SM Krishna: ಎಸ್.ಎಂ.ಕೃಷ್ಣಗೆ ಪದ್ಮ ಪ್ರಶಸ್ತಿ, ಮಂಡ್ಯ, ಇಂಡಿಯಾಗೆ ಸಂದ ಗೌರವ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಶಾಸಕರಾದ ದಿನೇಶ ಗೂಳಿಗೌಡ ಅವರು ಲೇಖನ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿ ತಮ್ಮ ಅಪಾರ ವಿದ್ವತ್, ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿ ಜನನಾಯಕರಾಗಿ ರೂಪುಗೊಂಡವರು ಶ್ರೀ ಎಸ್. ಎಂ. ಕೃಷ್ಣ ರವರು.
1932ರಲ್ಲಿ ಮದ್ದೂರಿನ ಜನರ ಪಾಲಿನ ಪ್ರಾತಃ ಸ್ಮರಣೀಯ ಜನಾನುರಾಗಿ ನಾಯಕರಾಗಿದ್ದ ದಿವಂಗತ ಶ್ರೀ ಎಸ್ ಸಿ ಮಲ್ಲಯ್ಯ ಮತ್ತು ಅನ್ನದಾತೆ ಶ್ರೀಮತಿ ತಾಯಮ್ಮರವರ ಏಳನೇ ಮಗನಾಗಿ ತುಂಬು ಕುಟುಂಬದಲ್ಲಿ ಜನಿಸಿದ ಶ್ರೀ ಎಸ್ ಎಂ ಕೃಷ್ಣ ರವರು 1962 ರಲ್ಲಿ ಪ್ರಥಮಬಾರಿಗೆ ಶಾಸನ ಸಭೆ ಪ್ರವೇಶಿಸಿದರು.
ಆ ನಂತರ ರಾಷ್ಟ್ರದ ಪ್ರಜಾಪ್ರಭುತ್ವ ನಾಲ್ಕು ಸ್ತಂಭಗಳಾದ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕಳೆದ ಅರವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಕೃಷ್ಣ ರವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆಗುರುತು ಮೂಡಿಸಿದವರು.

ಅಂದಿನ ಕಾಲಘಟ್ಟದಲ್ಲಿಯೇ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಅಮೇರಿಕಾದಿಂದ ಸ್ವಗ್ರಾಮಕ್ಕೆ ಆಗಮಿಸಿದಾಗ ಮದ್ದೂರು ರೈಲ್ವೆ ನಿಲ್ದಾಣದಿಂದ ಹುಟ್ಟೂರು ಸೋಮನಹಳ್ಳಿ ವರೆಗೆ ತಳೀರು ತೋರಣಗಳಿಂದ ಸಿಂಗರಿಸಿ ಕೃಷ್ಣ ರವರನ್ನು ಸ್ವಾಗತಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ದೇಶ ಕಂಡ ಅನುಭವಿ ರಾಜಕಾರಣಿಯವರಲ್ಲೊಬ್ಬರಾದ ಕೃಷ್ಣ ಅವರನ್ನು ವಿಶಿಷ್ಟ ಸ್ಥಾನದಲ್ಲಿ ಕಾಣಬಹುದಾಗಿದ್ದು ಅವರ ಸಜ್ಜನ ವ್ಯಕ್ತಿತ್ವ, ಸಾರ್ವಜನಿಕ ನಡವಳಿಕೆ ಮಾತಿನ ಶೈಲಿ ಜನರನ್ನೂ ಪ್ರೀತಿಯಿಂದ ನೋಡುವ ರೀತಿ, ಗೌರವಿಸುವ ಪರಿ ಎಂಥವರನ್ನೂ ಮೋಡಿ ಮಾಡಬಲ್ಲದು. ತಮ್ಮ ಬಾಲ್ಯ ಜೀವನದಲ್ಲಿ ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದ ಕೃಷ್ಣ ರವರು ಎಂದು ಸೋಲಿಗೆ ಕುಗ್ಗಲಿಲ್ಲ ಗೆದ್ದು ಬೀಗಲಿಲ್ಲ.
ಇಂದು ಅವರ ಗರಡಿಯಲ್ಲಿ ಪಳಗಿದ ಅದೆಷ್ಟೊ ಮಂದಿ ರಾಜಕೀಯ ಕ್ಷೇತ್ರದಲ್ಲಿ ಹಲವು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಆಡಳಿತ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರಭಾವ ಬೀರಿದವರು ಕೃಷ್ಣರವರು.
ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎಸ್.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದಲ್ಲಿಯೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ.
ಇವರ ಸುದೀರ್ಘ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರ ರಾಜಕೀಯ ಪಯಣ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು ತಮ್ಮ ವಿರೋದಿಗಳ ಬಗ್ಗೆ ಟೀಕೆ ಮಾಡಿದರು ಅದು ಸದಾಭಿರೂಚಿಯಿಂದ ಕೂಡಿದ್ದು ಯಾರ ಮನಸ್ಸಿಗೂ ಘಾಸಿ ಮಾಡದೆ ಪ್ರತಿ ಮಾತಿಗೂ ಜನ ಮೆಚ್ಚುವ ರೀತಿ ಹೇಳಿಕೆಗಳನ್ನು ರೂಢಿಸಿ ಕೊಂಡಿರುವ ಕೃಷ್ಣ ರಂತಹ ನಾಯಕರು ಇಂದಿನ ರಾಜಕಾರಣಿಗಳಲ್ಲಿ ವಿರಳಾತಿ ವಿರಳ.
ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದ ನಾಯಕ
ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದಂತಹ ಶ್ರೀಯುತರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಜನರಿಗೆ ಒಂದು ಅಭಿಮಾನ ಹಾಗೂ ಕೀರ್ತಿಯೇ ಸರಿ. ಮಂಡ್ಯ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣಿಭೂತರಾದ ಶ್ರೀ ಎಸ್ ಸಿ ಮಲ್ಲಯ್ಯರವರ ಸುಪುತ್ರರಾದ ಕೃಷ್ಣ ರವರ ತಂದೆಯ ಪ್ರಭಾವದಿಂದಾಗಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಅಂದು ರಾಜ್ಯದ ಲೋಕೋಪಯೋಗಿ ಸಚಿವರಾಗಿ ಮುಖ್ಯಮಂತ್ರಿ ಪದವಿಯ ಸನಿಹದಲ್ಲಿದ್ದ ಹೆಚ್. ಕೆ. ವೀರಣ್ಣಗೌಡರವರನ್ನು ಮಣಿಸಿ ಶಾಸನಸಭೆ ಪ್ರವೇಶಿಸಿ ರಾಜ್ಯ ಹಾಗೂ ರಾಷ್ಟ್ರದ ಹಲವು ನಾಯಕರ ಸಂಪರ್ಕದಿಂದ ಯಶಸ್ವಿ ನಾಯಕರಾಗಿ ಮಂಡ್ಯ ಜಿಲ್ಲೆ ,ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು
ಭಾರತಕ್ಕೆ ಬಂದ ನಂತರ ಅವರು 1962ರಲ್ಲಿ ಮದ್ದೂರು ವಿಧಾನಸಭಾ ಶಾಸಕರಾಗಿ ಸದನದಲ್ಲಿ ಮಂಡನೆಯಾಗಿದ್ದ ಪೂರಕ ಬಜೆಟ್ ಮೇಲೆ ಎಸ್.ಎಂ. ಕೃಷ್ಣ ಅವರು ಮಾಡಿದ ಭಾಷಣವು ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಅಭ್ಯರ್ಥಿಗಳ ಬದುಕು ಅತಂತ್ರವಾಗಿದ್ದರ ಬಗ್ಗೆ ಗಮನ ಸೆಳೆದಿದ್ದ ಕೃಷ್ಣ ಅವರು, ಇಂತಹ ಅಭ್ಯರ್ಥಿಗಳ ಕಾಯಂ ಮಾಡುವಂತೆ ಒತ್ತಾಯಿಸಿದರು.
ಅದೆಷ್ಟೋ ಉಪನ್ಯಾಸಕ ಕುಟುಂಬಗಳಿಗೆ ಭದ್ರತೆ
ಇದರ ಫಲವಾಗಿ ಸ್ಥಳೀಯ ಉಪನ್ಯಾಸಕರನ್ನು ಸರ್ಕಾರ ಕಾಯಂ ಮಾಡಿತು. ಈ ಮೂಲಕ ರಾಜ್ಯದ ಅದೆಷ್ಟೋ ಉಪನ್ಯಾಸಕ ಕುಟುಂಬಗಳಿಗೆ ಭದ್ರತೆ ದೊರೆಯಲು ತಮ್ಮ ಚೊಚ್ಚಲ ಭಾಷಣದಲ್ಲಿಯೇ ಕಾರಣರಾದರು. 1968ರಲ್ಲಿ ಅವರು ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದರು.
ನಂತರ 1971ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ನಡುವೆ 1983ರಲ್ಲಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಅವರು ಕೈಗಾರಿಕೆಗಳ ಏಳ್ಗೆ ಬಗ್ಗೆ ಸಾಕಷ್ಟು ಶ್ರಮ ವಹಿಸಿದ್ದರು.

ಕೈಗಾರಿಕಾ ಬಡಾವಣೆಗಳ ಸ್ಥಾಪನೆ
ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಬಡಾವಣೆಗಳ ಸ್ಥಾಪನೆಗೆ ಮುಂದಾದರು. ಇದರ ಫಲವನ್ನು ಬಿಹಾರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ಪಡೆದುಕೊಂಡವು. 1999 ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿ ಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ.
ಅವರ ಕಾಲಘಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಇಂದಿಗೂ ಜಾರಿಯಲ್ಲಿದ್ದು ಅದು ಕೃಷ್ಣ ರವರ ದೂರದೃಷ್ಟಿಯ ಫಲವಾದದ್ದು. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳು.
ಐಟಿ ಬಿಟಿ ಕ್ಷೇತ್ರಕ್ಕೆ ಅಗಾಧವಾದ ಬೆಂಬಲ
ಐಟಿ ಬಿಟಿ ಕ್ಷೇತ್ರಕ್ಕೆ ಅಗಾಧವಾದ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರ ಭೂನಾದಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿಲಿಕ್ಯಾನಾ ವ್ಯಾಲಿ ಎಂದು ಹೆಸರು ಗಳಿಸಿ ಅಮೇರಿಕಾದ ಕ್ಯಾಲಿಪೋರ್ನಿಯ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು.
ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೆ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲಭೂತ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವ ಭೂಪಟದಲಿ ಬೆಳಗಿಸಲು ಕೃಷ್ಣ ರವರ ಪಾತ್ರ ಅತ್ಯಂತ ಹಿರಿದಾದ್ದು.
ಭಾರತದ 72ನೇ ವಿದೇಶಾಂಗ ಸಚಿವರಾಗಿ ಕೆಲಸ
ಎಸ್ ಎಂ ಕೃಷ್ಣ ಅವರು 2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದಲ್ಲಿ ಭಾರತದ 72ನೇ ವಿದೇಶಾಂಗ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಪಾಕಿಸ್ತಾನ, ಚೀನಾ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ ದೇಶಗಳ ಜತೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು.
ಇದೆಲ್ಲದರ ಜತೆಗೆ ಅಮೆರಿಕದ ಆಗಿನ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಜತೆ ಸಹ ರಾಜತಾಂತ್ರಿಕ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಇದಲ್ಲದೆ, ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವು
ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದ ಎಸ್.ಎಂ. ಕೃಷ್ಣ ಅವರು, ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಬೇಕು ಎಂದು ಒತ್ತಾಯಿಸಿದ್ದರು. ಈ ಮೂಲಕ ಭಾರತ ಸಹ ಎಲ್ಲ ದೇಶಗಳಂತೆ ಸಮರ್ಥವಾದ ದೇಶ ಹಾಗೂ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದುಕೊಳ್ಳುವ ಎಲ್ಲ ಅರ್ಹತೆ ಇದೆ ಎಂದು ಪ್ರತಿಪಾದಿಸಿದ್ದರು.
ಇನ್ನು ಶತ್ರು ದೇಶ ಎಂದೇ ಕರೆಯಲ್ಪಡುವ ಪಾಕಿಸ್ತಾನದ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್ಎಂಕೆ ಅವರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಇನ್ನು ಚೀನಾದ ಜತೆಯೂ ಉತ್ತಮ ಸಂಬಂಧ ಹೊಂದಲು ಆದ್ಯತೆಯ ಹೆಜ್ಜೆಯನ್ನಿಟ್ಟಿದ್ದರು.
ಪಾಸ್‌ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ
ಈಗ ನಾವು ಪಾಸ್‌ಪೋರ್ಟ್ ಅನ್ನು ಬಹಳ ಸುಲಭವಾಗಿ ಹಾಗೂ ಸರಳವಾಗಿ ಪಡೆದುಕೊಂಡು ಬಿಡುತ್ತೇವೆ. ಆದರೆ, ಆಗ ಪಾಸ್‌ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಅಷ್ಟು ಸರಳವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆಗಳಿದ್ದವು. ಇವುಗಳನ್ನು ಪೂರೈಸುವಷ್ಟರಲ್ಲಿ ಜನರು ಹೈರಾಣಾಗಿಬಿಡುತ್ತಿದ್ದರು. ಈ ಸಮಸ್ಯೆ ಎಸ್ಎಂಕೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಪಾಸ್‌ಪೋರ್ಟ್ ನೀತಿಯನ್ನು ಸರಳೀಕರಣಗೊಳಿಸಲು ಮುಂದಾದರು.
77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದ ಕೃಷ್ಣ
ಜತೆಗೆ ಆಧುನೀಕರಣಗೊಳಿಸಿದರು. ಹೀಗಾಗಿ ದೇಶದ ವಿವಿಧ ಕಡೆ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಇನ್ನು ಪಾಸ್‌ಪೋರ್ಟ್ ನೀಡಿಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಮೂಲಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಿದರು.
ಇದು ಕೋಟ್ಯಂತರ ಭಾರತೀಯರಿಗೆ ಅನುಕೂಲವಾಯಿತು. ಸಕಾಲದಲ್ಲಿ ಅಗತ್ಯವಿದ್ದವರು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳುವಂತಾಯಿತು. ಇದರ ಸಂಪೂರ್ಣ ಕೀರ್ತಿ ಎಸ್‌ಎಂಕೆ ಅವರಿಗೆ ಸಲ್ಲಬೇಕು.
2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭ
ಇನ್ನು ಈ ವಿಷಯವಾಗಿ ಕೃಷ್ಣ ಅವರ ಬಗ್ಗೆ ಹೇಳಲೇಬೇಕು. ಅವರ ಕಾರ್ಯತತ್ಪರತೆ ಬಗ್ಗೆ ತಿಳಿಸಲೇಬೇಕು. 2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭವಾಗಿತ್ತು. ಇದರಿಂದ ಅಲ್ಲಿದ್ದ ಸರಿಸುಮಾರು 18 ಸಾವಿರ ಭಾರತೀಯರ ಜೀವ-ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಗ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಎಸ್ಎಂಕೆ ಮಹತ್ವದ ಪಾತ್ರವನ್ನು ವಹಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದುಕೊಂಡು ಸುರಕ್ಷತೆಗೆ ಬಹಳವೇ ಆದ್ಯತೆಯನ್ನು ನೀಡಿದ್ದರು.
ಪದ್ಮವಿಭೂಷಣಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ
ಇನ್ನು ಎಸ್.ಎಂ.ಕೃಷ್ಣ ಅವರು 2004ರಿಂದ 2008 ರವರೆಗೆ ದೇಶದ ಗೌರವಯುತ ಸಾಂವಿಧಾನಿಕ ಹುದ್ದೆಯನ್ನೂ ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡರು. ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ಅವರು 4 ವರ್ಷ ಸೇವೆ ಸಲ್ಲಿಸಿದ್ದರು.
ಹೀಗೆ ಎಸ್ಎಂಕೆ ಅವರ ಸೇವೆ ಈ ಇಡೀ ದೇಶಕ್ಕೆ ಬಹಳ ದೊಡ್ಡದಿದೆ. ಇಂಥ ಸಂದರ್ಭದಲ್ಲಿ ಅವರು ರಾಷ್ಟ್ರದ ಎರಡನೇ ಅತ್ಯುನ್ನತ ಗೌರವವಾಗಿರುವ ಪದ್ಮವಿಭೂಷಣಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇದು ಇಡೀ ಮಂಡ್ಯಕ್ಕೆ ಹಾಗೂ ಇಂಡಿಯಾಕ್ಕೆ ಸಂದ ಗೌರವ ಎಂದು ಹೇಳಲು ಬಯಸುತ್ತೇನೆ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications