ದೇವೇಗೌಡರೇ ಐಯಾಮ್ ಸಾರಿ ಅಂದ ಪರಮೇಶ್ವರ್
ಬೆಂಗಳೂರು, ಏ. 3 : " ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿದ್ದೇನೆ" ಎಂಬ ವಿವಾದಾತ್ಮಕ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯಿಂದ ಗೌಡರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, "ನನ್ನ ಹೇಳಿಕೆಯಿಂದ ಗೌಡರಿಗೆ ನೋವಾಗಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಗೌಡರು ಹಿರಿಯರು. ಅವರು ಆರೋಗ್ಯದಿಂದ ನೂರುವರ್ಷ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ" ಎಂದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಹೇಳಿಕೆಯನ್ನು ನೀಡಿರಲಿಲ್ಲ. ದೇವೇಗೌಡರ ಹಿಂದಿನ ಹೇಳಿಕೆಯನ್ನು ಪ್ರಸ್ತಾಪಿಸಿ ವ್ಯಂಗ್ಯವಾಗಿ ಮಾತನಾಡಿದ್ದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. [ಪರಮೇಶ್ವರ್ ಗೌಡರ ಬಗ್ಗೆ ಹೇಳಿದ್ದೇನು?]
ದೇವೇಗೌಡರ ಬಗ್ಗೆ ನಾನು ನೀಡಿದ ಹೇಳಿಕೆಯ ಗಂಭೀರತೆ ಮಾಧ್ಯಮಗಳಲ್ಲಿ ನೋಡಿದಾಗಲೇ ನನಗೆ ತಿಳಿಯಿತು. ಮಾಧ್ಯಮಗಳು ನನ್ನ ಕಣ್ಣು ತೆರೆಸಿವೆ. ಹಿರಿಯರ ಬಗ್ಗೆ ಲಘುವಾಗಿ ಮಾತನಾಡಿ ತಪ್ಪು ಮಾಡಿರುವೆ ಎಂಬುದು ನನಗೆ ಮನವರಿಕೆಯಾಗಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಪರಮೇಶ್ವರ್ ಹೇಳಿದರು.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಬುಧವಾರ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪರಮೇಶ್ವರ್ ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ವತಃ ದೇವೇಗೌಡರು "ಪರಮೇಶ್ವರ್ ಹೇಳಿಕೆ ನಾನ್ ಸೆನ್ಸ್, ರಬ್ಬಿಶ್" ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳಲ್ಲೂ ಈ ಕುರಿತು ಬಿಸಿ-ಬಿಸಿ ಚರ್ಚೆ ನಡೆದಿತ್ತು. ಗುರುವಾರ ವಿಷಾದ ವ್ಯಕ್ತಪಡಿಸುವ ಮೂಲಕ ಪರಮೇಶ್ವರ್ ವಿವಾದಕ್ಕೆ ತೆರೆ ಎಳೆದಿದ್ದಾರೆ.












Click it and Unblock the Notifications