ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಬೆಂಕಿ ಅನಾಹುತ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 14 : ನಗರದ ತೋಳನಕೆರೆ ಪ್ರದೇಶದಲ್ಲಿ ಹಾದು ಹೋಗಿರುವ ಗ್ಯಾಸ್ ಅಥಾರೀಟಿ ಆಫ್ ಇಂಡಿಯಾ (ಗೇಲ್) ಪೈಪ್ ಇರುವ ಸ್ಥಳದ ಮೇಲ್ಭಾಗದಲ್ಲಿ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಜನರ ಸಮಯ ಪ್ರಜ್ಞೆಯಿಂದಾಗಿ ಭಾರೀ ಬೆಂಕಿ ಅನಾಹುತ ತಪ್ಪಿದೆ.

ಬುಧವಾರ ರಾತ್ರಿ 11.30ರ ಸುಮಾರಿಗೆ ಗೋಕುಲ್ ರಸ್ತೆಯಲ್ಲಿರುವ ತೋಳನಕೆರೆ ಪಕ್ಕದಲ್ಲಿ ಯಾರೋ ಬಳಸಿ ಉಳಿದ ಎಳನೀರು ಕಾಯಿಗಳಿಗೆ ಬೆಂಕಿ ಇಟ್ಟಿದ್ದರು. ಈ ಬೆಂಕಿ ಹತ್ತಿದ ಜಾಗದ ಕೆಳಗೆ ಕೇವಲ ಒಂದು ಮೀಟರ್ ಅಂತರದಲ್ಲಿ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದವರ (ಗೇಲ್) ಗ್ಯಾಸ್ ಪೈಪ್ ಲೈನ್ ಇತ್ತು. [ಆಂಧ್ರ ಗ್ಯಾಸ್ ಪೈಲ್ ಲೈನ್ ಸ್ಫೋಟದ ಚಿತ್ರಗಳು]

hubballi

ಅಕಸ್ಮಾತ್ ಆಗಿ ಬೆಂಕಿ ರಾತ್ರಿಯಿಡೀ ಉರಿಯುತ್ತಾ ಇದ್ದರೆ, ಗ್ಯಾಸ್ ಪೈಪ್ ಕರಗಿ ಗ್ಯಾಸ್ ಲೀಕ್ ಆಗಿ ಭಾರೀ ಬೆಂಕಿ ಅನಾಹುತ ಸಂಭವಿಸುತ್ತಿತ್ತು. ಅತೀ ಹೆಚ್ಚಿನ ಮತ್ತು ಒತ್ತಡದ ಗ್ಯಾಸ್ ಇದರಲ್ಲಿ ಹರಿಯುತ್ತಿದೆ. ನಗರದ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಒಂದೆರಡು ಕಂಪನಿಗಳಿಗೆ ಇದೇ ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜಾಗುತ್ತಿದೆ. [ಆಂಧ್ರದಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟ]

ಉಣಕಲ್, ಶಿರೂರ ಪಾರ್ಕ್, ಚೇತನಾ ಕಾಲೇಜ್ ಮಾರ್ಗವಾಗಿ ಹಾದು ಹೋಗುವ ಪೈಪ್ ಲೈನ್ ತೋಳನಕೆರೆ ದಂಡೆಯ ಮೂಲಕ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿದೆ. ಪೈಪ್ ಲೈನ್ ಹಾಯ್ದು ಹೋಗಿರುವ ಮಾರ್ಗದುದ್ದಕ್ಕೂ ಗೇಲ್ ಕಂಪನಿಯವರು ಅಪಾಯದ ಮುನ್ಸೂಚನೆಯ ಕುರಿತು ಬೋರ್ಡ್ ಗಳನ್ನು ಹಾಕಿದ್ದಾರೆ. ಈ ಬೋರ್ಡ್ ಪಕ್ಕವೇ ಬೆಂಕಿ ಹೊತ್ತಿ ಭಾರೀ ಅನಾಹುತದ ಸೂಚನೆ ನೀಡಿತ್ತು.

-
-
-
-

ಮಾತಿನ ಚಕಮಕಿ : ಸ್ಥಳೀಯ ನಿವಾಸಿಗಳು ಬೆಂಕಿ ಅನಾಹುತದ ಮುನ್ಸೂಚನೆ ಅರಿತು ಗೇಲ್ ಕಂಪನಿಯವರಿಗೆ ಕರೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ನಂತರ ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದರು. ನಮಗೇಕೆ ಕರೆ ಮಾಡಿದ್ದೀರಿ? ಅಗ್ನಿಶಾಮಕ ದಳದವರಿಗೆ ಕರೆ ಮಾಡಬಾರದಿತ್ತೇ? ಎಂದು ಪ್ರಶ್ನಿಸಿದರು.

ಈ ಸಮಯದಲ್ಲಿ ಜನರು ಅಧಿಕಾರಿಗಳಾದ ರವಿಶಂಕರ ಮತ್ತು ಜಿಯಾ ಸೇನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಾಗಾದರೆ ಅಪಾಯಕಾರಿ ಪ್ರದೇಶವೆಂದು ಹಾಕಿರುವ ಬೋರ್ಡ್ ನಲ್ಲಿ ನಿಮ್ಮ ನಂಬರ್ ಯಾಕೆ ಹಾಕಿದ್ದೀರಿ? ಅಗ್ನಿಶಾಮಕ ದಳದವರ ನಂಬರ್ ಯಾಕೆ ಹಾಕಿಲ್ಲ? ಎಂದು ಪ್ರಶ್ನಿಸಲಾರಂಭಿಸಿದರು.

ಇದರಿಂದ ಗಲಿಬಿಲಿಗೊಂಡ ಅಧಿಕಾರಿಗಳು ಕೂಡಲೇ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದರು. ಮಧ್ಯ ರಾತ್ರಿ 12-30ರ ಸುಮಾರಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದ ಒಂದು ವಾಹನ ಬೆಂಕಿಯನ್ನು ನಂದಿಸಿ, ಆಗಲಿದ್ದ ಭಾರೀ ಅನಾಹುತವನ್ನು ತಪ್ಪಿಸಿತು.

ಗ್ಯಾಸ್ ಲೀಕ್ ಆಗಿದ್ದರೆ ? : ಒಂದು ವೇಳೆ ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿಕೊಂಡಿದ್ದರೆ ಗ್ಯಾಸ್ ಪೈಪ್ ಇರುವ ನಗರದ ಹಲವಾರು ಪ್ರದೇಶಗಳಲ್ಲಿ ಬೆಂಕಿ ಅನಾಹುತ ಸಂಭವಿಸಿ ಭಾರೀ ಪ್ರಮಾಣದ ಜೀವಹಾನಿ ಆಗುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People noticed fire near Gas Authority of India Limited (GAIL) pipeline at Hubble on Wednesday midnight. Gas Authority of India officials visited the spot. Fire under control.
Please Wait while comments are loading...