ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗಾಗುವ ಡ್ಯಾಮೇಜ್‌ಗಳೇನು?
ಬೆಂಗಳೂರು,ನವೆಂಬರ್ 25: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ನಾಯಕರಲ್ಲಿ ಮಾಜಿ ಸಚಿವ ಹಾಗೂ ಲಿಂಗಾಯತ ಪ್ರಭಾವಿ ನಾಯಕ ವಿ ಸೋಮಣ್ಣ ಅವರು ಒಬ್ಬರಾಗಿದ್ದು, ಎರಡು ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ದು, ಇದೀಗ ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಹೌದು, 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿ ಸೋಮಣ್ಣ ಅವರು ಎರಡು ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಬೇಡಿಕೆ ಇಟ್ಟಿದ್ರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ್ದು, ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದ್ದು, ಕಮಲವನ್ನ ಬಿಟ್ಟು ಕೈ ಹಿಡಿಯಲು ಚಿಂತನೆ ನಡೆಸಿದ್ದಾರೆ.

ಈಗಾಗಲೇ ನನ್ನ ಸೋಲಿಗೆ ಸ್ವಪಕ್ಷದವರೇ ಕಾರಣ ಎಂದು ಬಹಿರಂಗವಾಗಿ ಹೈಕಮಾಂಡ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಸಿಡಿದೆದ್ದ ವಿ ಸೋಮಣ್ಣ ಡಿಸೆಂಬರ್ 6 ರಂದು ತುಮಕೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಹೈಕಮಾಂಡ್ ಹಾಗೂ ಬಿಜೆಪಿ ನಾಯಕರಿಗೆ ಠಕ್ಕರ್ ಕೊಡಲು ವೇದಿಕೆ ಸಿದ್ದಪಡಿಸಿದ್ದಾರೆ.
ಇನ್ನೂ ಸ್ವಪಕ್ಷದ ನಾಯಕರ ಮೇಲಿನ ಮುನಿಸಿನಿಂದಾಗಿ ಪಕ್ಷ ಬಿಡಲು ಸಜ್ಜಾಗಿರುವ ವಿ ಸೋಮಣ್ಣ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿಯಾಗಿರುವ ಡಿ ಕೆ ಶಿವಕುಮಾರ್ ಅವರ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವು ಸಾಧಿಸಿದಂತೆ ಲೋಕಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಮಾಜಿ , ಹಾಲಿ ಶಾಸಕರಿಗೆ ಗಾಳ ಹಾಕುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲವ ತಂತ್ರಗಾರಿಕೆಯನ್ನ ನಡೆಸಿದ್ದು, ಮುಂದಿನ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಲೋಕಸಭಾ ಕ್ಷೇತ್ರವನ್ನ ಗೆಲ್ಲುವ ದೃಷ್ಟಿಯಿಂದಾಗಿ ಲಿಂಗಾಯತ ಪ್ರಭಾವಿ ನಾಯಕ ವಿ ಸೋಮಣ್ಣ ಅವರಿಗೆ ಗಾಳ ಹಾಕಿದ್ದು, ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಆಫರ್ ನೀಡಿದೆ. 20 ಕ್ಷೇತ್ರಗಳನ್ನ ಗೆಲ್ಲಲು ಹಲವು ತಂತ್ರಗಾರಿಕೆಯನ್ನ ನಡೆಸಿರುವ ಕಾಂಗ್ರೆಸ್ ನಾಯಕರು, ಬೆಂಗಳೂರು-ದಕ್ಷಿಣ ಲೋಕಸಭೆಯನ್ನು ಬಲಪಡಿಸಲು ವಿ ಸೋಮಣ್ಣ ಅವರನ್ನು ನಿಯೋಜಿಸಲು ಪ್ಲಾನ್ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

ಹಳೇ ಮೈಸೂರು ಭಾಗದಲ್ಲಿ ವೀರಶೈವ ಲಿಂಗಾಯತ ನಾಯಕರ ಕೊರತೆಯನ್ನ ಕಾಂಗ್ರೆಸ್ ಎದುರಿಸುತ್ತಿದೆ. ವಿ.ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ಏಕೆಂದರೆ ತುಮಕೂರು ಹಾಗೂ ಮೈಸೂರು ಭಾಗದ ವೀರಶೈವ-ಲಿಂಗಾಯತ ಮುಖಂಡರು, ಮಠಮಾನ್ಯಗಳ ಜೊತೆ ಉತ್ತಮ ಒಡನಾಟದಲ್ಲಿರೋ ವಿ.ಸೋಮಣ್ಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರನ್ನ ಕಾಂಗ್ರೆಸ್ ಗೆ ಕರೆತಂದರೇ ಬಿಜೆಪಿಗೆ ಅದು ದೊಡ್ಡ ಡ್ಯಾಮೇಜ್ ಆಗಲಿದೆ.
ಇತ್ತ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಲವು ಲಿಂಗಾಯತ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ, ಇದರಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ ಎಂದು ಹಲವು ಬಿಜೆಪಿ ನಾಯಕರು ಆರೋಪಿಸಿದ್ರು, ಇದೀಗ ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಿಂದ ಬಾರೀ ಡ್ಯಾಮೇಜ್ ಆಗಲಿದೆ. ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಮೂಲಕ ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ ಗೆ ಲಿಂಗಾಯತ ನಾಯಕ ಕೊರತೆ ಇದೆ. ಬೆಂಗಳೂರಿನ ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ ಭಾಗದಲ್ಲಿ ಲಿಂಗಾಯತ ಮತಗಳ ಸಂಖ್ಯೆ ಹೆಚ್ಚಿವೆ. ಗೋವಿಂದರಾಜ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಪ್ರತಿನಿಧಿಸಿದ್ದ ಮಾಜಿ ಸಚಿವ ಸೋಮಣ್ಣ, ಲಿಂಗಾಯತ ಸಮುದಾಯದ ಪ್ರಬಲ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಇದೀಗ ಸೋಮಣ್ಣ ಬಿಜೆಪಿಯಿಂದ ದೂರ ಸರಿಯುತ್ತಿರುವುದು, ಕಾಂಗ್ರೆಸ್ ಪಾಲಿಗೆ ತುಪ್ಪ ಜಾರಿ ರೊಟ್ಟಿ ಮೇಲೆ ಬಿದ್ದಂತಾಗಿದೆ.

ಸೋಮಣ್ಣ ಅವರ ಪಕ್ಷ ಸೇರ್ಪಡೆಯಿಂದ ಅನುಕೂಲವಾಗಲಿದೆ ಎಂದು ಅರಿತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿಯ ಹಿರಿಯ ನಾಯಕರಾಗಿರುವ ಸೋಮಣ್ಣ ಅವರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿರುವ ವಿ ಸೋಮಣ್ಣ ಕಾಂಗ್ರೆಸ್ ಸೇರುವುದು ನಿಜವೇ ಆದರೆ, ಅದು ಲೋಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಖಂಡಿತವಾಗಿ ಆಘಾತಕಾರಿ ಸುದ್ದಿಯಾಗಿ ಪರಿಣಮಿಸಲಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿಯೂ ಮಾಜಿ ಸಚಿವ ವಿ ಸೋಮಣ್ಣ ಅವರ ಪ್ರಭಾವ ಹೆಚ್ಚಾಗಿದೆ. ವಿ ಸೋಮಣ್ಣ ಅವರು ಲೋಕಸಭಾ ಚುನಾವಣೆಯ ಹೊತ್ತಲಿ ಕಾಂಗ್ರೆಸ್ ಸೇರ್ಪಡೆಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಲೆಕ್ಕಾಚಾರವನ್ನ ಕಾಂಗ್ರೆಸ್ ಹಾಕಿಕೊಂಡಿದೆ. ಇನ್ನು ಎಲ್ಲಾ ಅಂಶಗಳನ್ನ ಗಮನಿಸಿದರೆ ಸಾಂಪ್ರದಾಯಿಕ ಮತಗಳ ಬಿಜೆಪಿಯಿಂದ ಕಾಂಗ್ರೆಸ್ ಪಾಲಗಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ ಆಗಿದೆ.












Click it and Unblock the Notifications