ರಾಜ್ಯದಲ್ಲಿ ತಾರಕಕ್ಕೇರಿದ ಮೀಸಲಾತಿ ಸಂಘರ್ಷ: ಸಂಕಷ್ಟಕ್ಕೆ ಸಿಲುಕಲಿದೆಯೇ ಬಿಜೆಪಿ ಸರ್ಕಾರ?
ಬೆಂಗಳೂರು, ಡಿಸೆಂಬರ್ 23: ಚುನಾವಣೆ ಹೊಸ್ತಿಲಲ್ಲಿ ಇರುವಾಗ ರಾಜ್ಯದಲ್ಲಿ ಮೀಸಲಾತಿ ಸಂಘರ್ಷ ತಾರಕಕ್ಕೇರಿದೆ. ಮೀಸಲಾತಿ ಹೆಚ್ಚಿಸಲೇಬೇಕೆಂದು ಪ್ರಬಲ ಸಮುದಾಯಗಳು ಪಟ್ಟು ಹಿಡಿದಿವೆ. ಮೀಸಲಾತಿ ನೀಡಿದ್ದದ್ದರೆ ಸರ್ಕಾರದ ಪರ ಸಿಡಿದೇಳುವುದಾಗಿಯೂ ಎಚ್ಚರಿಕೆ ನೀಡಿವೆ. ಇದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಪಂಜಮಸಾಲಿ ಸಮುದಾಯದ ಬೇಡಿಕೆ
ಲಿಂಗಾಯತ ಸಮುದಾಯದ ಪ್ರಬಲ ಜಾತಿಯೆಂದೇ ಪರಿಗಣಿಸಲ್ಪಡುವ ಪಂಚಮಸಾಲಿ ಸಮುದಾಯವು ನಿನ್ನೆಯಷ್ಟೇ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿತ್ತು. ಕಳೆದ ಕೆಲ ವರ್ಷಗಳಿಂದ ಈ ಸಮುದಾಯವು 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಹೋರಾಡುತ್ತಲೇ ಬಂದಿದೆ. ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಈ ಹೋರಾಟದ ನೇತೃತ್ವ ವಹಿಸಿದ್ದಾರೆ. ಈ ಹೋರಾಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಪಂಚಮಸಾಲಿ ಸಮುದಾಯಕ್ಕೆ ಸೇರಿದ ನಾಯಕರು ಮುಂಚೂಣಿಯಲ್ಲಿದ್ದಾರೆ. ವಿಧಾನಸಭಾ ಕಲಾಪ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಪ್ರತಿಭಟನೆ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ಡಿಸೆಂಬರ್ 29ರಂದು ಪಂಚಮಸಾಲಿ ವರ್ಗಕ್ಕೆ ಮೀಸಲಾತಿ ಕೊಡುವ ಬಗ್ಗೆ ಘೋಷಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಒಕ್ಕಲಿಗ ಸಮುದಾಯದ ಬೇಡಿಕೆ
ಅತ್ತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸುವ ಬಗ್ಗೆ ಮುಖ್ಯಮಂತ್ರಿಗಳು ಆಶ್ವಾಸನೆ ಕೊಟ್ಟಿದ್ದಾರೆ. ಇತ್ತ ಒಕ್ಕಲಿಗ ಸಮುದಾಯವೂ ಮೀಸಲಾತಿಗೆ ಪಟ್ಟು ಹಿಡಿದಿದೆ. ಈ ವಿಚಾರವಾಗಿ ಬಿಜೆಪಿಯ ಒಕ್ಕಲಿಗ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಸಮುದಾಯಗಳೆಂದೇ ಹೇಳಬಹುದು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಕಾಂಗ್ರೆಸ್ ನಾಯಕರು ಸಹ ಒತ್ತಾಯ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಿಂದಲೂ ಮೀಸಲಾತಿ ಬೇಡಿಕೆ
'ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಜನವರಿ 23ರ ಅಂತಿಮ ಗಡುವು ನೀಡಲಾಗಿದೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ, ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡಲಾಗುತ್ತದೆ' ಎಂದು ಕಾಂಗ್ರೆಸ್‌ನ ಒಕ್ಕಲಿಗ ನಾಯಕರು ಎಚ್ಚರಿಕೆ ನೀಡಿದ್ದಾರೆ. ಇದು ರಾಜ್ಯ ಬಿಜೆಪಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ಒಂದು ವೇಳೆ ಪ್ರಬಲ ಸಮುದಾಯಗಳಿಗೆ ಮೀಸಲಾತಿ ನೀಡಿದರೆ, ಹಿಂದುಳಿದ ಜಾತಿಗಳ ಸಂಘ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಈ ಸಂಘರ್ಷಮಯ ವಾತಾವರಣವನ್ನು ಸಿಎಂ ಬೊಮ್ಮಾಯಿ ಹೇಗೆ ನಿಭಾಯಿಸಲಿದ್ದಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.












Click it and Unblock the Notifications