ಸಿಎಂ ಸಿದ್ದರಾಮಯ್ಯ ಮೇಲೆ ಕೇರಳದಲ್ಲಿ ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರಾ?
ಬೆಂಗಳೂರು, ಜೂನ್. 17: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಇಂಧನ ಬೆಲೆ ಹೆಚ್ಚಳ ಮಾಡಿ ಆದೇಶಿಸಿದೆ. ಮಾರಾಟ ತೆರಿಗೆಯನ್ನು ಪರಿಷ್ಕರಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸುಮಾರು 3 ಮತ್ತು 3.05 ರೂಪಾಯಿಯಷ್ಟು ಹೆಚ್ಚಾಗಲಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲದೇ ಸಕತ್ ಟಾಂಗ್‌ಗಳನ್ನು ಕೊಡುತ್ತಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೂನ್ 16 (ಭಾನುವಾರ) ರಂದು ವಿವಿಧ ಭಾಗಗಳಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸಿದ್ದರಾಮಯ್ಯ ಅವರ ಹಳೆಯ ಟ್ವೀಟ್‌ಗಳನ್ನು ಕೆದಕಿ ಕೆದಕಿ ಕಿಡಿ ಕಾರುತ್ತಿದ್ದಾರೆ.

ಹಳೆಯ ಟ್ವೀಟ್‌ಗಳನ್ನು ಕೆದಕಿ ಕೆದಕಿ ಆರ್ ಅಶೋಕ್ ಕಿಡಿ
ಕೇಂದ್ರ ಬಿಜೆಪಿ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗಳನ್ನು ಮತ್ತೆ ಹಂಚುತ್ತಿರುವ ಆರ್ ಅಶೋಕ್, "ಬೇರೆ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ನಮಗೆ ಮುಖ್ಯವಲ್ಲ. ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು ಎಂದು ಉಪದೇಶ ಮಾಡುತ್ತಿದ್ದ ಸಿದ್ದರಾಮಯ್ಯನವರು ಈಗ ಅಧಿಕಾರಕ್ಕೆ ಬಂದಮೇಲೆ ಸಿಕ್ಕಾಪಟ್ಟೆ ಉಲ್ಟಾ ಹೊಡೆಯುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ಮುಂದುವರಿದು, ಕೇರಳ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಯಾಗದ ಬಗ್ಗೆ ಮಾತನಾಡಿದ್ದಾರೆ. " ಕೇರಳದಲ್ಲಿ ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರಾ ಅಂತ ಡಿಕೆ ಶಿವಕುಮಾರ್ ಅವರನ್ನ ಒಮ್ಮೆ ವಿಚಾರಿಸಿ ನೋಡಿ ಸಿಎಂ ಸಿದ್ದರಾಮಯ್ಯನವರೇ" ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಹಳೇ ಟ್ವೀಟ್‌ನಲ್ಲಿ ಏನಿದೆ?
ಸಿಎಂ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 13, 2021ರಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡಸಿದ್ದರು. ಈ ವೇಳೆ ತಮ್ಮ ಟ್ವಿಟರ್ ಖಾತೆಯಲ್ಲಿ "ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನಮಗೆ ಮುಖ್ಯವಲ್ಲ, ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು, ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕಡಿತ ಮಾಡಬೇಕು ಎಂದು ಆಗ್ರಹಿಸುತ್ತೇನೆ" ಎಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಇದೇ ಪೋಸ್ಟ್‌ಗಳನ್ನು ಆರ್. ಅಶೋಕ್ ಹಂಚಿಕೊಳ್ಳುತ್ತಿದ್ದಾರೆ.

ಇನ್ನು, ಸಿದ್ದರಾಮಯ್ಯ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಅಂಕಿ ಅಂಶಗಳಲ್ಲಿ ಸಮರ್ಥನೆ ನೀಡಿದ್ದಾರೆ. "ಕರ್ನಾಟಕ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು 29.84% ಮತ್ತು ಡೀಸೆಲ್ ಮೇಲೆ 18.44% ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದ ನಂತರವೂ, ಇಂಧನದ ಮೇಲಿನ ನಮ್ಮ ರಾಜ್ಯದ ತೆರಿಗೆಗಳು ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳು ಮತ್ತು ಮಹಾರಾಷ್ಟ್ರದಂತಹ ಆರ್ಥಿಕ ಸಮೃದ್ಧ ರಾಜ್ಯಗಳಿಗಿಂತ ಕಡಿಮೆಯಾಗಿವೆ" ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ, ಪೆಟ್ರೋಲ್ ಮೇಲಿನ ವ್ಯಾಟ್ 25% ಜೊತೆಗೆ ರೂ 5.12 ಹೆಚ್ಚುವರಿ ತೆರಿಗೆ ಮತ್ತು ಡೀಸೆಲ್ ಮೇಲೆ 21% ಆಗಿದೆ. ಕರ್ನಾಟಕದ ಪರಿಷ್ಕೃತ ದರಗಳು ಇನ್ನೂ ಕೈಗೆಟುಕುವ ದರದಲ್ಲಿವೆ. ವ್ಯಾಟ್ ಹೆಚ್ಚಳದ ಹೊರತಾಗಿಯೂ, ಕರ್ನಾಟಕದಲ್ಲಿ ಡೀಸೆಲ್ ಬೆಲೆ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತ ಕಡಿಮೆಯಾಗಿದೆ. ನಮ್ಮ ನಾಗರಿಕರಿಗೆ ಇಂಧನ ಬೆಲೆಗಳನ್ನು ಸಮಂಜಸವಾಗಿಡಲು ನಾವು ಬದ್ಧರಾಗಿದ್ದೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಆಗಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕರ್ನಾಟಕದ ಸಂಪನ್ಮೂಲಗಳನ್ನು ಬೇರೆ ರಾಜ್ಯಗಳಿಗೆ ತಿರುಗಿಸಲು ಸಹಕರಿಸಿತು. ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುತ್ತಲೇ ಇತ್ತು ಆದರೆ ಕೇಂದ್ರ ಸರ್ಕಾರ ತನ್ನದೇ ಆದ ತೆರಿಗೆಯನ್ನು ಹೆಚ್ಚಿಸಿದೆ. ಇದು ಕರ್ನಾಟಕದ ಆದಾಯ ಕಡಿಮೆಯಾಗಲು ಕಾರಣವಾಯಿತು, ಆದರೆ ಕೇಂದ್ರ ಸರ್ಕಾರವು ತನ್ನ ಬೊಕ್ಕಸ ತುಂಬಿಸಿಕೊಂಡು ಕನ್ನಡಿಗರಿಗೆ ಮೋಸ ಮಾಡಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications