ಸಭಾಪತಿ ವಿರುದ್ಧ ಅವಿಶ್ವಾಸ: ಮಂಗಳವಾರ ಮತ್ತೆ ಪರಿಷತ್ ಕಲಾಪ?
ಬೆಂಗಳೂರು, ಡಿ. 11: ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ದಿಢೀರ್ ಮುಂದೂಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಗರಂ ಆಗಿದೆ. ಇದೇ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಕಲಾಪದ ಕುರಿತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕೆ. ದ್ವಾರಕಾನಾಥ್ ಬಾಬು ಅವರು ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ಮಂಡಿಸಿದ್ದರು. ಜೊತೆಗೆ ರಾಜ್ಯ ಬಿಜೆಪಿ ಸರ್ಕಾರದ ಮಹತ್ವದ ಗೋ ಹತ್ಯೆ ನಿಷೇಧ ವಿಧೇಯಕ ಕೂಡ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ ಅಂಗೀಕಾರವಾಗಬೇಕಾಗಿತ್ತು. ಇದೇ ಸಂದರ್ಭದಲ್ಲಿ ಸಭಾಪತಿಗಳು ಏಕಾಏಕಿ ಸದನವನ್ನು ಅನಿರ್ದಿಆಷ್ಟಾವಧಿಗೆ ಮುಂದೂಡಿದ್ದರು.

ಇದೀಗ ವಿಧಾನ ಪರಿಷತ್ ಕಲಾಪವನ್ನು ಮುಂದುವರಿಸುವಂತೆ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ದ್ವಾರಕಾನಾಥ್ ಬಾಬು ಅವರು ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಪತ್ರ ಬರೆದು ಕಲಾಪ ನಡೆಸಲು ಸೂಚನೆ ನೀಡಿದ್ದಾರೆ.

ಬರುವ ಡಿಸೆಂಬರ್ 15ರಂದು ಮಂಗಳವಾರ ಪರಿಷತ್ ಸಭೆ ಕರೆಯುವಂತೆ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ. ಡಿಸೆಂಬರ್ 15ರಂದು ಬೆಳಗ್ಗೆ 11ಕ್ಕೆ ವಿಧಾನ ಪರಿಷತ್ ಕಲಾಪ ಕರೆಯಬೇಕು. ನಿಯಾಮವಳಿಯಂತೆ ಅವಿಶ್ವಾಸ ನಿರ್ಣಯ ಕುರಿತು ಚರ್ಚಿಸಲು ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಸಚಿವಾಲಯ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications