ಸತ್ಸಂಗಕ್ಕೆ ಹೋಗ್ತೀನಿ ಅಂತ ನಂದಿಬೆಟ್ಟದ ಹೋಂಸ್ಟೇಗೆ ಕೇರಳ ಯುವಕನ ಜತೆ ಹೋದ ಯುವತಿ; ಬೆಳಗಾಗುವಷ್ಟರಲ್ಲಿ ಹೆಣವಾಗಿ ಪತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟದ ಸಮೀಪವಿರುವ ರೆಸಾರ್ಟ್ವೊಂದರಲ್ಲಿ ಭೀಕರ ಘಟನೆ ನಡೆದಿದ್ದು, ಫಿಸಿಯೋಥೆರಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅದೇ ಕೋಣೆಯಲ್ಲಿ ಆಕೆಯ ಪ್ರಿಯಕರ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಮೃತರ ಗುರುತು ಮತ್ತು ಹಿನ್ನೆಲೆ
ಮೃತ ಯುವತಿಯನ್ನು ಬೆಂಗಳೂರಿನ ಬನಶಂಕರಿ ನಿವಾಸಿ ಸಾಯಿ ಸುರಭಿ ಎಂದು ಗುರುತಿಸಲಾಗಿದೆ. ಈಕೆ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಆಕೆಯ ಪ್ರಿಯಕರನನ್ನು ಕೇರಳದ ಕೋಝಿಕ್ಕೋಡ್ ಮೂಲದ ಸಂಜೀತ್ ಅಲಿ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನಲ್ಲಿ ಇಂಜಿನಿಯರ್ ಓದುತ್ತಾ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಪೊಲೀಸ್ ಮಾಹಿತಿಯ ಪ್ರಕಾರ, ಸಂಜೀತ್ ಅಲಿ ಶನಿವಾರ ನಂದಿ ಬೆಟ್ಟದ ತಪ್ಪಲಿನ ಮುದ್ದೇನಹಳ್ಳಿ ಬಳಿಯ ರೆಸಾರ್ಟ್ಗೆ ಬಂದು ರೂಮ್ ಬುಕ್ ಮಾಡಿದ್ದ. ಆದರೆ ಸಾಯಿ ಸುರಭಿ ಅಲ್ಲಿಗೆ ಯಾವಾಗ ಬಂದಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸೋಮವಾರ ಬೆಳಗ್ಗೆ ಸಮಯ ಮುಗಿದರೂ ರೂಮ್ ಖಾಲಿ ಮಾಡದಿದ್ದಾಗ ರೆಸಾರ್ಟ್ ಸಿಬ್ಬಂದಿಗೆ ಸಂಶಯ ಬಂದಿದೆ. ಸಿಬ್ಬಂದಿ ಎಷ್ಟು ಬಾರಿ ಬಾಗಿಲು ತಟ್ಟಿದರೂ, ಫೋನ್ ಮಾಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ರೆಸಾರ್ಟ್ ಆಡಳಿತ ಮಂಡಳಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ.
ಕೋಣೆ ಒಳಗೆ ಕಂಡ ಭೀಕರ ದೃಶ್ಯ
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಸಾಯಿ ಸುರಭಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಆಕೆಯ ಕುತ್ತಿಗೆಗೆ ಹಗ್ಗವನ್ನು ಬಿಗಿಯಾಗಿ ಕಟ್ಟಲಾಗಿದ್ದು, ಉಸಿರುಗಟ್ಟಿಸಿ ಅಥವಾ ನೇಣು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅದೇ ಹಾಸಿಗೆಯ ಪಕ್ಕದಲ್ಲಿ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು. ಕೋಣೆಯಲ್ಲಿ ಕೆಲವು ಡೈರಿ ಬರಹಗಳು ಹಾಗೂ ಮಾತ್ರೆಗಳು ಪತ್ತೆಯಾಗಿದ್ದು, ಆಕೆಯನ್ನು ಕೊಂದು ತಾನು ಕೂಡ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ. ಸದ್ಯ ಆತನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಸಾಕ್ಷ್ಯಗಳನ್ನು ಕಲೆಹಾಕಿದೆ.
'ಲವ್ ಜಿಹಾದ್' ಆರೋಪ ಮಾಡಿದ ಯುವತಿಯ ತಾಯಿ
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರುವ ಸಾಯಿ ಸುರಭಿ ತಾಯಿ ಗೀತಾ ಮತ್ತು ಸೋದರ ಶಂಕರ್ ನಾರಾಯಣ್ ಅವರು ಇದು ಸ್ಪಷ್ಟ 'ಲವ್ ಜಿಹಾದ್' ಪ್ರಕರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. "ನನ್ನ ಮಗಳು ಕೇವಲ 10 ದಿನಗಳ ಹಿಂದೆಯಷ್ಟೇ ಮುದ್ದೇನಹಳ್ಳಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು. ಆಕೆಗೆ ಓಡಾಡಲು ಅನುಕೂಲವಾಗಲಿ ಎಂದು ಚಿಕ್ಕಬಳ್ಳಾಪುರದಲ್ಲೇ ಸಣ್ಣ ಮನೆ ಬಾಡಿಗೆಗೆ ಮಾಡಿಕೊಟ್ಟಿದ್ದೆವು. ವಾರಾಂತ್ಯದಲ್ಲಿ ನಾವು ಬೆಂಗಳೂರಿನ ಮನೆಗೆ ಹೋಗುತ್ತಿದ್ದೆವು. ಶನಿವಾರ ಆಸ್ಪತ್ರೆಯಲ್ಲಿ ಸತ್ಸಂಗ ಇದೆ, ಅಲ್ಲೇ ಉಳಿದುಕೊಳ್ಳುತ್ತೇನೆ ಎಂದು ಮಗಳು ಹೇಳಿದ್ದಳು. ಆದರೆ ಹೀಗಾಗುತ್ತದೆ ಎಂದು ಅಂದುಕೊಂಡಿರಲಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.
ಮಾದಕ ವ್ಯಸನ ಮತ್ತು ಕಿರುಕುಳದ ಆರೋಪ
"ಆತ (ಸಂಜೀತ್ ಅಲಿ) ನನ್ನ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಆಕೆಗೆ ಬಲವಂತವಾಗಿ ಡ್ರಗ್ಸ್ ಹಾಗೂ ಮದ್ಯ ಸೇವಿಸುವಂತೆ ಮಾಡುತ್ತಿದ್ದ. ಈ ಹಿಂದೆ ಆತನಿಂದ ಮಗಳನ್ನು ಬಿಡಿಸಿ, ರಿಹ್ಯಾಬಿಲಿಟೇಶನ್ (ಪುನರ್ವಸತಿ) ಕೇಂದ್ರಕ್ಕೆ ಸೇರಿಸಿ ಗುಣಪಡಿಸಿದ್ದೆವು. ಆದರೆ ಆತ ಮತ್ತೆ ನನ್ನ ಮಗಳ ಸಂಪರ್ಕಕ್ಕೆ ಬಂದಿದ್ದಾನೆ. ಆತನ ಸಹವಾಸಕ್ಕೆ ಹೋಗದಿದ್ದರೆ ನನ್ನ ಮಗಳು ಇಂದು ನಮ್ಮೊಂದಿಗೆ ಜೀವಂತವಾಗಿ ಇರುತ್ತಿದ್ದಳು" ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪ್ರಜ್ಞೆಗೆ ಬಂದ ಬಳಿಕ ಘಟನೆಗೆ ನಿಖರ ಕಾರಣ ಏನೆಂಬುದು ತಿಳಿಯಬೇಕಿದೆ.













Click it and Unblock the Notifications