ಪಡಿತರ ವಿತರಣೆ: ಸರಕಾರದ ಮಹತ್ವದ ನಿರ್ಧಾರ, ಆದರೆ
ಬೆಂಗಳೂರು, ಮೇ 28: ಗೊಂದಲದ ಗೂಡಾಗಿರುವ, ಅಪಾತ್ರರಿಗೆ ಪ್ರಾಪ್ತಿಯಾಗುತ್ತಿರುವ ಪಡಿತರ ವಿತರಣೆಯನ್ನು ಸರಿದಾರಿಗೆ ತರುವ ನಿಟ್ಟನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕಾಳ ಸಂತೆ, ನಕಲಿಗೆ ಕುಮ್ಮಕ್ಕು ನೀಡುತ್ತಿರುವ ಇಂದಿನ ಪಡಿತರ ವಿತರಣೆ ವ್ಯವಸ್ಥೆಯನ್ನು ಬದಲಾಯಿಸಲು ಸರಕಾರ ನಿರ್ಧರಿಸಿದೆ. ಅಂದರೆ ರಾಜ್ಯದಾದ್ಯಂತ ಇನ್ನು ಮುಂದೆ ಪಡಿತರ ಧಾನ್ಯಗಳನ್ನು ಖಾಸಗಿ ಅಂಗಡಿಗಳು ವಿತರಿಸುವುದಿಲ್ಲ. ಬದಲಿಗೆ ಸರಕಾರ ತನ್ನದೇ ಅಧೀನದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ನಿರ್ವಹಣೆ ಮಾಡಲಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅವರು ಈ ವಿಷಯ ತಿಳಿಸಿದ್ದಾರೆ.
ತಕ್ಷಣಕ್ಕೆ ಸಾಧಕ ಬಾಧಕಗಳು ಏನೇ ಇರಲಿ. ಸರಕಾರದ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ, ಆದರೆ ದಿನೇಶ್ ಗುಂಡೂರಾವ್ ಸಾಹೇಬರು ಕಳೆದ ವಾರ ಒಂದು ಮಾತನ್ನು ಹೇಳಿದ್ದರು. ಫುಡ್ ವರ್ಲ್ಡ್, ಮಾಲ್ ಗಳಲ್ಲಿ ಪ್ರಾಯೋಗಿಕವಾಗಿ ಪಡಿತರ ವಿತರಣೆ ಮಾಡಲಾಗುವುದು ಎಂದಿದ್ದರು.

ಖಾಸಗಿಯವರಿಗೆ ನ್ಯಾಯಬೆಲೆ ಅಂಗಡಿಗಳನ್ನು ಕೊಡೋಲ್ಲ ಎಂದಿರುವ ಸಚಿವರು, ತೀರಾ ಖಾಸಗಿಯಾದ ಫುಡ್ ವರ್ಲ್ಡ್, ಮಾಲ್ ಗಳಲ್ಲಿ ಪಡಿತರ ವಿತರಣೆ ಮಾಡಲು ಹೊರಟಿದ್ದಾರೆ. ಅಂದರೆ ಇನ್ನು ಮುಂದೆ ಸರಕಾರದ ರೇಶನ್ ಪಡೆಯಲು ರೇಶನ್ ಕಾರ್ಡುದಾರರು ಮಾಲ್ ಸಂಸ್ಕೃತಿಗೆ ಶರಣಾಗಬೇಕಾ? ಇದು ನಿಜಕ್ಕೂ ರೇಶನ್ ಕಾರ್ಡುದಾರರನ್ನು ಅಪಹಾಸ್ಯ ಮಾಡಿದಂತೆಯೇ. ಸರಕಾರ ಇಂತಹ ಪ್ರಯೋಗವನ್ನು ಕೈಬಿಡಲಿ ಎಂದು ಆಶಿಸೋಣ.
ಮತ್ತೆ, ನಿಗಮವೇ ನ್ಯಾಯಬೆಲೆ ಅಂಗಡಿಗಳನ್ನು ನಿರ್ವಹಣೆ ಮಾಡುವ ವಿಷಯಕ್ಕೆ ಬರುವುದಾದರೆ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಗಳು ಬಂದ್ ಆಗಲಿವೆ. ಅಥವಾ ನಿಗಮವೇ ಆ ಅಂಗಡಿಗಳ ನಿರ್ವಹಣೆ ಮಾಡಲಿದೆ. ಆದರೆ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಪಡಿತರ ವಿತರಿಸುವುದಕ್ಕೆ ಯಾವುದೇ ಬಾಧೆಯಿಲ್ಲ. ಸ್ತ್ರೀ ಶಕ್ತಿ ಸಂಘಗಳಿಗೂ ಪಡಿತರ ವಿತರಣೆ ಜವಾಬ್ದಾರಿ ಹೊರಿಸುವ ಬಗ್ಗೆ ಸರಕಾರ ಆಲೋಚಿಸುತ್ತಿದೆ.
ರಾಜ್ಯದಲ್ಲಿ ಒಟ್ಟು 20,845 ಪಡಿತರ ಅಂಗಡಿಗಳಿವೆ. ಇದರಲ್ಲಿ 11,664 ಅಂಗಡಿಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. 9007 ಅಂಗಡಿಗಳು ಸಂಘದವರಿಂದ ನಿರ್ವಹಣೆ ಆಗುತ್ತಿದೆ. 174 ಮಳಿಗೆಗಳನ್ನು ಆಹಾರ ನಿಗಮದಿಂದ ನಿರ್ವಹಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಅಂಗನವಾಡಿಗಳಿಗೆ ಕಟ್ಟಡ ಒದಗಿಸುವಂತೆ ಪಡಿತರ ಅಂಗಡಿಗಳಿಗೂ ಕಟ್ಟಡ ಒದಗಿಸುವಂತೆ ಕೋರಲಾಗುತ್ತದೆ. ಅಂಗಡಿ ನಿರ್ವಹಣೆಗೆ ಇಲಾಖೆ ವತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತದೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವ ಆಲೋಚನೆ ಇದೆ. ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ಅನಿವಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications