PM Modi Karnataka Visit: ಫೆ.27ಕ್ಕೆ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಅಂದಿನ ಕಾರ್ಯಕ್ರಮಗಳೇನು?
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯನ್ನು ಬಿಜೆಪಿಯ ಹೈಕಮಾಂಡ್ ನಾಯಕರು ಸವಾಲು ಎಂಬಂತೆ ಸ್ವೀಕರಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ. 27 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಬೆಳಗಾವಿ, ಫೆಬ್ರವರಿ 20: ಕರ್ನಾಟಕ ವಿಧಾನಸಭಾ ಚುನಾವಣೆ 2023 ಇನ್ನೇನು ಸಮೀಪಿಸುತ್ತಿದೆ. ಈ ಚುನಾವಣೆಯನ್ನು ಬಿಜೆಪಿಯ ಹೈಕಮಾಂಡ್ ನಾಯಕರು ಸವಾಲು ಎಂಬಂತೆ ಸ್ವೀಕರಿಸಿದ್ದಾರೆ. ಇದರ ಭಾಗಾವೇನೋ ಎಂಬಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಭೇಟಿ ಮುಂದುವರಿದಿದೆ.
ಚುನಾವಣಾ ದೃಷ್ಟಿಯಿಂದ ರಾಜ್ಯದ ಬೃಹತ್ ಜಿಲ್ಲೆಗಳತ್ತ ಬಿಜೆಪಿ ಗಮನ ಹರಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧ ಶಕ್ತಿ ಪ್ರದರ್ಶನಕ್ಕಾಗಿ ಹಾಗೂ ಮತದಾರರನ್ನು ಸೆಳೆಯಲು ಇದೇ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ದೊಡ್ಡ ಜಿಲ್ಲೆಯಾದ ಬೆಳಗಾವಿಗೆ ಆಗಮಿಸಲಿದ್ದಾರೆ.

ಫೆಬ್ರವರಿ 27 ರಂದು ಮೊದಲ ಮಲೆನಾಡಿನ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಮಧ್ಯಾಹ್ನ 2.15 ರಿಂದ 3.30 ರವರೆಗೆ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿನ ಸಾವಗಾವ್, ಜಿಲ್ಲಾ ಕ್ರೀಡಾಂಗಣ, ಮಾಲಿನಿ ಗಾರ್ಡನ್, ಸಿಪಿಎಡ್ ಮೈದಾನ ಭದ್ರತಾ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬಳಿಕ ಸಮಾವೇಶದ ಸ್ಥಳ ಅಧಿಕೃತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರೈಲು ನಿಲ್ದಾಣ ಉದ್ಘಾಟಿಸುವ ಜೊತೆಗೆ ಪ್ರಧಾನಮಂತ್ರಿಗಳು ರೈತ ಸನ್ಮಾನ ನಿಧಿಯ ಎರಡನೇ ಕಂತಿನ ಹಣ ಬಿಡುಗಡೆಗೂ ಚಾಲನೆ ನೀಡುವ ಸಾಧ್ಯತೆ ಇದೆ. ರಾಜ್ಯದ ದೊಡ್ಡ ಜಿಲ್ಲೆ ಎನ್ನಲಾಗುವ ಬೆಳಗಾವಿ ವ್ಯಾಪ್ತಿಯೊಂದರಲ್ಲೇ 18 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಕಾರ್ಯಕ್ರಮಕ್ಕೆ ಎರಡು ಲಕ್ಷ ಹೆಚ್ಚು ಜನ ಸೇರಿಸಲು ಯೋಜಿಸಲಾಗಿದೆ. ಇದು ಚುನಾವಣೆ ಸಂಬಂಧ ಬಿಜೆಪಿ ಮಾಡುತ್ತಿರುವ ಪೂರ್ವ ಸಿದ್ಧತೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆ ಸೇರಿದಂತೆ ಮೂರು ಸಂಘಟನಾತ್ಮಕ ಜಿಲ್ಲೆಗಳಿಂದ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ಸಮಾವೇಶ ನಡೆಸುವ ಸ್ಥಳದ ಬಗ್ಗೆ ಸರ್ಕಾರದಿಂದ ಪರಿಶೀಲನೆ ನಡೆಸುತ್ತಿದ್ದು, ಬಳಿಕವೇ ಅಂತಿಮಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications