ಬೈಕ್ ಓಡಿಸುವ ಪೊಲೀಸರಿಗೆ ಬಂತು ಖಡಕ್ ಸುತ್ತೋಲೆ!
ಬೆಂಗಳೂರು, ಮಾರ್ಚ್ 20: ಹಲವಾರು ಪೊಲೀಸರು ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸುವುದಿಲ್ಲ. ಜನರಿಗೆ ನೀತಿ ಪಾಠ ಹೇಳುವ ಪೊಲೀಸರೇ ನಿಯಮ ಉಲ್ಲಂಘನೆ ಮಾಡುತ್ತಾರೆ. ಈ ಕುರಿತ ಫೋಟೋ, ವಿಡಿಯೋ ಆಗಾಗ ವೈರಲ್ ಆಗುತ್ತದೆ.
ಈಗ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಕಛೇರಿ, ಕರ್ನಾಟಕ ರಾಜ್ಯ ಬೆಂಗಳೂರು ಸುತ್ತೋಲೆಯೊಂದನ್ನು ಹೊರಡಿಸಿದೆ. ಅಲೋಕ್ ಕುಮಾರ್, ಐಪಿಎಸ್. ಎಡಿಜಿಪಿ (ಟಿ & ಆರ್‌ಎಸ್) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಪರವಾಗಿ ಅನುಮೋದಿಸಲಾದ ಸುತ್ತೋಲೆ ಇದಾಗಿದೆ.

ಈ ಸುತ್ತೋಲೆ ರಾಜ್ಯದ ಎಲ್ಲಾ ಘಟಕಗಳಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಲ್ಮಟ್ ಧರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಈ ಕುರಿತು ಎಲ್ಲಾ ಪೊಲೀಸ್ ಆಯುಕ್ತರುಗಳಿಗೆ (ಬೆಂಗಳೂರು ನಗರ ಹೊರತುಪಡಿಸಿ), ಜಂಟಿ ಪೊಲೀಸ್ ಆಯುಕ್ತರು, ಸಂಚಾರ, ಬೆಂಗಳೂರು ನಗರ. ಎಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಸುತ್ತೋಲೆ ಕಳಿಸಲಾಗಿದೆ.
ಸುತ್ತೋಲೆಯ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮಟ್ ಧರಿಸದೇ, ರಸ್ತೆ ಅಪಘಾತಗಳು ಉಂಟಾಗಿ, ಕೆಲವು ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಮತ್ತು ಕೆಲವರು ಮೃತಪಟ್ಟಿರುವ ಘಟನೆಗಳು ಸಂಭವಿಸಿರುವುದು ಕಂಡು ಬಂದಿರುತ್ತದೆ.
ಆದ್ದರಿಂದ, ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು, ರಾಜ್ಯಾದ್ಯಂತ ಎಲ್ಲಾ ಘಟಕಗಳಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಲಂ 129(ಎ) & (ಬಿ) ರಲ್ಲಿ ನಮೂದಿಸಿರುವಂತೆ ಹಾಗೂ ಸೂಚಿಸಿರುವಂತ ಕಡ್ಡಾಯವಾಗಿ ಸುರಕ್ಷಿತ ಹೆಲ್ಮಟ್ ಅನ್ನು ಧರಿಸಿ, ಸದರಿ ಹೆಲ್ಮಟ್ ಅನ್ನು ಭದ್ರವಾಗಿ ಕಟ್ಟಿಕೊಳ್ಳುವುದು (to strap the helmet) ಎಂದು ಹೇಳಿದೆ.
ಮೋಟಾರು ವಾಹನ ಕಾಯ್ದೆಯ ಕಲಂ 129 (ಎ) & (ಬಿ) ರಡಿಯಲ್ಲಿ ಹೆಲ್ಮೆಟ್‌ನ ನಿರ್ದಿಷ್ಟತೆಯ ಬಗ್ಗೆ ವಿವರಿಸಿದ್ದು, ಆ ಪ್ರಕಾರ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಸುರಕ್ಷಿತ ಹೆಲ್ಮೆಟ್ ಅನ್ನು ಧರಿಸುವಂತೆ ನಿರ್ದೇಶನಗಳನ್ನು ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದೆ.
ಬೈಕ್ ಚಲಾಯಿಸುವವರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ಈಗಾಗಲೇ ಇದೆ. ಇಲ್ಲವಾದರೆ 500 ರೂ. ದಂಡ ಹಾಕಲಾಗುತ್ತದೆ. ಅರ್ಧ ಹೆಲ್ಮೆಟ್ ಮತ್ತು ಐಎಸ್‌ಐ ಪ್ರಮಾಣ ಪತ್ರ ಇಲ್ಲದ ಹೆಲ್ಮೆಟ್ ಧರಿಸದಿದ್ದರೆ ದಂಡವನ್ನು ವಿಧಿಸಲಾಗುತ್ತದೆ.
ಆದರೆ ಹಲವು ಬಾರಿ ಸಂಚಾರಿ ಮತ್ತು ಸಾಮಾನ್ಯ ಪೊಲೀಸರು ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಾರೆ. ಜನರಿಗೆ ನೀತಿ ಪಾಠ ಹೇಳುವ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿಕೊಂಡು ಓಡಾಡುತ್ತಾರೆ. ಗಸ್ತು ತಿರುಗುವ ಎಷ್ಟೋ ಪೊಲೀಸರು ಹೆಲ್ಮೆಟ್ ಧರಿಸುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್‌ಗಳನ್ನು ನೋಡಬಹುದು.
ಪೊಲೀಸರ ವರ್ತನೆಯಿಂದ ಆಗುವ ಮುಜುಗರ ತಪ್ಪಿಸಿಕೊಳ್ಳಲು ಮತ್ತು ನಿಯಮಗಳನ್ನು ಅವರು ಸುರಕ್ಷತೆ ದೃಷ್ಟಿಯಿಂದ ಪಾಲಿಸುವಂತಾಗಲು ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದನ್ನು ಪೊಲೀಸರು ಪಾಲಿಸುತ್ತಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications