• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಚಂದನವನದ ಪಾಲಿಗೆ ಇಂದು ಕರಾಳ ಶುಕ್ರವಾರ. ಕನ್ನಡಿಗರ ಅಚ್ಚುಮೆಚ್ಚಿನ ಅಪ್ಪು ಲಘು ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಾಜಕೀಯ ಧುರೀಣರು ಸಂತಾಪ ಸೂಚಿಸಿದ್ದಾರೆ.

"ಕನ್ನಡ ಚಿತ್ರ ರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತ ವಾಗಿದೆ. ಅವರ ನಟಿಸ್ಸಿದ್ದ ಪೃತ್ವಿ ಮತ್ತು ರಾಜಕುಮಾರ ಚಿತ್ರವನ್ನು ಅಪ್ಪು ಅವರ ಜೊತೆಯಲ್ಲೇ ನೋಡಿದ್ದೇ ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ, ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.

 Breaking: ಕನ್ನಡದ ಖ್ಯಾತ ನಟ ಪವರ್‌ಸ್ಟಾರ್ ಪುನೀತ್​ ರಾಜ್​ಕುಮಾರ್ ಇನ್ನಿಲ್ಲ Breaking: ಕನ್ನಡದ ಖ್ಯಾತ ನಟ ಪವರ್‌ಸ್ಟಾರ್ ಪುನೀತ್​ ರಾಜ್​ಕುಮಾರ್ ಇನ್ನಿಲ್ಲ

ಸಿದ್ದರಾಮಯ್ಯ ಟ್ವೀಟ್:

ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮ‌ನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೊಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ, ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ನಿಧನಕ್ಕೆ ಡಿಕೆಶಿ ಕಂಬನಿ:

ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೋಯ್ದ ವಿಧಿ ಬಹಳ ಕ್ರೂರಿ ಎಂದು ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಪುನೀತ್ ಅವರು ನನಗೆ ಆತ್ಮೀಯರಾಗಿದ್ದರು. ಕುಟುಂಬದ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಕುಟುಂಬ ಸದಸ್ಯರ ನಡುವೆ ಉತ್ತಮ ಒಡನಾಟವಿತ್ತು ಎಂದು ಹೇಳಿಕೆಯಲ್ಲಿ ಸ್ಮರಿಸಿಕೊಂಡಿದ್ದಾರೆ.

ನಾವಿಬ್ಬರೂ ಒಟ್ಟಿಗೆ ವಾಕಿಂಗ್ ಮಾಡಿದ್ದೇವೆ. ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಶಿವಕುಮಾರ್ ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

6 ತಿಂಗಳ ಮಗುವಾಗಿದ್ದಾಗಿನಿಂದಲೇ (ಪ್ರೇಮದ ಕಾಣಿಕೆ) ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದ ಪುನೀತ್, ನಂತರ ವಸಂತಾ ಗೀತಾ, ಚಲಿಸುವ ಮೋಡಗಳು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ನಟರಾಗಿ ಮನಗೆದ್ದಿದ್ದರು. ಬೆಟ್ಟದ ಹೂವು ಚಿತ್ರದ ನಟನೆಗೆವರಾಷ್ಟ್ರ ಪ್ರಶಸ್ತಿ ಬಂದಿದಗದು ಮಾತ್ರವಲ್ಲದೇ, ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ ಗಳಿಸಿದ ಧ್ರುವ ನಕ್ಷತ್ರ ಪುನೀತ್ ಅವರು. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಅನ್ಯ ಭಾಷಿಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಯಾಗಿ ಮಾಡಿಕೊಂಡಿದ್ದು ಪುನೀತ್ ಅವರಲ್ಲಿದ್ದ ಕಲಾ ಶಕ್ತಿಗೆ ಸಾಕ್ಷಿ.

ನಾನು ರಾಜ್ ಕುಮಾರ್ ಚಿತ್ರಗಳನ್ನು ನೋಡುತ್ತಾ ಬೆಳೆದವನು. ಅದೇ ರೀತಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಒಬ್ಬರಿಗಿಂತ ಮತ್ತೊಬ್ಬರು ಮಿಗಿಲಾದ ನಟರು ಎಂದು ಮೆಲುಕು ಹಾಕಿದರು. ಪುನೀತ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ:
"ನಾಡಿನ ಜನಪ್ರಿಯ ಕಲಾವಿದ,ಡಾ.ರಾಜ್ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ, ಬೆಟ್ಟದ ಹೂವು, ನಟಸಾರ್ವಭೌಮ ಮೊದಲಾದ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾನ ಪಡೆದ ಅಭಿಮಾನಿಗಳ ಪ್ರೀತಿಯ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ. ನಿಮ್ಮ ನೆನಪು ಚಿರಾಯು ಪುನೀತ್."

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್:
ಕನ್ನಡ ಚಿತ್ರರಂಗದ ಖ್ಯಾತ ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ. ಅವರ ಕುಟುಂಬಕ್ಕೆ, ಆಪ್ತರಿಗೆ, ಪ್ರತಿ ಕನ್ನಡಿಗರಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸಚಿವ ಆರ್ ಅಶೋಕ್:
ಕನ್ನಡದ ಶಕ್ತಿ.. ಕರುನಾಡ ಕೀರ್ತಿ.. ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ನೀ ಅಜರಾಮರ ಅಪ್ಪು.. ನಟನಾಗಿ, ನಿರ್ಮಾಪಕನಾಗಿ, ಗಾಯಕನಾಗಿ ಕಲಾದೇವಿಗೆ ನೀವು ಸಲ್ಲಿಸಿದ ಸೇವೆ ಸದಾ ಸ್ಮರಣೀಯ.. ಆದರೆ ಇಂದು ನೀವು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದೀರ ಎನ್ನುವ ಸುದ್ದಿ ನಿಜಕ್ಕು ಬರ ಸಿಡಿಲು ಬಡಿದಂತಾಗಿದೆ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕರುಣಿಸಲಿ.

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ:
ಕನ್ನಡ ಚಿತ್ರರಂಗದಲ್ಲಿ, "ಪವರ್ ಸ್ಟಾರ್" ಎಂದೇ ಖ್ಯಾತರಾಗಿದ್ದ, ಜನಾನುರಾಗಿ ಹಾಗೂ ಶ್ರೇಷ್ಠ ನಟ ಪುನೀತ್ ರಾಜಕುಮಾರ್, ಅವರ ಹಠಾತ್ ನಿಧನ, ಅಪಾರವಾದ ನೋವು ಹಾಗೂ ದುಃಖ ತಂದಿದೆ. ಬರ ಸಿಡಿಲಿನಂತೆ ಬಂದೆರಗಿದ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದ ಸುದ್ದಿಯಿಂದ ಇಡೀ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಹಾಗೂ ನಾಡಿನ ಜನತೆ, ಆಘಾತಗೊಂಡಿದ್ದು ನಾಡಿನಾದ್ಯಂತ, ದುಃಖದ ಛಾಯೆ ಆವರಿಸಿದೆ. ಕನ್ನಡ ಚಿತ್ರ ಜಗತ್ತಿನ, ಮೇರು ನಟರಾಗಿದ್ದ, ಡಾ: ರಾಜಕುಮಾರ್ ಅವರ ಪುತ್ರರೂ ಆಗಿದ್ದ, ಪುನೀತ್ ರಾಜಕುಮಾರ್, ತಮ್ಮ ಸಹಜ ಅಭಿನಯ ಚಾತುರ್ಯದಿಂದ, ಸದಭಿರುಚಿಯ ಹಾಗೂ ವೈಚಾರಿಕ ನೆಲೆಯುಳ್ಳ ಮಾದರಿ ಪಾತ್ರಗಳಲ್ಲಿ ಅಭಿನಯಿಸಿ, ನಾಡಿನ ಮೂಲೆ ಮೂಲೆಯಲ್ಲಿಹಾಗೂ ನಾಡಿನ ಹೊರಗೂ, ಅಭಿಮಾನಿಗಳ ಸಾಗರವನ್ನೇ ಹೊಂದಿದ್ದರು. ಪುನೀತ್ ರಾಜಕುಮಾರ್ ಅಕಾಲಿಕ ನಿಧನದಿಂದ ನಾನು ದಿಘ್ಮೂಢನಾಗಿದ್ದು, ಮೃತರ ಕುಟುಂಬದ ಸದಸ್ಯರಿಗೆ, ಹಾಗೂ ಅವರ ಅಪಾರ ಪ್ರಮಾಣದ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ, ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಎಂದು ಸಚಿವರು ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್:
ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿದ್ದರೂ ಪುನೀತ್ ರಾಜ್‍ಕುಮಾರ್ ಹಮ್ಮು ಬಿಮ್ಮುಗಳಿಲ್ಲದ ಸಜ್ಜನ ವ್ಯಕ್ತಿ. ತಮ್ಮ ತಂದೆ ಡಾ!ರಾಜ್‌ರವರಂತೆ ಸರಳತೆಯ ಸಾಕಾರ ರೂಪವಾಗಿದ್ದರು. ಪುನೀತ್ ರಾಜ್‍ಕುಮಾರ್‌ ಅಸ್ತಂಗತರಾಗಿದ್ದು ಕನ್ನಡ ಚಿತ್ರರಂಗದ ಅಪರೂಪದ ಮಾಣಿಕ್ಯವೊಂದು ಮರೆಯಾದಂತಾಗಿದೆ.

ಸಚಿವ ಎಸ್ ಟಿ ಸೋಮಶೇಖರ್:
ಈ ನಾಡು ಕಂಡ ಅಪ್ರತಿಮ‌ ನಟ, ಕನ್ನಡಿಗರ ಕಣ್ಮಣಿ, ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿದೆ. ಪುನೀತ್ ಅವರ ನಿಧನದ ಈ ದಿನ ಕೇವಲ ಚಿತ್ರರಂಗದ ಪಾಲಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಮತ್ತು ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ನಟನಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಅವರ ಸೇವೆ, ತ್ಯಾಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಪುನೀತ್ ಹೆಸರು ಅಜರಾಮರವಾಗಿ ಉಳಿಯಲಿದೆ. ಬಾಲ ನಟನಾಗಿಯೇ ಎಲ್ಲರ ಮನ ಗೆದ್ದಿದ್ದ ಪುನೀತ್ ರಾಜ್ ಕುಮಾರ್ ಅವರ ನಿಧನದಿಂದ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಶಾಂತಿ ಕಾಪಾಡಿ, ಪುನೀತ್ ಅವರ ಆತ್ಮಕ್ಕೆ ಶಾಂತಿ ಕೋರಬೇಕು.

ಸಚಿವೆ ಶಶಿಕಲಾ ಜೊಲ್ಲೆ:
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಈ ನಾಡು ಕಂಡ ಯಶಸ್ವಿ ನಾಯಕ ನಟ, ಕನ್ನಡಿಗರ ಕಣ್ಮಣಿ, ಯುವ ನಟ ಪುನೀತ್ ರಾಜ್ ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿದೆ ಎಂದು ಮುಜರಾಯಿ, ವಕ್ಫ್ ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು ದುಖ ವ್ಯಕ್ತಪಡಿಸಿದ್ದಾರೆ. ಪುನೀತ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ದುಖವುಂಟಾಗುತ್ತಿದೆ. ಡಾಕ್ಟರ್ ರಾಜಕುಮಾರ್ ಅವರ ಪುತ್ರರಾಗಿದ್ದರೂ ಯಾವುದೇ ಅಹಂ ಇಲ್ಲದೇ ಎಲ್ಲರ ಪ್ರೀತಿಯ ಅಪ್ಪು ಆಗಿ ನಾಡಿಗಷ್ಟೆ ಅಲ್ಲ ವಿಶ್ವದ ಕನ್ನಡಿಗರು ಹಾಗೂ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಸಂತಾಪದಲ್ಲಿ ತಿಳಿಸಿದ್ದಾರೆ.

ಟಿ ಎ ಶರವಣ ಸಂತಾಪ:
ಜೀವನವನ್ನೇ ಚಿತ್ರ ರಂಗಕ್ಕೆ ಮುಡಿಪಾಗಿಟ್ಟ ಕುಟುಂಬದ ಕುಡಿ,ಸ್ನೇಹಜೀವಿ ನಮ್ಮೆಲ್ಲರ ಅಚ್ಚುಮೆಚ್ಚಿನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಅತೀವ ನೋವು ಹಾಗೂ ಆಘಾತ ತಂದಿದೆ.ಚಿರನಿದ್ರೆಗೆ ಜಾರಿರುವ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬಕ್ಕೆ ನೋವನ್ನು ಭರಿಸುವಶಕ್ತಿಯನ್ನು ಭಗವಂತ ನೀಡಲಿ, ಎಂದು ಶರವಣ ಟ್ವೀಟ್ ಮಾಡಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪ ಸಂತಾಪ:
"ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕನ್ನಡ ಚಲನಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಸಚಿವ ಕೆ ಎಸ್ ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ:
ಜನಪ್ರಿಯ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ' ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ದುಃಖಿಸಿದ್ದಾರೆ. ರಚನಾತ್ಮಕ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದ ಪುನೀತ್ ಅವರು ಇನ್ನಿಲ್ಲವೆಂದರೆ ನಂಬುವುದು ಕಷ್ಟವಾಗುತ್ತದೆ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ತುಂಬುವುದು ಸಾಧ್ಯವಿಲ್ಲ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ. ಪುನೀತ್ ಅವರ ನಿಧನದ ನೋವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತನು ಅವರ ಕುಟುಂಬದ ಸದಸ್ಯರಿಗೆ, ಬಂಧುಬಾಂಧವರಿಗೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ; ಪರಮಾತ್ಮನು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಶಾಸಕ ಜ್ಯೋತಿ ಗಣೇಶ್ ಕಂಬನಿ:


ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಅಭಿಮಾನಿ ನಟ ಸಾರ್ವಭೌಮ ಪುನೀತ್ ರಾಜಕುಮಾರ್ ಅವರು ನಿಧನರಾದ ಸುದ್ದಿ ತಿಳಿದು ಆಘಾತವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ತುಮಕೂರು ಶಾಸಕ ಜಿಬಿ ಜ್ಯೋತಿ ಗಣೇಶ್ ಪ್ರಾರ್ಥಿಸಿದ್ದಾರೆ.

ಮಾಜಿ ಸಚಿವ ಈಶ್ವರ್ ಖಂಡ್ರೆ:
ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಹೇಳಲು ಮಾತುಗಳು ಬರುತ್ತಿಲ್ಲ. ಒಮ್ಮೊಮ್ಮೆ ಅನಿಸುವುದು ದೇವರು ಎಷ್ಟು ಕ್ರೂರಿ ಎಂದು. ಅಗಲಿದ ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ, ನಿಮ್ಮ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಕೂಡ ಬಾಗಿಯಾಗಿದ್ದೇನೆ.

ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ:
ಕನ್ನಡ ಚಿತ್ರರಂಗದಲ್ಲಿ ಅಭಿನಯದ ಕಾರಣಕ್ಕೇ ಇಷ್ಟವಾಗುತ್ತಿದ್ದ ಬೆಟ್ಟದ ಹೂವು ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತ್ಯಂತ ಬೇಸರವಾಗಿದೆ. ಕಣ್ಣ ಮುಂದೆ ಬೆಳೆಯಬೇಕಾದ ಹುಡುಗರು ಹೀಗೆ ಅಕಾಲಿಕವಾಗಿ ಕಣ್ಮರೆಯಾಗುವ ನೋವು ಅಸಹನೀಯವಾದದ್ದು. ನಿಮ್ಮ ನಗು ಮುಖ ಹಾಗೂ ನಟನಾ ಪ್ರತಿಭೆಯು ಸದಾ ಜೀವಂತ

ಸಚಿವ ಮುರುಗೇಶ್ ನಿರಾಣಿ:
ವರನಟ ಡಾ.ರಾಜ್‍ಕುಮಾರ್ ಅವರಂತೆ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಎಂದೂ ಗರ್ವದಿಂದ ನಡೆಸಿಕೊಂಡವರಲ್ಲ. ಅದೇ ಕಾರಣಕ್ಕಾಗಿ ಬಹುಬೇಗನೆ ಎತ್ತರಕ್ಕೆ ಬೆಳೆದಿದ್ದರು. 'ನಾನೊಂದು ಬಗೆದರೆ, ದೈವ ಇನ್ನೊಂದು ಬಗೆಯಿತು ಎಂಬತಾಗಿದೆ!'

   ಆರಗ ಜ್ಞಾನೇಂದ್ರ : ಪುನೀತ್ ಇನ್ನಿಲ್ಲ: ದೇವರನ್ನು ಅಪ್ಪಿಕೊಂಡ ಅಪ್ಪು | Oneindia Kannada

   English summary
   Political Leaders express Condolences to Kannada Actor Puneeth Rajkumar Death.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X