ಈ ಜಿಲ್ಲೆಯ ಜನರಿಗೆ ಪೊಲೀಸ್ ಹುದ್ದೆ ಬಗ್ಗೆ ನಿರುತ್ಸಾಹ
ಬೆಳಗಾವಿ, ಡಿಸೆಂಬರ್ 15: ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಒಂದು ಜಿಲ್ಲೆಯ ಜನರು ಮಾತ್ರ ಪೊಲೀಸ್ ಹುದ್ದೆಗೆ ಸೇರಲು ನಿರುತ್ಸಾಹ ತೋರಿಸುತ್ತಿರುವುದು ರಾಜ್ಯ ಗೃಹ ಇಲಾಖೆಯನ್ನು ಚಿಂತೆಗೀಡು ಮಾಡಿದೆ.
ಹೌದು, ಈ ವಿಷಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ವಿಧಾನಸಭೆಗೆ ತಿಳಿಸಿದ್ದಾರೆ. ಈ ಜಿಲ್ಲೆಯ ಜನ ಪೊಲೀಸ್ ಹುದ್ದೆಗೆ ಬರಲು ಮುಂದಾಗಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ.
4000 ಪೊಲೀಸ್ ಪೇದೆ ನೇಮಕ
ರಾಜ್ಯದಲ್ಲಿ ಹೊಸದಾಗಿ ಸುಮಾರು 4000 ಪೊಲೀಸ್ ಪೇದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು ಮೂರುವರೆ ಲಕ್ಷದಷ್ಟು ಅರ್ಜಿಗಳು, ರಾಜ್ಯದೆಲ್ಲೆಡೆಯಿಂದ ಬಂದಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿಯ ಪ್ರಶ್ನೋತ್ತರ ವೇಳೆಯಲ್ಲಿ, ಬಿಜೆಪಿ ಸದಸ್ಯ ಸಂಜೀವ ಮಠದೂರ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ, ಪೊಲೀಸ್ ಪೇದೆಗಳ ಆಯ್ಕೆ ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಜಿಲ್ಲೆಯ ಜನ ಬರುತ್ತಿಲ್ಲ
4000 ಹುದ್ದೆಗಳಿಗೆ ಸುಮಾರು ಮೂರೂವರೆ ಲಕ್ಷದಷ್ಟು ಅರ್ಜಿಗಳು ಬಂದಿವೆ ನಿಜ. ಆದರೆ, ಒಂದು ಜಿಲ್ಲೆಯ ಜನರು ಮಾತ್ರ ಪೊಲೀಸ್ ಪೇದೆ ಹುದ್ದೆಗಳ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ಹೇಳಿ ಸಚಿವರು ಕುತೂಹಲ ಮೂಡಿಸಿದರು.
"ಅತೀ ಕಡಿಮೆ ಅರ್ಜಿಗಳು ಬಂದಿರುವ ಜಿಲ್ಲೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ಅತೀ ಕಡಿಮೆ ಅರ್ಜಿಗಳು ಸ್ವೀಕೃತವಾಗಿವೆ. ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ, ಕಾನ್ಸ್ಟೇಬಲ್ ಹುದ್ದೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಅರ್ಜಿಗಳು ಬಹಳ ಕಡಿಮೆ. ಸ್ವೀಕರಿಸಿದ ಅರ್ಜಿಗಳು ಕೆಲವೇ ಕೆಲವು ನೂರರಷ್ಟಿದ್ದು, ಸ್ಥಳೀಯ ಯುವಕರನ್ನು ಪೊಲೀಸ್ ಇಲಾಖೆಗೆ ಸೇರಲು ಪ್ರೋತಾಹಿಸಲಾಗುತ್ತಿದೆ " ಎಂದರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲದೆ, ಉಪ ಭಾಷೆಗಳಾದ ತುಳು ಮತ್ತು ಇತರ ಭಾಷೆಗಳೂ ಹೆಚ್ಚು ಬಳಕೆಯಲ್ಲಿವೆ. ಈ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ, ಸ್ಥಳೀಯ ಆಡು ಭಾಷೆಯ ಜ್ಞಾನ ಅತ್ಯಗತ್ಯವಿದೆ. ಹಾಗಾಗಿ ಸ್ಥಳೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದಾಗ ನೇಮಕಾತಿ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಹೇಳಿದರು.
ನೇಮಕಾತಿ ಪ್ರಕ್ರಿಯೆಯನ್ನು ಪ್ರಸ್ತುತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ, ವಲಯವಾರು ಮತ್ತು ಪೊಲೀಸ್ ಆಯುಕ್ತಾಲಯವಾರು ಮತ್ತು ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಮತ್ತು ಸಶಸ್ತ್ರ ಹುದ್ದೆಗಳಿಗೆ ಜಿಲ್ಲಾವಾರು ಅಧಿಸೂಚನೆಗಳನ್ನು ಹೊರಡಿಸಿ, ರಾಜ್ಯ ವ್ಯಾಪ್ತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಲಿಖಿತ ಮತ್ತು ದೇಹಧಾರ್ಢ್ಯತೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರ ಅಂತಿಮವಾಗಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಗೃಹ ಸಚಿವರು ಸದನಕ್ಕೆ ತಿಳಿಸಿದರು.












Click it and Unblock the Notifications