ರಾಜಕೀಯ ನಾಯಕರೇ..! ಆಚಾರ ವಿಲ್ಲದ ನಾಲಿಗೆ..ನಿಮ್ಮ ನಾಯಕತ್ವಕ್ಕೆ ತರುವುದೇ ಶೋಭೆ

ಬೆಂಗಳೂರು, ಮಾರ್ಚ್ 31: ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಈ ಬಾರಿಯ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧಿಗಳ ನಡುವಿನ ಹಣಾಹಣಿಯಂತೆ ಗೋಚರಿಸುತ್ತಿದೆ.

ಕಳೆದ ಹತ್ತು ವರ್ಷಗಳಿಂದ ವಿಪಕ್ಷಗಳಿಗೆ ಅವಕಾಶವೇ ಮಾಡಿಕೊಡದೆ ತ್ರಿವಿಕ್ರಮನಂತೆ ಮೆರೆಯುತ್ತಿರುವ ನರೇಂದ್ರ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಕ್ಕಿಳಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಐಎನ್ ಡಿಐಎ ಒಕ್ಕೂಟದ ನಾಯಕರು ಅಧಿಕಾರ ಹಿಡಿಯಲು ಹೋರಾಟ ಆರಂಭಿಸಿದ್ದಾರೆ. ಈ ಸಂದರ್ಭ ಇಂಡಿಯಾ ಮತ್ತು ಎನ್‌ಡಿಎ ಈ ಎರಡು ಕಡೆಗಳಿಂದಲೂ ಚೌಕಟ್ಟು ಮೀರಿದ ಮಾತಿನ ಬಾಣಗಳು ಹೊರ ಬರಲಾರಂಭಿಸಿದ್ದು ವಿವಾದಕ್ಕೂ ಕಾರಣವಾಗುತ್ತಿವೆ.

Political Leaders Should Keep Their Tongues In Limit And Campaign For The Lok Sabha Elections

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಏನೇ ತಂತ್ರಗಳನ್ನು ಮಾಡಿದರೂ ಮತದಾರರ ಒಲವು ಯಾರ ಕಡೆ ಇರುತ್ತದೆಯೋ ಅವರಿಗೆ ಗೆಲುವು ಶತಸಿದ್ಧವಾಗಿರುತ್ತದೆ. ಹೀಗಾಗಿ ಕೇವಲ ಎದುರಾಳಿಗಳನ್ನು ಟೀಕಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮತದಾರರನ್ನು ಹೇಗೆ ಸೆಳೆಯಬೇಕು? ಅವರು ಬಯಸುವುದೇನು? ಅವರು ಬಯಸಿದ್ದನ್ನು ನಾವು ನೀಡಿದ್ದೇವೆಯಾ? ಹೀಗೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಹೋದರೆ ಉತ್ತರಗಳು ಸಿಗಬಹುದೇನೋ?

ನಮ್ಮಲ್ಲಿ ಯಾವುದೇ ಚುನಾವಣೆ ನಡೆಯಲಿ ಮುಖ್ಯವಾಗಿ ಟೀಕಿಸುವುದರಲ್ಲಿಯೇ ಬಹುತೇಕ ನಾಯಕರು ಸಮಯವನ್ನು ಕಳೆದು ಬಿಡುತ್ತಾರೆ. ನೆರೆದವರ ಚಪ್ಪಾಳೆ ಹೆಚ್ಚಾಗುತ್ತಿದ್ದಂತೆಯೇ ಮಾತಿನ ವೈಖರಿಯೂ ಬದಲಾಗುತ್ತದೆ. ಕೆಲವೊಮ್ಮೆ ಅದು ಚೌಕಟ್ಟು ಮೀರಿ ವೈಯಕ್ತಿಕ ಮಟ್ಟಕ್ಕೂ ಹೋಗುತ್ತದೆ. ಜತೆಗೆ ತನ್ನ ಎದುರಾಳಿಯನ್ನು ಟೀಕಿಸುವ ಭರದಲ್ಲಿ ತೀರ ಕೀಳುಮಟ್ಟಕ್ಕಿಳಿಯಲು ಹೇಸುವುದಿಲ್ಲ. ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಹೋಯಿತು ಎಂಬಂತೆ ಕೆಲವೊಮ್ಮೆ ಕೆಲವು ನಾಯಕರಿಗೆ ಅವರ ಮಾತುಗಳೇ ತಿರುಗುಬಾಣವಾದ ಉದಾಹರಣೆಗಳು ಇಲ್ಲದಿಲ್ಲ.

Political Leaders Should Keep Their Tongues In Limit And Campaign For The Lok Sabha Elections

ತೀರಾ ಅಸಹನೀಯ ಹೇಳಿಕೆ ಸಲ್ಲದು

ಇವತ್ತು ನಮ್ಮ ದೇಶದಲ್ಲಿ ಹಿರಿಯ ನಾಯಕರಿದ್ದಾರೆ. ಅವರು ರಾಜಕೀಯವಾಗಿ ತಮ್ಮದೇ ಆದ ಕೊಡುಗೆಗಳನ್ನು ದೇಶಕ್ಕೆ ನೀಡಿದ್ದಾರೆ. ಹೀಗಾಗಿ ಅವರ ವಯಸ್ಸು, ಗೌರವ, ಘನತೆಗೆ ತಕ್ಕಂತೆ ಆರೋಪಗಳನ್ನು ಮಾಡಬೇಕಾಗುತ್ತದೆ. ಅವರು ಕೇವಲ ವಿರೋಧ ಪಕ್ಷದವರು ಎಂಬ ಕಾರಣಕ್ಕೆ ಮನಬಂದಂತೆ, ಬಾಯಿಗೆ ಬಂದ ಪದಗಳನ್ನು ಪ್ರಯೋಗಿಸುವುದು ಎಷ್ಟು ಸರಿ? ಆರೋಪ ಪ್ರತ್ಯಾರೋಪಗಳು ನಿಮ್ಮ ಕೆಲಸ ಕಾರ್ಯದಲ್ಲಿರಲಿ, ಅಷ್ಟೇ ಅಲ್ಲ ಎದುರಾಳಿ ಭ್ರಷ್ಟಚಾರಿಯೇ ಹಾಗಾದರೆ ಸಾಕ್ಷಿ ಸಹಿತ ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅದು ಬಿಟ್ಟು ತೀರಾ ಅಸಹನೀಯ ಹೇಳಿಕೆಗಳನ್ನು ನೀಡುವುದೆಷ್ಟು ಸರಿ?

ಅದರಲ್ಲೂ ಕೆಲವು ನಾಯಕರು ಎದುರಾಳಿಗಳು ಯಾರು? ಅವರ ಸ್ಥಾನಮಾನಗಳೇನು? ಅವರು ಮಹಿಳೆಯಾಗಿದ್ದರೆ ಅವರನ್ನು ಯಾವ ಸಂಬೋಧಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಕೀಳಾಗಿ ಮಾತನಾಡಿ ಮತ್ತೆ ಕ್ಷಮೆಯಾಚಿಸುವುದು ಎಷ್ಟೊಂದು ಅಸಹ್ಯಕಾರಿಯಾಗಿದೆ. ಹಿಂದಿನ ಕಾಲದ ಚುನಾವಣೆಗಳಲ್ಲಿ ಮಾಧ್ಯಮ ಅಷ್ಟೊಂದು ಪ್ರಬಲವಾಗಿರಲಿಲ್ಲ. ಆಗ ನಾಯಕರು ಪ್ರಚಾರ ಭಾಷಣ ವೇಳೆ ಹೇಳುವ ಹೇಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಯಾವಾಗ ಹೇಳಿಕೆಗಳು ವಿವಾದವಾಯಿತೋ ಆ ಕೂಡಲೇ ನಮ್ಮ ಹೇಳಿಕೆಗಳನ್ನು ತಿರುಚಿ ಪತ್ರಿಕೆಗಳು ಬರೆದಿವೆ ಎಂದು ಪತ್ರಿಕೆಗಳ ಮೇಲೆ ಗುಮ್ಮ ಕೂರಿಸಿ ಬಿಡುತ್ತಿದ್ದರು.

ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದೆಷ್ಟು ಸರಿ?

ಬದಲಾದ ಕಾಲಘಟ್ಟದಲ್ಲಿ ಮಾಧ್ಯಮಗಳು ಅಭಿವೃದ್ಧಿಯಾಗಿವೆ. ಆಡಿಯೋ ವೀಡಿಯೋಗಳ ಸಹಿತವೇ ನಾಯಕರ ಹೇಳಿಕೆಗಳನ್ನು ಪ್ರಚಾರ ಮಾಡುತ್ತಿವೆ. ಆದರೆ ತಿರುಚಿದ್ದಾರೆ ಎಂಬ ಹೇಳಿಕೆಗಳನ್ನು ಈಗಲೂ ನಮ್ಮ ನಾಯಕರು ಹೇಳುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಾಮಾಜಿಕ ಜಾಲ ತಾಣಗಳನ್ನು ಎದುರಾಳಿಗಳನ್ನು ಟೀಕಿಸುವುದು, ಆರೋಪ ಮಾಡುವುದು ಸಾಮಾನ್ಯವಾಗಿದ್ದು, ಈ ವೇಳೆ ಅಸಹ್ಯ, ಮಾನಹಾನಿಯಂತಹ ಹೇಳಿಕೆಗಳನ್ನು ಪೋಸ್ಟ್‌ ಮಾಡುವುದು ನಡೆಯುತ್ತಿದೆ. ಇದು ವಿವಾದವಾದಾಗ ನಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಸಬೂಬು ನೀಡುವುದು ನಡೆಯುತ್ತದೆ.

ರಾಜಕೀಯದಲ್ಲಿ ಎದುರಾಳಿಗಳು ಒಬ್ಬರನೊಬ್ಬರನ್ನು ಟೀಕಿಸುವುದು, ಪಕ್ಷಗಳ ವಿರುದ್ಧ ಹರಿಹಾಯುವುದು ಮಾಮೂಲಿ. ಆದರೆ ಎದುರಾಳಿಗಳ ಕಾಲೆಳೆಯುವಲ್ಲಿಯೂ ಜಾಣತನ ಮೆರೆಯಬೇಕು. ಅದು ಬಿಟ್ಟು ತೀರಾ ಕೆಳಮಟ್ಟಕ್ಕೆ ಇಳಿಯುವುದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸಿ ಬಿಡುತ್ತದೆ. ಅದರಲ್ಲೂ ಮಹಿಳಾ ಅಭ್ಯರ್ಥಿಗಳ ಬಗ್ಗೆ ಟೀಕೆ ಮಾಡುವಾಗ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ಮರೆಯಬಾರದಷ್ಟೆ.

ಅಧಿಕಾರಕ್ಕಾಗಿ ಶತ್ರುಗಳು ಮಿತ್ರರಾಗಬಹುದು

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಎಂಬುದು ರಾಜಕೀಯ ಇತಿಹಾಸವನ್ನು ನೋಡಿದವರಿಗೆ ಗೊತ್ತಾಗಿ ಬಿಡುತ್ತದೆ. ಅಧಿಕಾರಕ್ಕಾಗಿ ಶತ್ರುಗಳನ್ನು ಕೆಲವೊಮ್ಮೆ ಮಿತ್ರರನ್ನಾಗಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಎದುರಾಳಿಗಳಿಂದ ಚುಚ್ಚಿಸಿಕೊಂಡಿದ್ದರೂ ಕೆಲವೊಮ್ಮೆ ಅದನ್ನು ಮರೆತು ಅವರ ಜತೆ ಕೈಜೋಡಿಸಬೇಕಾಗುತ್ತದೆ. ಇಂತಹ ಅನುಭವ ಬಹುಶಃ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜೆಡಿಎಸ್ ನಾಯಕರಿಗಾದಷ್ಟು ಬೇರೆ ಯಾರಿಗೂ ಆಗಿಲ್ಲ ಎನ್ನಬೇಕು.

90ರ ದಶಕದಲ್ಲಿ ಕಾಂಗ್ರೆಸ್ ನ್ನು ವಿರೋಧಿಸಿಕೊಂಡು ಬಂದಿದ್ದಲ್ಲದೆ, ಕಾಂಗ್ರೆಸ್ ನ್ನು ಮಣಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ಕೆಲವೇ ಸಮಯದಲ್ಲಿ ಬೆಂಬಲ ನೀಡಿ ಕಾಂಗ್ರೆಸ್ ಪ್ರಧಾನಿಯನ್ನಾಗಿ ಮಾಡಿತು. ಆದರೆ ಅವಧಿಪೂರ್ಣಗೊಳಿಸಲು ಬಿಡದೆ ಕೆಲವೇ ತಿಂಗಳಲ್ಲೇ ತಾನು ಕೊಟ್ಟಿದ್ದ ಬೆಂಬಲ ಹಿಂಪಡೆದು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿತು.

ಹೇಳಿಕೆಗಳೇ ತಿರುಗುಬಾಣವಾಗಬಹುದು ಹುಷಾರ್

ಆ ಕಹಿ ಅನುಭವ ಮನದಲ್ಲಿದ್ದರೂ ಮತ್ತೊಮ್ಮೆ 2018ರಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಕೈಜೋಡಿಸಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ತಂದರಾದರೂ ಅದು ಕೂಡ ಹೆಚ್ಚು ಸಮಯ ನಡೆಯಲಿಲ್ಲ. ಯಾವ ನರೇಂದ್ರಮೋದಿಯನ್ನು ಜೆಡಿಎಸ್ ನಾಯಕರು ವಿರೋಧಿಸುತ್ತಿದ್ದರೋ ಇವತ್ತು ದೇಶ ಉಳಿಯ ಬೇಕಾದರೆ ಪ್ರಧಾನಿಯಾಗಿ ನರೇಂದ್ರಮೋದಿ ಉಳಿಯಬೇಕೆಂದು ಬಯಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರೇ ಮೋದಿ ಜತೆಗೆ ಕೈಜೋಡಿಸಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ರಾಜಕೀಯದಲ್ಲಿ ಯಾರೂ ಯಾರಿಗೆ ಶತ್ರುವಲ್ಲ ಎಂಬುದು ಗೊತ್ತಾಗುತ್ತದೆ. ಆದುದರಿಂದ ಎದುರಾಳಿಗಳ ಬಗ್ಗೆ ಮಾತನಾಡುವಾಗ ಪದ ಪ್ರಯೋಗಗಳತ್ತ ಎಚ್ಚರಿಕೆ ವಹಿಸುವುದು ಅಷ್ಟೇ ಮುಖ್ಯವಾಗುತ್ತದೆ. ನಿಮ್ಮ ಹೇಳಿಕೆಗಳು ಎದುರಾಳಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೋ ಗೊತ್ತಿಲ್ಲ ಆದರೆ ಅದರಿಂದ ನಿಮ್ಮ ವ್ಯಕ್ತಿತ್ವವೇನು ಎಂಬುದು ಸಮಾಜಕ್ಕೆ ಗೊತ್ತಾಗಿ ಬಿಡುತ್ತದೆ. ಇನ್ನಾದರೂ ಹೇಳಿಕೆ ನೀಡುವಾಗ ನಾಯಕರು ಎಚ್ಚರ ವಹಿಸುವುದು ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+