ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ನಾಯಕರಿಂದ ರಾಜ್ಯದಲ್ಲಿ ಪ್ರಚಾರ: ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
ಕರ್ನಾಟಕ ವಿಧಾನಸಭಾ ಚುನಾವಣೆ ದಿಕಳೆದಂತೆ ರಂಗೇರುತ್ತಿದೆ. ಬಿಜೆಪಿ ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದೆ. ರಾಜ್ಯದ ಚುನಾವಣಾ ರ್‍ಯಾಲಿಯಲ್ಲಿ ರಾಷ್ಟ್ರ ಮತ್ತು ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಯಾರೆಲ್ಲಾ ಪ್ರಮುಖರು ಪ್ರಚಾರ ಮಾಡುತ್ತಾರೆ ಎನ್ನುವ ಪಟ್ಟಿಯನ್ನು ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖರು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಹಲವು ಹಿರಿಯ ನಾಯಕರನ್ನು ಕಡೆಗಣಿಸಿ, ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್ ಸೇರಿದಂತೆ ಪ್ರಮುಖರು ಟಿಕೆಟ್ ಕೈತಪ್ಪಿದ ಬಳಿಕ ಪಕ್ಷ ತೊರೆದಿದ್ದಾರೆ. ಮತ್ತೆ ಕೆಲವು ಕ್ಷೇತ್ರಗಳ ನಾಯಕರು ಟಿಕೆಟ್ ಕೈ ತಪ್ಪಿದರೂ ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಹೊಸ ಮುಖಗಳನ್ನು ಗೆಲ್ಲಿಸಲು ಬಿಜೆಪಿ ಪ್ರಮುಖ ನಾಯಕರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದೆ.

ಬಿಜೆಪಿ ಚುನಾವಣಾ ಆಯೋಗಕ್ಕೆ ನೀಡಿರುವ ಪಟ್ಟಿಯಲ್ಲಿ 40 ಪ್ರಮುಖರ ಹೆಸರು ನೀಡಲಾಗಿದೆ. ರಾಷ್ಟ್ರಮಟ್ಟದ ನಾಯಕರು ಮತ್ತು ರಾಜ್ಯಮಟ್ಟದ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಜಗತ್ ಪ್ರಕಾಶ್ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತೀಶ್ ಗಡ್ಕರಿ, ಧರ್ಮೇಂದ್ರ ಪ್ರಧಾನ್, ಯೋಗಿ ಆದಿತ್ಯನಾಥ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮನ್ಸುಕ್‌ಭಾಯ್ ಮಾಂಡವೀಯ, ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ, ಅರುಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಹೇಮಂತ್ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವೀಸ್ ರಾಷ್ಟ್ರಮಟ್ಟದ ನಾಯಕರಾಗಿದ್ದು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಪ್ರಮುಖ ಬಿಜೆಪಿ ನಾಯಕರಾಗಿರುವ ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಷಿ, ಸದಾನಂದ ಗೌಡ, ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಆರ್ ಅಶೋಕ್, ಡಿಕೆ ಅರುಣ, ಸಿ.ಟಿ. ರವಿ, ಪ್ರಭಾಕರ್ ಕೋರೆ, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ, ಭಗವಂತ್ ಖೂಬಾ, ಅರವಿಂದ್ ಲಿಂಬಾವಳಿ, ಬಿ ಶ್ರೀರಾಮುಲು, ಕೋಟಾ ಶ್ರೀನಿವಾಸ್ ಪೂಜಾರಿ, ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾಧವ್, ಛಲವಾದಿ ನಾರಾಯಣಸ್ವಾಮಿ, ಎನ್ ರವಿಕುಮಾರ್, ಜಿ.ವಿ. ರಾಜೇಶ್, ಜಗ್ಗೇಶ್, ಶೃತಿ, ತಾರಾ ಅನುರಾಧ ಬಿಜೆಪಿ ತಾರಾ ಪ್ರಚಾರಕರಾಗಿ ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಸುದೀಪ್ ಪ್ರಚಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ನಟ ಕಿಚ್ಚ ಸುದೀಪ್ ಪ್ರಚಾರ ಮಾಡಲಿದ್ದಾರೆ. ಸಾಕಷ್ಟು ಪರ ವಿರೋಧದ ನಡುವೆಯೇ ಸುದೀಪ್ ಅವರು ಬೊಮ್ಮಾಯಿ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದು, ಇಂದಿನಿಂದ (ಏಪ್ರಿಲ್ 19) ಪ್ರಚಾರ ಆರಂಭಿಸಲಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬೊಮ್ಮಾಯಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಸಿಎಂ ಬೊಮ್ಮಾಯಿಗೆ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ನಟ ಕಿಚ್ಚ ಸುದೀಪ್ ಜೊತೆಯಾಗಲಿದ್ದಾರೆ. ಇವರಿಬ್ಬರೂ ಹುಬ್ಬಳ್ಳಿಯಿಂದ ಶಿಗ್ಗಾಂವಿಗೆ ಒಂದೇ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಮೊದಲು ನಡೆಯು ರೋಡ್ ಶೋನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications