
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಬಿಎಸ್‌ವೈ ಸೇರಿ ಹಲವರ ಖಂಡನೆ
ಬೆಂಗಳೂರು,ಆಗಸ್ಟ್ 18: ಕೊಡಗು ಜಿಲ್ಲಾ ಪ್ರವಾಸದ ವೇಳೆ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗಿದರಲ್ಲದೆ, ಕೆಲವರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೊಡಗಿನಲ್ಲಿ ಪ್ರವಾಹದಿಂದ ಹಾನಿಯಾದ ಪ್ರದೇಶಗಳ ವೀಕ್ಷಣೆಗೆ ಬಂದಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದರು. ಸಿದ್ದರಾಮಯ್ಯ ಮಳೆಹಾನಿ ಪ್ರದೇಶಗಳ ವೀಕ್ಷಿಸಿ ಮಡಿಕೇರಿಗೆ ಬರುತ್ತಿದ್ದಾಗ ಘಟನೆ ನಡೆದಿತ್ತು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಸುದರ್ಶನ್ ಗೆಸ್ಟ್ ಹೌಸ್ವರೆಗೆ ಮೆರವಣಿಗೆ ನಡೆಸಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಕೊನೆಗೆ ಎಸ್‌ಪಿ ಅಯ್ಯಪ್ಪ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಿದರು.
ಬಿಜೆಪಿ ಸದಸ್ಯರಿಂದ ಕೊಡಗಿನಲ್ಲಿ ಸಿದ್ದರಾಮಯ್ಯನವರ ಕಾರಿಗೆ ಘೇರಾವ್
ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಎಂಬ ಗೌರವವಿಲ್ಲದೆ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದಕ್ಕೆ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್, "ಬಿಜೆಪಿಯ ಮನುವಾದಿಗಳಿಗೆ ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಮಡಿಕೇರಿಯಲ್ಲಿ ನಡೆದ ಘಟನೆ ಸಾಕ್ಷಿ. ಸಿದ್ದರಾಮಯ್ಯ ಜನಪ್ರಿಯತೆಯನ್ನು ಸಹಿಸಲಾರದೆ ಇಂತಹ ಹೀನಕೃತ್ಯದ ಮೂಲಕ ಬಿಜೆಪಿ ತಮ್ಮ ಸಂಸ್ಕೃತಿಯನ್ನು ತೋರಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಡಿಗಳ ಕೃತ್ಯ ಎಂದ ಸಿದ್ದರಾಮಯ್ಯ
ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ "ಇದು ಹೇಡಿಗಳು ಮಾಡುತ್ತಿರುವ ಪ್ರತಿಭಟನೆ. ಕೊಡಗಿನ ಎಲ್ಲಾ ಕಡೆ ಬಿಜೆಪಿ ಕಳಪೆ ಕಾಮಗಾರಿ ಮಾಡಿದೆ. ಹಾಗಾಗಿ ನನಗೆ ಅದನ್ನು ವೀಕ್ಷಣೆ ಮಾಡಲು ಬಿಡಬಾರದು ಎಂದು ಈ ರೀತಿ ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ನಾಯಕರು ದುಡ್ಡು ಕೊಟ್ಟು ಜನರನ್ನು ಕರೆತಂದು ಪ್ರತಿಭಟನೆ ಮಾಡಿಸಿದ್ದಾರೆ. ನಮ್ಮ ಕಾರ್ಯಕರ್ತರು ಮನಸು ಮಾಡಿದರೆ ಕೊಡಗಿನಲ್ಲಿ ಬಿಜೆಪಿಯ ಯಾವ ಮಿನಿಸ್ಟರ್ ಕೂಡ ಓಡಾಡದಂತೆ ಮಾಡುತ್ತಾರೆ. ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಜನರೇ ಅವರಿಗೆ ಪಾಠ ಕಲಿಸಲಿದ್ದಾರೆ," ಎಂದು ತಿಳಿಸಿದರು.
"ಕೊಡಗಿನಲ್ಲಿ ನಡೆದ ಘಟನೆ ಸರಕಾರದ ಬೇಜಾವಬ್ದಾರಿಯಿಂದ ನಡೆದ ಘಟನೆಯಾಗಿದೆ. ಯಾರು ಈ ಘಟನೆಗೆ ಕಾರಣವಾಗಿದ್ದಾರೆ ಅವರ ಮೇಲೆ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮಳೆಯಿಂದ ಸಮಸ್ಯೆಯಾಗಿರುವ ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಹಾರ ನೀಡಬೇಕು," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಹೇಳಿದ್ದಾರೆ.

ಹತಾಶೆಯಿಂದ ಬಿಜೆಪಿಯಿಂದ ಹೀನ ಕೃತ್ಯ
ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ನಡೆದ ಗಲಭೆ ಸರಕಾರಿ ಪ್ರಯೋಜಿತ ಗಲಭೆ. ಯುವ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ. ಅವರ ಈ ಕೃತ್ಯ ಅವರಲ್ಲಿರುವ ಹತಾಶೆಯನ್ನು ಎತ್ತಿ ತೋರಿಸುತ್ತಿದೆ. ಸಿದ್ದರಾಮಯ್ಯರನ್ನು ಸೈದ್ದಾಂತಿಕವಾಗಿ ಎದುರಿಸಲಾಗದೆ ಬಿಜೆಪಿ ಇಂತಹ ಹೀನ ಕೃತ್ಯ ಎಸಗಿದೆ. ಸಿದ್ದರಾಮೋತ್ಸವದ ಬಳಿಕ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಅದಕ್ಕಾಗಿ ಸಿದ್ದರಾಮಯ್ಯರ ಮೇಲೆ ತನ್ನ ಕಾರ್ಯಕರ್ತರನ್ನು ಬಿಟ್ಟು ಗಲಾಟೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾದ ಪುಂಡರು ಮಿತಿ ಮೀರಿದ್ದಾರೆ
"ಕೊಡಗು ಜಿಲ್ಲೆಯ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರಾದ ಸಿದ್ದರಾಮಯ್ಯರ ಕಾರಿನ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೊಟ್ಟೆ ಎಸೆದಿರುವುದು ಬಿಜೆಪಿ ಪಕ್ಷದ ನೀಚ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳ ಮೇಲೆಯೇ ಹಲ್ಲೆ ನಡೆಸುವಷ್ಟು ಬಿಜೆಪಿ ಯುವ ಮೋರ್ಚಾದ ಪುಂಡರು ಮಿತಿ ಮೀರಿದ್ದಾರೆಂದರೆ, ಅಧಿಕಾರದ ಮದ ನೆತ್ತಿಗೆ ಹತ್ತಿದೆ ಎಂದೇ ಅರ್ಥ. ಆದರೆ ಇಂತಹ ಕುಕೃತ್ಯಗಳು ವೀರ ಕೊಡವರ ನಾಡಿನ ಘನತೆಯನ್ನು ಮಣ್ಣುಪಾಲಾಗಿಸದಿರಲಿ," ಎಂದು ಮಾಜಿ ಸಚಿವ ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ.

ಬಿಎಸ್‌ವೈ ಅಸಮಾಧಾನ
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ. " ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಡೆದಿರುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಇಂತಹ ಘಟನೆ ನಡೆಯಬಾರದು. ಸಿದ್ದರಾಮಯ್ಯ ಇರಬಹದು, ಯಡಿಯೂರಪ್ಪ ಅಥವಾ ಬೇರೆ ಯಾವ ನಾಯಕನಾದರೂ ಇಂತಹ ಘಟನೆ ನಡೆಯಬಾರದು. ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳಬೇಕು. ಇಂತಹ ಘಟನೆಗಳನ್ನು ಬಿಜೆಪಿ ಸಹಿಸುವುದಿಲ್ಲ" ಎಂದು ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.