NDA: ಪ್ರಧಾನಿ ಮೋದಿ ಸಂಪುಟದಲ್ಲಿ ಕರ್ನಾಟಕದ ಈ ಮೂವರಿಗೆ ನಿರೀಕ್ಷಿತ ಖಾತೆ ಫಿಕ್ಸ್
ಬೆಂಗಳೂರು, ಜೂನ್ 06: ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಅತ್ಯಧಿಕ ಸ್ಥಾನ (292) ಗಳಿಸಿದೆ. ಇದಕ್ಕೆ ಕರ್ನಾಟಕದ ಕೊಡುಗೆಯೂ ಇದೆ. ಈ ಪೈಕಿ ಕರ್ನಾಟಕದ ಮೂವರು ಪ್ರಮುಖರಿಗೆ ಪ್ರಧಾನಿ ಮೋದಿ ಕ್ಯಾಬಿನೆಟ್‌ನಲ್ಲಿ ಕೇಂದ್ರ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.
ಚುನಾವಣೆಯಲ್ಲಿ ಸಂಸತ್‌ಗೆ ಆಯ್ಕೆಯಾದ ಜಯದೇವ ಆಸ್ಪತ್ರೆಯ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್, ಜೆಡಿಎಸ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಧಾರವಾಡದ ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವ ಸಂಪುಟದ ಭಾಗವಾಗಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್-ಒಕ್ಕಲಿಗರ ಪ್ರಾಬಲ್ಯ ಇರುವುದನ್ನು ಕಂಡು ಸೂಕ್ತ ತಂತ್ರ ಹೆಣೆದ ಬಿಜೆಪಿಯು ಆ ಸ್ಥಾನವನ್ನು ಗೆಲ್ಲಲು ಸೂಕ್ತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. ಅಂದುಕೊಂಡಂತೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಹಿಮ್ಮೆಟ್ಟಿಸಿದರು. ಈ ಮೂಲಕ ಕಾಂಗ್ರೆಸ್ ಹಿಡಿತವನ್ನು ಕಸಿದು ಕಮಲ ತನ್ನ ಮುಡಿಗೇರಿಸಿಕೊಂಡಿತು.
ಕೇಂದ್ರ ಆರೋಗ್ಯ ಸಚಿವ ಸ್ಥಾನ?
ಈ ವಿಜಯಕ್ಕೆ ಕಾರಣವಾದ ಡಾ.ಸಿ.ಎನ್ ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಬಂದವರು. ಹೀಗಾಗಿ ಅವರಿಗೆ ಕೇಂದ್ರ ಸಂಪುಟದಲ್ಲಿ ಆರೋಗ್ಯ ಖಾತೆ ನೀಡುವ ಚಿಂತನೆ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಅವರಿಗೆ ಈ ಸ್ಥಾನ ದೊರೆತದಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಆಲೋಚನೆಗಳು ಬರಲಿವೆ. ಈ ಕ್ಷೇತ್ರದಲ್ಲಿ ಬಿಜೆಪಿ ಸಾಧನೆ ಮುಗಿಲೆತ್ತರಕ್ಕೆ ಅವರು ಕೊಂಡೊಯ್ಯಬಹುದು ಎಂದು ವರಿಷ್ಠರು ಅಂದಾಜಿಸಿದ್ದಾರೆ.

ಕೇಂದ್ರ ಆರೋಗ್ಯ ಸ್ಥಾನ ಸಿಗದಿದ್ದಲ್ಲಿ, ಅವರಿಗೆ ಇದೇ ಕೇಂದ್ರದ ಕರ್ನಾಟಕ ರಾಜ್ಯ ಖಾತೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.
ಕೃಷಿ ಸಚಿವ ಸ್ಥಾನಕ್ಕೆ ಎಚ್‌ಡಿಕೆ ಪಟ್ಟು
ಇನ್ನೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಈ ಭಾರಿ ಮಂಡ್ಯದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಕಾಲಿಡದಂತೆ ಮಾಡಿ, ಆ ಸ್ಥಾನವನ್ನು ಎನ್‌ಡಿಗೆ ಸಿಗುವಂತೆ ಮಾಡಿದ್ದಾರೆ. ಹೀಗಾಗಿ ಅವರು ಕೃಷಿ ಖಾತೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಅವರು ಬೇಡಿಕೆ ಇಟ್ಟಿದ್ದಾರೆ ಎಂಬುದು ಬಹಿರಂಗವಾಗಿದೆ.
ತಮಗೆ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದೆ. ಹೀಗಾಗಿ ಕೃಷಿ ಖಾತೆ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇದೇ ಖಾತೆಗೆ ಬಿಹಾರದ ನಿತೀಶ್ ಕುಮಾರ ಸಹ ಬೇಡಿಕೆ ಇಟ್ಟಿದ್ದಾರೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರು ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಮಣ್ಣಿನ ಮಗ ಅಂತಲೇ ಬಿರುದು ಪಡೆದವರು.
ಕೃಷಿ ಮೇಲೆ ಅಪಾರ ಕಾಳಜಿ, ದೂರದೃಷ್ಟಿ ಇರುವ ಅವರು ಕೃಷಿ ಖಾತೆ ಕೇಳಿದ್ದಾರೆ. ಇದರೊಂದಿಗೆ ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ತಿಳುವಳಿಕೆ, ಜ್ಞಾನ ಇರುವ ಸಿ.ಎನ್ ಮಂಜುನಾಥ್ ಅವರಿಗೆ ಆರೋಗ್ಯ ಖಾತೆ ನೀಡುವಂತೆಯೂ ಅವರ ಪರ ಎಚ್‌ಡಿಕೆ ಬ್ಯಾಟ್ ಬೀಸಿದ್ದಾರೆ.
ಕೇಂದ್ರ ರೈಲ್ವೆ ರಾಜ್ಯ ಖಾತೆ ಜೋಶಿಗೆ?
ಇನ್ನೂ ಧಾರವಾಡದಲ್ಲಿ ಐದು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಶಿಯವರಿಗೆ ಈಗಾಗಲೇ ಕೇಂದ್ರ ಸಚಿವ ಸ್ಥಾನ ನಿಭಾಯಿಸಿರುವ ಅನುಭವ ಇದೆ. ಕೇಂದ್ರ ಕಲ್ಲಿದ್ದಲು ಖಾತೆ ಸಂಸದೀಯ ವ್ಯವಹಾರಗಳ ಖಾತೆಯನ್ನು ಅವರು ಕಳೆ ಭಾರಿ ನಿಭಾಯಿಸಿದ್ದರು. ಈ ಭಾರಿಯು ಅವರಿಗೆ ಇದೇ ಸ್ಥಾನ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪ್ರಹ್ಲಾದ್ ಜೋಶಿಯವರಿಗೆ ಬೇರೆ ಮಂತ್ರಿ ಸ್ಥಾನ ಧಕ್ಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಕೇಂದ್ರ ರೈಲ್ವೆಯ ರಾಜ್ಯ ಖಾತೆ ಸಚಿವ ಸ್ಥಾನವನ್ನು ದಿ. ಸುರೇಶ್ ಅಂಗಡಿಯವರಿಗೆ ನೀಡಲಾಗಿತ್ತು. ಅವರು ನಿಧನಾನಂತರ ಆ ಖಾತೆಯನ್ನು ಬೇರೆಯವರಿಗೆ ನೀಡಲಾಯಿತು. ಇದೀಗ ಈ ಸ್ಥಾನ ಜೋಶಿಯವರಿಗೆ ಲಭಿಸುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಒಟ್ಟಾರೆಯಾಗಿ ನಿರೀಕ್ಷಿತ ಸೀಟುಗಳು ಎನ್‌ಡಿಗೆ ಲಭಿಸದ ಕಾರಣ ವಿವಿಧ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಕೇಂದ್ರ ಸಚಿವ ಸಂಪುಟ ಹಂಚಿಕೆಯು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಗ್ಗಂಟಾಗುವ ಲಕ್ಷಣಗಳು ಕಂಡು ಬರುತ್ತದೆ.
ಜೂನ್ 09ರಂದು ಮೋದಿ ಪದಗ್ರಹಣ: ಖಾತೆ ಹಂಚಿಕೆ ಸವಾಲು
ಬಿಜೆಪಿ ಬಳಿ ಪ್ರಮುಖ ಖಾತೆಗಳು ಇವೆ. ಎಲ್ಲ ಖಾತೆಗಳ ಪೈಕಿ ಬಿಜೆಪಿ ಕೆಲ ಅಭ್ಯರ್ಥಿಗಳಿಗೆ ಮಂತ್ರಿಗಿರಿ ಭಾಗ್ಯ ಸಿಗಲಿದೆ. ಉಳಿದಂತೆ ಎನ್‌ಡಿಎ ಪಾಲುದಾರರ ಪಕ್ಷಗಳ ಬೇಡಿಕೆ ಮೇರೆಗೆ ಒಂದಷ್ಟು ಮಂತ್ರಿ ಸ್ಥಾನಗಳು ಹರಿದು ಹಂಚಿಹೋಗಲಿವೆ. ಸದ್ಯಕ್ಕೆ ಯಾರಿಗೆಲ್ಲ ಮಂತ್ರಿ ಪಟ್ಟ ಕೊಡಬೇಕು?, ಅಸಮಾಧಾನ ಹೊಗೆಯಾಡದಂತೆ ಖಾತೆ ಹಂಚಿಕೆಯೇ ಸವಾಲಾಗಿದೆ. ನಾಡಿದ್ದು ಜೂನ್ 09ರಂದು ಪ್ರಧಾನಿ ಮೋದಿಯವರು ಮತ್ತೆ ಅಧಿಕಾರ ಸ್ವೀಕರಿಸಲಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ
ಇನ್ನೂ ಕೇಂದ್ರ ಕೃಷಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಜೆಡಿಎಸ್ ಎಚ್‌ಡಿ ಕುಮಾರಸ್ವಾಮಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ನನ್ನಿಂದ ಕೇಂದ್ರ ಸರ್ಕಾರಕ್ಕೆ ಯಾವ ಮುಜುಗರ ಆಗಿಲ್ಲ, ಮೈತ್ರಿ ಧರ್ಮ ಪಾಲನೆ ಆಗಿದೆ. ಮೊದಲ ಈ ನೆಲದ ನೀರಾವರಿ ಸಮಸ್ಯೆಗಳು, ಅದರಕ್ಕೆ ಪರಿಹಾರ ಕುರಿತು ನ್ಯಾಯ ಸಿಗಬೇಕು. ಇದು ನನ್ನ ಉದ್ದೇಶ.
ನಾನು ದೆಹಲಿಗೆ ಹೋಗಿ ಮಂತ್ರಿ ಸ್ಥಾನ ಪಡೆಯುವುದಕ್ಕಿಂತ ಮೊದಲು ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಎಲ್ಲ ಸಂಸದರ ಜೊತೆಗೂಡಿ ಒಟ್ಟಾಗಿ ರಾಜ್ಯಕ್ಕಾಗಿ ಕೆಲಸ ಮಾಡುವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications