ದಂತ ಚೋರರ ಮೇಲಿನ ಕೇಸು ಕ್ಲೋಸ್‌ಗೆ ಸಂಸದ ಪ್ರಜ್ವಲ್ ರೇವಣ್ಣ ಪ್ರಭಾವ?
ಬೆಂಗಳೂರು, ಜು 19: ಆನೆ ಕೊಂದು ದಂತಗಳನ್ನು ಮಾರಾಟ ಮಾಡಿದ್ದ ದಂತಚೋರರ ಮೇಲಿನ ಕೇಸುಗಳನ್ನು ಮುಚ್ಚಿ ಹಾಕಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬಳಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
ದಂತಚೋರರ ವಿರುದ್ಧ ದಾಖಲಾಗಿದ್ದ ಕೇಸನ್ನು ಮುಚ್ಚಿ ಹಾಕಲು ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಅಧಿಕಾರ ದುರ್ಬಳಕೆ ಮಾಡಕೊಂಡಿದ್ದು, ಈ ಕುರಿತು ತನಿಖೆ ನಡೆಸುವಂತೆ ಕೋರಿ ಸಂಸದೆ ಮೇನಕಾ ಸಂಜಯ್ ಗಾಂಧಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೂರು ನೀಡಿದ್ದಾರೆ. ದೂರಿನ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.
ದಂತಚೋರರ ವಿರುದ್ಧ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಾಸನ ವಲಯ ಅರಣ್ಯ ವಿಭಾಗಕ್ಕೆ ವರ್ಗವಣೆ ಮಾಡಲು ಪ್ರಜ್ವಲ್ ರೇವಣ್ಣ ಯತ್ನಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಪ್ರಕರಣ ವರ್ಗಾವಣೆಗೆ ನಿರಾಕರಿಸಿದ ಬಳಿಕ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬೀರಿ ಹಾಸನ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಕೇಸು ದಾಖಲಿಸಿ ರದ್ದು ಪಡಿಸಿದ್ದಾರೆ. ತಮ್ಮ ಪಕ್ಷದ ಬೆಂಬಲಿಗರನ್ನು ರಕ್ಷಣೆ ಮಾಡಿದ್ದಾರೆ ಎಂದು ಮೇನಕಾ ಸಂಜಯ್ ಗಾಂಧಿ ಆರೋಪಿಸಿದ್ದಾರೆ.

ಏನಿದು ಪ್ರಕರಣ?: ಆನೆಯನ್ನು ಕೊಂದು ದಂತಗಳನ್ನು ಪಡೆದಿದ್ದ ದಂತಚೋರರು ಅವನ್ನು ಮಾರಾಟ ಮಾಡಲು ಯತ್ನಿಸಿದ್ದರು. ಮೃತ ಆನೆಯನ್ನು ಗುಂಡಿ ತೆಗೆದು ಜೆಸಿಬಿ ನೆರವಿನಿಂದ ಮುಚ್ಚಿ ಹಾಕಿದ್ದರು. ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವನ್ಯ ಜೀವಿ ಸಂರಕ್ಷಕ ಶರತ್ ನೆರವಿನಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಅರೋಪಿಗಳು ಕೊಂದ ಆನೆಯನ್ನು ಮುಚ್ಚಿ ಹಾಕಿದ್ದನ್ನು ತಪ್ಪೊಪ್ಪಿಕೊಂಡಿದ್ದರು. ಈ ಕುರಿತು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಹಂತದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬೀರಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸನ್ನು ಹಾಸನ ಅರಣ್ಯ ಅಧಿಕಾರಿಗಳಿಗೆ ವರ್ಗಾವಣೆ ಮಾಡುವಂತೆ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ರೇವಣ್ಣ ಅವರ ಒತ್ತಡಕ್ಕೆ ಮಣಿಯದೇ ಬೆಂಗಳೂರು ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ಪ್ರಕರಣದ ವರ್ಗಾವಣೆಗೆ ನಿರಾಕರಿಸಿದ್ದರು.
ಆ ಬಳಿಕ ಹಾಸನ ಅರಣ್ಯ ಅಧಿಕಾರಿಗಳು ಇದೇ ವಿಚಾರವಾಗಿ ಪ್ರತ್ಯೇಕ ಕೇಸು ದಾಖಲಿಸಿ ತಲೆ ಮರೆಸಿಕೊಂಡಿದ್ದ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳ ರಕ್ಷಣೆಗೆ ನಿಂತ ಹಾಸನ ಅರಣ್ಯ ಅಧಿಕಾರಿಗಳ ವಿರುದ್ಧ ಜಾಗೃತ ದಳಕ್ಕೆ ದೂರು ನೀಡಲಾಗಿತ್ತು.

ಇದೇ ಹಂತದಲ್ಲಿ ಡಿಸಿಪಿ ಹರೀಶ್ ಪಾಂಡೆ ವರ್ಗಾವಣೆಯಾದ ಬಳಿಕ ಪ್ರಕರಣವನ್ನು ಹಾಸನ ಅರಣ್ಯ ಅಧಿಕಾರಿಗಳು ತಮ್ಮ ಪ್ರಭಾವ ಬೀರಿ ಕೇಸನ್ನು ಹಾಸನ ಅರಣ್ಯ ವಿಭಾಗಕ್ಕೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿಗಳ ಪರ ವಕೀಲರು ಒಂದೇ ಆರೋಪಕ್ಕೆ ಎರಡು ಕೇಸು ದಾಖಲಿಸಿದ ಮಾನದಂಡ ಇಟ್ಟುಕೊಂಡು ಇಡೀ ಪ್ರಕರಣವನ್ನು ನ್ಯಾಯಾಲಯದಲ್ಲಿ ರದ್ದು ಮಾಡಲು ಮುಂದಾಗಿದ್ದಾರೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಎಂಬ ಕಾರಣಕ್ಕೆ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬೀರಿ ಆನೆದಂತ ಚೋರರ ರಕ್ಷಣೆಗೆ ಮುಂದಾಗಿದ್ದಾರೆ. ಹಾಸನ ಅರಣ್ಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಕೋರಿ ಮೇನಕಾ ಗಾಂಧಿ ಸಿಎಂ ಬೊಮ್ಮಾಯಿಗೆ ಕೊಟ್ಟಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications