ವಿಬಿಜಿ ರಾಮ್ ಜಿ: ಪಾರದರ್ಶಕ ಯೋಜನೆ ಜಾರಿ ಸಹಿಸದೇ ಸುಳ್ಳು ಪ್ರಸಾರ: ಪ್ರಹ್ಲಾದ್ ಜೋಶಿ ಖಂಡನೆ
ಹುಬ್ಬಳ್ಳಿ : ವಿಬಿಜಿ ರಾಮ್ ಜಿ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಾ ರಾಜ್ಯದ ಕೂಲಿ ಕಾರ್ಮಿಕರ ದಾರಿ ತಪ್ಪಿಸುತ್ತಿದೆ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗುವುದನ್ನು ಸಹಿಸದ ಪ್ರತಿಪಕ್ಷಗಳು ಈ ಯೋಜನೆಯ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್‌ನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNAREGA) ಹೆಸರನ್ನು ಬದಲಾಯಿಸಿ, ವಿಬಿಜಿ ರಾಮ್ ಜಿ (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಎಂದು ಹೆಸರಿಸಿದೆ. ಅದಕ್ಕೆ ಕೇಂದ್ರ ವಿಪಕ್ಷಗಳು ಹಾಗೂ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ವಿರೋಧಿಸಿತ್ತು. ಇದೀಗ ಇದೇ ಯೋಜನೆಯ ಬಗ್ಗೆ ತಪ್ಪು ಮಾಡಿ ಹೇಳಿ ಕಾರ್ಮಿಕರ ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.

ನರೇಗಾ ಯೋಜನೆಯನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಎಂದು ಪರಿವರ್ತನೆಗೊಳಿಸಲಾಗಿದೆ. ಇದರಲ್ಲಿಯೂ ಪ್ರತಿ ಪಕ್ಷದವರು ರಾಜಕೀಯ ಮಾಡುತ್ತಿರುವುದು ಅವರ ಮೌಢ್ಯವನ್ನು ತೋರಿಸುತ್ತದೆ. ನರೇಗಾ ಯೋಜನೆಯಲ್ಲಿ ಪ್ರತಿವರ್ಷ ನೂರು ದಿನಗಳ ಉದ್ಯೋಗ ಖಾತರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗವಕಾಶದ ಭರವಸೆಯೊಂದಿಗೆ ಆದಾಯದ ಭದ್ರತೆಯು ಹೆಚ್ಚಾಗಲಿದೆ. ಪ್ರತಿದಿನ ಕೂಲಿ 370 ರೂಪಾಯಿ ಎಂದು ಅವರು ವಿವರಿಸಿದರು.
ಕೃಷಿ ವಿರೋಧಿ ನೀತಿ ಅನುಸರಣೆ
ಮುಂದೆಯೂ ಆಯಾ ಗ್ರಾಮ ಪಂಚಾಯತಿಗಳೇ ಯೋಜನೆಯ ಕೇಂದ್ರವಾಗಿರಲಿದೆ. ಆದರೆ ಇದನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾಂಗ್ರೆಸ್ ಮೂಡಿಸುತ್ತಿದೆ ಎಂದು ಕಿಡಿ ಕಾರಿದರು. ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲ ಮಾಡಿಕೊಡಲು ವರ್ಷದಲ್ಲಿ 60 ದಿನಗಳ ಬಿಡುವು ನೀಡಲಾಗಿದೆ. ಇಂತಹ ರೈತ ಸ್ನೇಹಿ ನಿಯಮಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜೋಶಿ ದೂರಿದರು.
ಭ್ರಷ್ಟಾಚಾರಕ್ಕೆ ಕಡಿವಾಣ
ಹಿಂದೆ ಕೂಲಿಕಾರರ ಹೆಸರು ಹೇಳಿ ಮನರೇಗಾ ಯೋಜನೆ ದುರ್ಬಳಕೆ ಮಾಡಲಾಗುತ್ತಿತ್ತು. ಅದಕ್ಕಾಗಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಕೆ ಕಡ್ಡಾಯ ಮಾಡಲಾಗಿದೆ. ಆಯಾ ರಾಜ್ಯ ಸರ್ಕಾರಗಳು ಅನಗತ್ಯ ವೆಚ್ಚ ಕಡಿಮೆ ಮಾಡಲು ಭ್ರಷ್ಟಾಚಾರಕ್ಕೆ ಕಡಿವಾಣ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ಕಾಲಾನುಕಾಲಕ್ಕೆ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮ ತರುವ ನಿಟ್ಟಿನಲ್ಲಿ ಕೆಲ ಯೋಜನೆಗಳಲ್ಲಿ ಅಗತ್ಯ ಪರಿಷ್ಕರಣೆ ತರುವುದು ಅವಶ್ಯವಾಗಿರುತ್ತದೆ. ಈ ಬದಲಾವಣೆಯ ಮುಖ್ಯ ಉದ್ದೇಶ ಜನರ ಜೀವನೋಪಾಯವನ್ನು ಬಲಪಡಿಸುವ ಕಲ್ಯಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇವೆರಡನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ. ಏಕೆಂದರೆ ಇವೆರೆಡೂ ಒಂದಕ್ಕೊಂದು ಪೂರಕ ಮತ್ತು ಅನಿವಾರ್ಯ ಎಂದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (MGNAREGA) ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿದೆ. ಆದರೆ ಇದು ದಾಖಲೆಯಿಲ್ಲದ ಗುರಿ ಆಧಾರಿತ ಯೋಜನೆ ಆಗಿ ಪರಿವರ್ತಿತವಾಗಿತ್ತು. ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಇದ್ದ ಅತೀ ದೊಡ್ಡ ಸಮಸ್ಯೆ ಎಂದರೆ ಸೂಕ್ತ ಸಮಯದಲ್ಲಿ ಕೂಲಿ ಮತ್ತು ಸಾಮಗ್ರಿ ವೆಚ್ಚ ಪಾವತಿ (Wage & material payment) ಆಗದಿರುವುದು. ಹೊಸ ಪರಿಷ್ಕೃತ ಯೋಜನೆಯಡಿ ಕೇಂದ್ರೀಕೃತ ಪಾವತಿ ವ್ಯವಸ್ಥೆ (Centralized payment system) ಇರುವ ಕಾರಣಕ್ಕೆ ಈ ಮೊದಲು ಇದ್ದ ಎಲ್ಲಾ ಗೊಂದಲಗಳಿಗೆ ಫುಲ್ ಸ್ಟಾಪ್ ಬೀಳಲಿದೆ. ಈ ಯೋಜನೆ ಕೂಲಿ ಕಾರ್ಮಿಕರಿಗೆ ಅನುಕೂಲ ಒದಗಿಸಲಿದೆ ಎಂದು ತಿಳಿಸಿದರು.












Click it and Unblock the Notifications