ಮತ್ತೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಹಾಕಿದ ಪ್ರಜ್ವಲ್ ರೇವಣ್ಣ
ಬೆಂಗಳೂರು, ಸೆಪ್ಟೆಂಬರ್ 05; ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ತಮ್ಮ ಆಯ್ಕೆ ಅನೂರ್ಜಿತಗೊಳಿಸಿರುವ ಹೈಕೋರ್ಟ್ ಆದೇಶದ ಸಂಬಂಧ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವರೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದಾರೆ.

ಪ್ರಜ್ವಲ್ ರೇವಣ್ಣ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ. ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ನ್ಯಾಯಮೂರ್ತಿ ಕೆ . ನಟರಾಜನ್ ಅವರ ಪೀಠ, ಸೆಪ್ಟೆಂಬರ್ 1ರಂದು ಆದೇಶಿಸಿತ್ತು. ಈ ಆದೇಶದ ಪ್ರತಿಯನ್ನು ಸಂಸತ್ ಸ್ಪೀಕರ್‌ಗೆ ಕಳುಹಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿತ್ತು.
ಮೇಲ್ಮನವಿ ಸಲ್ಲಿಕೆಗೆ ಸಮಯ: ಕರ್ನಾಟಕ ಹೈಕೋರ್ಟ್ ಆದೇಶ ರದ್ದು ಕೋರಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ತೀರ್ಮಾನ ಮಾಡಿದ್ದಾರೆ. ಆದರೆ, ಸುಪ್ರಿಂಕೋರ್ಟ್ ಮೇಲ್ಮನವಿ ಸಲ್ಲಿಸುವುದರ ಒಳಗೆ ಸಂಸತ್ ಸ್ಪೀಕರ್ ಅವರು ಲೋಕಸಭೆ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದರೆ ಕಷ್ಟವಾದೀತು ಎಂಬ ಆತಂಕ ಸಹ ಅವರನ್ನು ಕಾಡುತ್ತಿದೆ.
ಇದರಿಂದಾಗಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಸೆಪ್ಟೆಂಬರ್ 1 ರಂದು ನೀಡಿರುವ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಸೋಮವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾ ಅಕ್ರಮ ಸಾಬೀತು: 2019 ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣ ಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಹಲವು ಅಕ್ರಮ ನಡೆಸಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ. ಮಂಜು ಹಾಗೂ ಬಿಜೆಪಿ ಮುಖಂಡರೂ ಆದ ವಕೀಲ ದೇವರಾಜೇಗೌಡ ಹೈಕೋರ್ಟ್‌ಗೆ 2019ರಲ್ಲಿ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದ್ದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ತೀರ್ಮಾನಿಸಿತು. ಜತೆಗೆ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಇದೇ ವೇಳೆ ಚುನಾವಣಾ ಅಕ್ರಮದಲ್ಲಿ ಶಾಮೀಲಾಗಿರುವ ಕಾರಣಕ್ಕೆ ಪ್ರಜ್ವಲ್ ಅವರ ತಂದೆ ಎಚ್. ಡಿ. ರೇವಣ್ಣ ಮತ್ತು ಸಹೋದರ ಸೂರಜ್ ರೇವಣ್ಣಗೆ ನೋಟಿಸ್ ಜಾರಿಗೊಳಿಸಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಗೆದ್ದಿರುವುದ ಕೇವಲ ಒಂದು ಸೀಟು. ಹಾಸನದಲ್ಲಿ ಮಾತ್ರ ಪ್ರಜ್ವಲ್ ರೇವಣ್ಣ ಗೆಲುವು ಕಂಡಿದ್ದರು. ಆದರೆ ಹೈಕೋರ್ಟ್ ಆದೇಶದಿಂದ ಅವರ ಸಂಸದ ಸ್ಥಾನ ಸಹ ಅಸಿಂಧುಗೊಂಡಿದೆ.












Click it and Unblock the Notifications