ಅನ್ನಭಾಗ್ಯದ ವಿಚಾರದಲ್ಲಿ ಮೋದಿ ಸರ್ಕಾರದಿಂದ ಬಡವರ ವಿರೋಧಿ ಡರ್ಟಿ ಪಾಲಿಟಿಕ್ಸ್: ಯೋಜನೆ ಘೋಷಿಸಿದ ಬಳಿಕ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಜುಲೈ 10: ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣವೇ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಲ್ಲಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅದು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವೇನು ಪುಕ್ಕಟ್ಟೆ ಕೊಡುತ್ತಿರಲಿಲ್ಲ. ಕೆಜಿಗೆ 34 ರೂ ನಮ್ಮಿಂದ ತೆಗೆದುಕೊಳ್ಳುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅನ್ನ ಭಾಗ್ಯ ಯೋಜನೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮಾಡುವ ಮೂಲಕ ಚಾಲನೆ ನೀಡಿದರು.
ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು ಎಂದು ಆರೋಪಿಸಿದರು. ಆದರೆ ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿದರು.
ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕನ್ನಡ ಜನತೆ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ ಎಂದು ಪ್ರಶ್ನಿಸಿದರು.

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170ರೂ ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು- ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ ಎಂದು ಸಿಎಂ ಪ್ರಶ್ನಿಸಿದರು.
ನಿಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಿರ್ವಹಿಸಿ ಎಂದು ಜನರಿಗೆ ಕರೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 50ನೇ ದಿನಕ್ಕೇ ಅನ್ನಭಾಗ್ಯಕ್ಕೆ ಚಾಲನೆ ನೀಡಲಾಯಿತು. ಇದು ಸಿದ್ದರಾಮಯ್ಯನವರ ಮಹತ್ವದ ಯೋಜನೆಯಾಗಿದೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅನ್ನಭಾಗ್ಯದ ಲೋಗೋ ಬಿಡುಗಡೆ ಮಾಡಿದರು. ಯೋಜನೆಯ ಮಾಹಿತಿ ಪತ್ರವನ್ನು ಆರೋಗ್ಯ ಸಚಿವರಾದ ಕೆಹೆಚ್ ಮುನಿಯಪ್ಪ ಅವರು ಬಿಡುಗಡೆ ಮಾಡಿದರು.
ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲಿಗೆ ಹಣ ವರ್ಗಾವಣೆ ಆಯಿತು. ನಾಳೆಯಿಂದ ಪ್ರತಿದಿನ ಹಂತ ಹಂತವಾಗಿ ರಾಜ್ಯದ ಸರ್ವ ಫಲಾನುಭವಿಗಳಿಗೂ ಹಣ ವರ್ಗಾವಣೆ ಆಗಲಿದೆ.
10 ವರ್ಷಗಳ ಹಿಂದೆ ಇದೇ ದಿನ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು.

ಬಸವ ಜಯಂತಿಯಂದು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು, ಬಸವಣ್ಣನವರ ದಾಸೋಹ ಸಂಸ್ಕೃತಿಯಂತೆ ಹಸಿವು ಮುಕ್ತ ಕರ್ನಾಟಕ ಮಾಡುವ ತಮ್ಮ ಜೀವಮಾನದ ಆಶಯ ಮತ್ತು ಕಾಳಜಿಯ ಭಾಗವಾಗಿ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿದ್ದರು.
ವೇದಿಕೆಯಲ್ಲಿ ರಾಮಲಿಂಗಾರೆಡ್ಡಿ, ಬಿ.ಎಸ್.ಸುರೇಶ್, ಹೆಚ್.ಕೆ.ಪಾಟೀಲ್ ಸೇರಿ ಹಲವು ಸಚಿವರು ಮತ್ತು ಶಾಸಕರುಗಳು ಉಪಸ್ಥಿತರಿದ್ದರು.












Click it and Unblock the Notifications