ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 31: ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಹೋರಾಟ ತೀವ್ರಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್‍ಗೆ ಬೆಂಕಿಹಚ್ಚಿ ಮರಾಠಾ ಪುಂಡರು ಪುಂಡಾಟ ಮೆರೆದಿದ್ದು, ಬಸ್ ಸುಟ್ಟಿದ್ದು ತಪ್ಪು, ರಾಜ್ಯದ ಹಿತಕ್ಕೆ ನಾವು ಬದ್ಧ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ತಪ್ಪು. ನಾವು ನಮ್ಮ ರಾಜ್ಯದ ಹಿತ ಕಾಯಲು, ಕನ್ನಡಿಗರ ರಕ್ಷಣೆಗೆ ಬದ್ಧ. ಕರ್ನಾಟಕದಲ್ಲಿರುವ ಜನರು, ಅಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ನಿನ್ನೆ ಮುಖ್ಯಮಂತ್ರಿಗಳು ಕೂಡ ಗೃಹಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕರು ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿದರೆ ತಪ್ಪೇನೂ ಇಲ್ಲ. ಕೇಂದ್ರ ಬರ ಅಧ್ಯಯನ ತಂಡ ಇಲ್ಲಿ ಪರಿಸ್ಥಿತಿ ಅಧ್ಯಯನ ಮಾಡಿದೆ, ಆದರೂ ಯಾವುದೇ ನೆರವು ಬಂದಿಲ್ಲ. ಈಗ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿ ಕೇಂದ್ರದಿಂದ ಪರಿಹಾರ ಕೊಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರ, ಕೇಂದ್ರದ ಬರ ಪರಿಸ್ಥಿತಿ ನಿಯಮಗಳ ಆಅನುಸಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ಉಪಕಾರ ಮನಸ್ಥಿತಿ ಪ್ರದರ್ಶಿಸಲಿ. ಕಂದಾಯ ಸಚಿವರು ಹಾಗೂ ಕೃಷಿ ಸಚಿವರು ಕೇಂದ್ರಕ್ಕೆ ಸಲ್ಲಿಸಿರುವ ಮನವಿಗೆ ತಕ್ಕಂತೆ ಪರಿಹಾರ ನೀಡಲಿ ಎಂದು ತಿಳಿಸಿದ್ದಾರೆ.

ಕೇಂದ್ರದ ಬರ ಅದ್ಯಯನ ತಂಡ ಅಧ್ಯಯನ ಮಾಡಿದರೂ ಯಾವುದೇ ಸ್ಪಂದನೆ ಬಂದಿಲ್ಲವಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಕೂಡ ರಾಜ್ಯ ಪ್ರವಾಸ ಮಾಡಿ ಬರ ಅಧ್ಯಯನ ಮಾಡಲಿ. ನಂತರ ಅವರು ಕೇಂದ್ರ ಸರ್ಕಾರಕ್ಕೆ ತಮ್ಮ ವರದಿ ನೀಡಿ, ರಾಜ್ಯಕ್ಕೆ ಸೂಕ್ತ ಪರಿಹಾರ ಮೊತ್ತ ಕೊಡಿಸಲಿ ಎಂದು ಛೇಡಿಸಿದರು.












Click it and Unblock the Notifications