ಎಡಿಜಿಪಿ ಅಮೃತ್ ಪೌಲ್ ರಂತ ಹಿರಿಯ ಅಧಿಕಾರ ಜೈಲಿಗೆ ಹೋಗಿದ್ದರಲ್ಲಪ್ಪಾ ಬೊಮ್ಮಾಯಿ ಇನ್ನೇನು ಸಾಕ್ಷಿ ಬೇಕು? ಸಿದ್ದು ಪ್ರಶ್ನೆ
ಎಡಿಜಿಪಿ ಅಮೃತ್ ಪೌಲ್ ರಂತ ಹಿರಿಯ ಅಧಿಕಾರ ಜೈಲಿಗೆ ಹೋಗಿದ್ದರಲ್ಲಪ್ಪಾ ಬೊಮ್ಮಾಯಿ ಇನ್ನೇನು ಸಾಕ್ಷಿ ಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಜಯಪುರ, ಫೆಬ್ರವರಿ11: ಪಿಎಸ್‌ಐ ನೇಮಕಾತಿಯಲ್ಲಿ ಪ್ರತೀ ಹುದ್ದೆಗೆ 80 ಲಕ್ಷದಿಂದ 1 ಕೋಟಿ ಲಂಚ ಪಡೆದಿದ್ದಾರೆ. ದಾಖಲಾತಿ ಕೇಳುವ ಬಸವರಾಜ ಬೊಮ್ಮಾಯಿ ಅವರಿಗೆ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ 75 ಜನ ತಪ್ಪಿತಸ್ಥರು ಕಾಣುವುದಿಲ್ಲವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾತನಾಡಿದ ಅವರು, ಎಡಿಜಿಪಿ ಅಮೃತ್ ಪೌಲ್ ರಂತ ಹಿರಿಯ ಅಧಿಕಾರ ಜೈಲಿಗೆ ಹೋಗಿದ್ದರಲ್ಲಪ್ಪಾ ಬೊಮ್ಮಾಯಿ ಇನ್ನೇನು ಸಾಕ್ಷಿ ಬೇಕು.? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಕರೆದವರು ಯಾರು? ನಾವಾ? ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ತಪ್ಪಿಸಿಕೊಳ್ಳುವುದು ಬೇಡ, ಈಗಿನ ಅವಧಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಎರಡೂ ಕಾಲದಲ್ಲಿ ಯಾವೆಲ್ಲ ಆರೋಪಗಳಿವೆ ಅವೆಲ್ಲವನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ತನಿಖೆ ಮಾಡಿಸಿ ಎಂದು ಬೊಮ್ಮಾಯಿಗೆ ಹೇಳಿದ್ದೆ. ಇದನ್ನು ಮಾಡಿಸಲು ಬೊಮ್ಮಾಯಿಗೆ ಧಮ್, ತಾಕತ್ ಇಲ್ಲ. ಈಗ ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ.

ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ 40% ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕೆ ಬಿಲ್ ಹಣ ಕೊಡುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ರು. ಇದರಿಂದ ಈಶ್ವರಪ್ಪನವರ ಕಚೇರಿಗೆ ಅಲೆದು ಅಲೆದು ಸಾಕಾಗಿ ಅತ್ಮಹತ್ಯೆ ಮಾಡಿಕೊಂಡ. ಎನ್,ಒ,ಸಿ ನೀಡಲು 10% ಲಂಚ ಕೊಡಬೇಕು. ಅದಕ್ಕೆ ಈ ಸರ್ಕಾರವನ್ನು ಅಲಿಬಾಬಾ ಔರ್ ಚಾಲೀಸ್ ಚೋರ್ ಎಂದು ಕರೆಯುತ್ತೇನೆ.
ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವುದಾದರೆ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ನೀಡಿದರೂ ಅವರನ್ನು ಗೆಲ್ಲಿಸುವ ಕೆಲಸ ಕ್ಷೇತ್ರದ ಜನ ಮಾಡಬೇಕು. ಪಕ್ಷದ ಟಿಕೇಟ್ ಗಾಗಿ 10 ಜನ ಅರ್ಜಿ ಹಾಕಿದ್ದೀರಿ, ಒಬ್ಬರಿಗೆ ಮಾತ್ರ ಟಿಕೇಟ್ ನೀಡಲು ಸಾಧ್ಯ. ಉಳಿದ 9 ಜನರು ಬೇಸರ ಮಾಡಿಕೊಳ್ಳದೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು.

ನಮ್ಮ ಸರ್ಕಾರದ 5 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿಬಂದಿರಲಿಲ್ಲ. ನಮ್ಮ ವಿರುದ್ಧ ಯಾವೆಲ್ಲ ಸುಳ್ಳು ಆರೋಪಗಳನ್ನು ಮಾಡಿದ್ದರು ಅವೆಲ್ಲವನ್ನು ಧೈರ್ಯವಾಗಿ ಸಿಬಿಐಗೆ ವಹಿಸಿದ್ದೆವು. ಈ ಎಲ್ಲಾ ಕೇಸುಗಳಲ್ಲಿ ನಮ್ಮ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಿಬಿಐ ವರದಿ ನೀಡಿದೆ. ಈ ಸಿಬಿಐ ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಧೀನದಲ್ಲಿರುವುದು. ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಬಿಜೆಪಿ ಅವರು ಮಾಡಿರುವ ಆರೋಪಗಳು ಎಲ್ಲವೂ ಸುಳ್ಳು ಎಂದು ಸಿಬಿಐ ನವರೇ ಹೇಳಿದ ಮೇಲೆ ನಮ್ಮ ಸರ್ಕಾರದ ಬಗ್ಗೆ ಇನ್ನೇನು ಸಂಶಯ ಉಳಿಯುತ್ತದೆ?
ಈಗಿನ ಬಿಜೆಪಿ ಸರ್ಕಾರ ಒಂದೇ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಲ್ಲ. ನಾವು ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗೆಲ್ಲ ಬೊಮ್ಮಾಯಿ ಅವರು ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಕಾಲದಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಹಾರಿಕೆ ಉತ್ತರ ನೀಡುತ್ತಾರೆ.












Click it and Unblock the Notifications