ್ರಿಲ್ 19: ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದರೆ ಐಟಿ ಮತ್ತು ಇಡಿ ದಾಳಿ ನಡೆಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಬಾಬು, 'ಜಗದೀಶ್ ಶೆಟ್ಟರ್ ಕರ್ನಾಟಕ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ಶೆಟ್ಟರ್ ಅವರಿಗೆ ಅವಮಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಮತ್ತೆ ಬಿಜೆಪಿಯಲ್ಲಿ ಉಳಿಯುವಂತೆ ಮನವೊಲಿಸುವ ನೆಪದಲ್ಲಿ ಜೋಶಿ ಅವರು ಪಕ್ಷ ಬಿಟ್ಟರೆ ಐಟಿ, ಇಡಿ ದಾಳಿ ನಡೆಸುವುದಾಗಿ ಶೆಟ್ಟರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

'ಬಿಜೆಪಿ ಪ್ರಹ್ಲಾದ್ ಜೋಷಿ ಅವರನ್ನು ಶೆಟ್ಟರ್ ಅವರ ಮನೆಗೆ ಕಳುಹಿಸಿ ಐಟಿ, ಇಡಿ, ಸಿಬಿಐಗಳ ಹೆಸರಿನಲ್ಲಿ ಬೆದರಿಸುವ ಕೆಲಸ ಮಾಡಿದೆ. ಒಬ್ಬ ಹಿರಿಯ ರಾಜಕಾರಣಿಗೆ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿಯುವ ಪ್ರಯತ್ನ. ಪ್ರಹ್ಲಾದ್ ಜೋಷಿ ಅವರು ಕೂಡಲೇ ಶೆಟ್ಟರ್ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿ ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಬಾಬು, ಕೇಂದ್ರ ಸಚಿವ ಸ್ಥಾನಕ್ಕೆ ಜೋಶಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಆರು ಬಾರಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ತಮಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನಾ ) ಬಿಎಲ್ ಸಂತೋಷ್ ಕಾರಣ ಎಂದು ಆರೋಪಿಸಿದ್ದಾರೆ.
ಮೀಸಲಾತಿ: ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ
ಇದೇ ವೇಳೆ ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಅವರು ಕರ್ನಾಟಕದಲ್ಲಿ ಮೀಸಲಾತಿ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಪರಿಷ್ಕೃತ ಮೀಸಲಾತಿ ಮ್ಯಾಟ್ರಿಕ್ಸ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ಕರ್ನಾಟಕ ಸರ್ಕಾರ ಮಂಗಳವಾರ ಹೆಚ್ಚಿನ ಸಮಯವನ್ನು ಕೋರಿದೆ ಎಂದು ಅವರು ಆರೋಪಿಸಿದರು. ಸರ್ಕಾರ ಈ ಅಫಿಡವಿಟ್ ಸಲ್ಲಿಸದ ಹೊರತು, ಇತ್ತೀಚೆಗೆ ಘೋಷಿಸಿದ ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಜಾರಿಗೆ ತರುವ ಉದ್ದೇಶವಿಲ್ಲದೆ ಸರ್ಕಾರ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.












Click it and Unblock the Notifications