Pahalgam Attack: ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಸಚಿವ ಸಂತೋಷ್ ಲಾಡ್
ಬೆಂಗಳೂರು, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಒಂದಿಷ್ಟು ಕನ್ನಡಿಗರು ಕಾಶ್ಮೀರದಲ್ಲಿಯೇ ಸಿಲುಕಿದ್ದು, ರಾಜ್ಯ ಸರ್ಕಾರದ ನೆರವಿನಿಂದ 178 ಕನ್ನಡಿಗರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೆಂಗಳೂರಿಗೆ ಸುರಕ್ಷಿತವಾಗಿ ಕರೆತಂದಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ನಂತರ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಸಚಿವ ಸಂತೋಷ್ ಲಾಡ್ ಅವರನ್ನು ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳುಹಿಸಿದ್ದರು.

ಕಳೆದ ಎರಡು ದಿನಗಳಿಂದ ಅವಿರತವಾಗಿ, ಬಿಡುವಿಲ್ಲದೆ ಪಹಲ್ಗಾಮ್‌ನಲ್ಲಿ ಸಚಿವ ಲಾಡ್ ಅವರು ಕನ್ನಡಿಗ ಪ್ರವಾಸಿಗರನ್ನು ಭೇಟಿ ಮಾಡಿ ಅವರಿಗೆ ರಾಜ್ಯಕ್ಕೆ ಮರಳಲು ಮಾಹಿತಿ ನೀಡಿ ವಿಮಾನ ನಿಲ್ದಾಣಕ್ಕೆ ಬರಲು ತಿಳಿಸಿದ್ದರು. ಇದೀಗ 178 ಕನ್ನಡಿಗ ಪ್ರವಾಸಿಗರು ಶ್ರೀನಗರ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಯಾದ ಕನ್ನಡಿಗರ ಕುಟುಂಬಗಳನ್ನೂ ಭೇಟಿ ಮಾಡಿದ್ದ ಸಚಿವ ಸಂತೋಷ್ ಲಾಡ್ ಅವರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.
ಬೇರೆ ಬೇರೆ ಸ್ಥಳಗಳಲ್ಲಿ ತಂಗಿದ್ದ ಪ್ರವಾಸಿಗರನ್ನು ಭೇಟಿ ಮಾಡಿ ತಾವು ಯಾವಾಗ ಕರ್ನಾಟಕಕ್ಕೆ ಮರಳಲು ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು. ವಿಮಾನದ ಟಿಕೆಟ್ ಬುಕ್ ಮಾಡದವರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಸಂತೋಷ್ ಲಾಡ್ ಅವರು ಪ್ರವಾಸಿಗರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.

ಸಚಿವ ಸಂತೋಷ್ ಲಾಡ್ ಅವರಿಗೆ ಕನ್ನಡಿಗರ ಕೃತಜ್ಞತೆ
ಕಾಶ್ಮೀರದಿಂದ ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಿದ ಸಚಿವ ಸಂತೋಷ್ ಲಾಡ್ ಅವರಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ. ಊರಿಗೆ ಮರಳುವ ಆತಂಕ ಮತ್ತು ಭಯದಲ್ಲಿ ಇದ್ದವರಿಗೆ ದೇವರಂತೆ ಸಚಿವರು ಬಂದು ಇಲ್ಲಿಗೆ ಕರೆತಂದರು. ಇವರ ಸಹಾಯವನ್ನು ಎಂದೂ ಮರೆಯಲಾಗದು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಎಲ್ಲಿ ಅವಘಡ ಸಂಭವಿಸಿದ್ದರೂ ಅಲ್ಲಿಗೆ ಸಂತೋಷ್ ಲಾಡ್ ಭೇಟಿ
ಕರ್ನಾಟಕದ ಹೊರಗೆ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅಂತಹ ಸಂದರ್ಭದಲ್ಲಿ ಸಂತೋಷ್ ಲಾಡ್ ಅವರು ಭೇಟಿ ನೀಡಿ ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ಮೇಘ ಸ್ಫೋಟ ಸಂಭವಿಸಿದಾಗ ಕೂಡ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ಜವಾಬ್ದಾರಿಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಲಾಡ್ ಅವರಿಗೆ ವಹಿಸಿದ್ದರು.
ಒಡಿಶಾದಲ್ಲಿ ಭಾರಿ ರೈಲು ದುರಂತ ನಡೆದಾಗಲೂ ಸಚಿವ ಸಂತೋಷ್ ಲಾಡ್ ಅವರು ಕನ್ನಡಿಗರ ರಕ್ಷಣೆಗೆ ತೆರಳಿದ್ದರು. ಅದಾದ ನಂತರ ವಯನಾಡಿನಲ್ಲಿ ಉಂಟಾಗಿದ್ದ ಜಳಪ್ರಳಯದ ವೇಳೆ ಸ್ವತಃ ಸಂತೋಷ್ ಲಾಡ್ ಅವರು ಹೋಗಿದ್ದರು. ಇದೀಗ ಪಹಲ್ಗಾಮ್‌ಗೂ ಅವರು ಹೋಗಿ ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕನ್ನಡಿಗರು ಸಚಿವ ಸಂತೋಷ್ ಲಾಡ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕಾಶ್ಮೀರದಲ್ಲಿ ಕನ್ನಡಿಗರನ್ನು ಕಂಡು ಸಂತೋಷ್ ಲಾಡ್ ಹೇಳಿದ್ದೇನು?
ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿ ಪಹಲ್ಗಾಮ್‌ಗೆ ಭೇಟಿ ನೀಡಿದ ಬಳಿಕ ಅಲ್ಲಿನ ಪರಿಸ್ಥಿತಿ ಕಂಡು ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾಶ್ಮೀರದಲ್ಲಿ ನಡೆದ ಈ ಭೀಭತ್ಸಕರ ದಾಳಿಯಲ್ಲಿ ಅಮಾನುಷವಾಗಿ ಹತ್ಯೆಯಾದ ಕುಟುಂಬಗಳ ನೋವು, ಸಂಕಟ ಯಾವ ಪಾಪಿಗೂ ಬೇಡ. ಇಂತಹ ಹಲವು ಸಂಕಟಗಳ ಆರ್ತನಾದಗಳಿಗೆ ಇವತ್ತು ಸಾಕ್ಷಿಯಾಗಿದ್ದೇನೆ. ಅವರಿಗೆ ಸಮಾಧಾನ ಹೇಳಬೇಕೋ? ಧೈರ್ಯ ತುಂಬಬೇಕೋ? ಅಸಲಿಗೆ ನಾನೇ ಭಾವುಕನಾಗಿದ್ದೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು, ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಖಂಡನಾ ನಿರ್ಣಯ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನಮ್ಮ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ಸಂತಾಪ ಸಲ್ಲಿಸಲು ತೀರ್ಮಾನಿಸಿದೆ. ಉಗ್ರರ ದಾಳಿಗಳನ್ನು ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯಗಳು ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು.
ಈ ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಗಿದೆ. ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಸರ್ಕಾರವು ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಇಂದು ನಡೆದ ಸಂಪುಟ ಸಭೆಯು ತೆಗೆದುಕೊಂಡಿದೆ.
ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?
ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತ್ ಸಡಿಲಗೊಳಿಸಬಾರದಿತ್ತು. ಇಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾದಲ್ಲಿ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಉಗ್ರರು ಯಾವುದೇ ಧರ್ಮಕ್ಕೆ ಸೇರಿರಲಿ ಅವರೆಲ್ಲರನ್ನೂ ಮಟ್ಟ ಹಾಕಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ, ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ, ಬೆಂಬಲವನ್ನು ನಾವು, ನಮ್ಮ ಸರ್ಕಾರ ಕೊಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications