ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಕೆ: ಸುನೀಲ್ ಕುಮಾರ್
ಬೆಂಗಳೂರು, ಸೆ. 07: ಖಾಸಗಿಯವರು ವಿದ್ಯುತ್ ಬಿಲ್ ಕಟ್ಟದಿದ್ದರೆ ಕೆಪಿಟಿಸಿಎಲ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುತ್ತದೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಪರಿಸ್ಥಿತಿ ಹಾಗಿಲ್ಲ. ಒಂದು ಮೂಲದ ಮಾಹಿತಿ ಪ್ರಕಾರ ಇಡೀ ರಾಜ್ಯಾದ್ಯಂತ 300-400 ಕೋಟಿ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಬಾಕಿಯನ್ನು ಸರ್ಕಾರಿ ಕಚೇರಿಗಳು ಉಳಿಸಿಕೊಂಡಿವೆ ಎಂಬ ಮಾಹಿತಿಯಿದೆ. ಜೊತೆಗೆ ಈ ಬಾಕಿಯನ್ನು ತಡವಾಗಿ ಕಟ್ಟಲಾಗುತ್ತದೆ. ಅದರಿಂದ ಇಂಧನ ಇಲಾಖೆಗೆ ಆದಾಯದ ಕೊರತೆಯೂ ಆಗುತ್ತದೆ ಎನ್ನಲಾಗಿದೆ. ಈ ಸಮಸ್ಯೆಯಿಂದ ಹೊರ ಬರಲು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೊಸ ನೀತಿ ಜಾರಿಗೆ ತಂದಿದ್ದಾರೆ.
"ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಕೆಗೆ ತೀರ್ಮಾನ ಮಾಡಿದ್ದೇವೆ" ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ್ದಾರೆ. ಆ ಬಳಿಕ ಅವರು ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಬಿಲ್ ಬಾಕಿ ಜಾಸ್ತಿಯಿದೆ. ಅದರಿಂದ ಸರ್ಕಾರಕ್ಕೆ ಹೊರೆಯಾಗಲಿದೆ. ಹೀಗಾಗಿ ಪ್ರಿಪೇಯ್ಡ್ ಮೀಟರ್ ಹಾಕಿದಲ್ಲಿ ಮೊದಲೇ ಬಿಲ್ ಕಟ್ಟುವುದು ಎಲ್ಲರಿಗೂ ಅನ್ವಯವಾಗಲಿದೆ. ಜೊತೆಗೆ ಎಲೆಕ್ಟ್ರಿಕ್ ರಿಚಾರ್ಜ್ ಸೆಂಟರ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ತೀರ್ಮಾನ ಮಾಡಿದ್ದೇವೆ" ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
"ಜೊತೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲ ಮನೆಗಳಿಗೆ ವಿದ್ಯುತ್ ನೀಡುವ ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತ್ ಒದಗಿಸಲು ಸ್ಥಳೀಯ ಸಂಸ್ಥೆಗಳಿಂದ ಎನ್ಓಸಿ ಅಗತ್ಯವಿಲ್ಲ. ತಕ್ಷಣವೇ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕೊಡಲು ಸೂಚಿಸಿದ್ದೇವೆ. ರಾಜ್ಯದ ಎಲ್ಲ ಡಿವಿಜನಲ್‌ಗಳಲ್ಲಿ ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಮಾಡಲು ತೀರ್ಮಾನ ಮಾಡಿದ್ದು, ಟಿಸಿ ಸುಟ್ಟಲ್ಲಿ 24 ಗಂಟೆಯಲ್ಲಿ ಅದನ್ನು ಬದಲಾವಣೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ.

ಗಂಗಾ ಕಲ್ಯಾಣದ ಯೋಜನೆಗಳಿಗೆ 30 ದಿನದಲ್ಲಿ ವಿದ್ಯುತ್ ಸಂಪರ್ಕ ಕೊಡಬೇಕು. ಅದರೊಂದಿಗೆ ಉತ್ತರ ಕರ್ನಾಕಟದ ಜಿಲ್ಲೆಗಳಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಲು ತೀರ್ಮಾನಿಸಿದೆ. ಅದಕ್ಕಾಗಿ 60ಕ್ಕೂ ಹೆಚ್ಚು ಸಬ್‌ಸ್ಟೇಶನ್ ನಿರ್ಮಿಸಲಾಗುವುದು. ಇಲಾಖೆಯಲ್ಲಿ ಲೈನ್‌ಮನ್, ಜೆಇ ನೇಮಕದ ಬಗ್ಗೆ ಬೇಡಿಕೆ ಇದೆ. ನೇಮಕಾತಿ ಮಾಡಲಾಗುವುದು. ವರ್ಗಾವಣೆ ದಂಧೆಯನ್ನು ವರ್ಷಪೂರ್ತಿ ನಡೆಸುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
Recommended Video
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆಗೆ ಕಡಿವಾಣ: ಇನ್ನು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಕಡಿಮೆ ಮಾಡಲು ತೀರ್ಮಾನ ಮಾಡಿದ್ದೇವೆ. ಹೀಗಾಗಿ ನಾವೇ ಕಲಾವಿದರ ವಿವರ ಸಂಗ್ರಹವನ್ನು 100 ದಿನಗಳಲ್ಲಿ ಸಂಗ್ರಹಿಸಲು ತೀರ್ಮಾನ ಮಾಡಿದ್ದೇವೆ. ಜೊತೆಗೆ ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಅತ್ಯುತ್ತಮವಾಗಿ ಆಚರಿಸಲೂ ತೀರ್ಮಾನ ಮಾಡಿದ್ದೇವೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications