ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ: ಕಾಂಗ್ರೆಸ್!
ಬೆಂಗಳೂರು: ಕಾಂಗ್ರೆಸ್ & ಬಿಜೆಪಿ ಮಧ್ಯೆ ಹೊತ್ತಿಕೊಂಡಿರುವ ಗ್ಯಾರಂಟಿಯ ಬೆಂಕಿ ಇದೀಗ ಬೇರೆ ಕಡೆ ತಿರುಗಿದೆ. ಅದ್ರಲ್ಲೂ ಕರ್ನಾಟಕ ಬಿಜೆಪಿ ನಾಯಕರ ನಡುವೆ ಕಿಚ್ಚು ಹತ್ತಿದ್ದು, ಕಿತ್ತಾಟ ಬಲು ಜೋರಾಗಿದೆ. ಇದೇ ವಿಚಾರ ಹಿಡಿದು ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಹಾಕಿದ ಚಾಲೆಂಜ್ ಹಲ್‌ಚಲ್ ಎಬ್ಬಿಸಿದೆ. ಅಲ್ಲದೆ ಬಿಜೆಪಿ ನಾಯಕರನ್ನೂ ಕೆರಳಿಸಿದೆ.
ಹೌದು, ಬಿಜೆಪಿ ಒಳಗೆ ಆಂತರಿಕ ಬೆಂಕಿ ಹೊತ್ತಿಕೊಂಡಿದೆ. ಅದರಲ್ಲೂ ವಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರಗಳು ಕಿತ್ತಾಟಕ್ಕೆ ಪೆಟ್ರೋಲ್ ಸುರಿದಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತಾಡುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ದಾಳ ಮಾಡಿಕೊಂಡು ಟ್ವೀಟ್ ಮೂಲಕ ಕೆಣಕಿದೆ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಆರ್.ಅಶೋಕ್, ಡಾ. ಅಶ್ವತ್ಥನಾರಾಯಣ್ & ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಕೆಣಕಿದೆ. ಹಾಗಾದ್ರೆ ಕಾಂಗ್ರೆಸ್ ಟ್ವೀಟ್‌ನಲ್ಲಿ ಇರೋದೇನು? ಇಲ್ಲಿದೆ ಮಾಹಿತಿ.

'ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ...'
ಅಂದಹಾಗೆ ಕರ್ನಾಟಕದಲ್ಲಿ ಚುನಾವಣೆ ಮುಗಿದು ಒಂದೂವರೆ ತಿಂಗಳು ಕಳೆದಿದೆ. ಆದ್ರೂ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಿಸಿದ್ದು, 'ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ! @BasanagoudaBJP - ಬಾಯಿ ತೆರೆದರೆ ಹೊಲಸು ಮಾತುಗಳು. @RAshokaBJP - ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ. @drashwathcn - ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ. @BSBommai - ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ!' ಎಂದು ಕಮಲ ಪಾಳಯಕ್ಕೆ ಚಾಲೆಂಜ್ ಮಾಡಿದೆ.
ಗ್ಯಾರಂಟಿ ಹೋಯ್ತು.. ಹೊಸ ಫೈಟ್ ಬಂತು..!
ಅಂದರೆ ಕಾಂಗ್ರೆಸ್ ಟ್ವೀಟ್ ಪ್ರಕಾರ, 'ಬಸನಗೌಡ ಪಾಟೀಲ್ ಯತ್ನಾಳ್ - ಬಾಯಿ ತೆರೆದರೆ ಹೊಲಸು ಮಾತುಗಳು, ಆರ್.ಅಶೋಕ್ - ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ. ಡಾ. ಅಶ್ವತ್ಥನಾರಾಯಣ್ - ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ - ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ!' ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಚಾಲೆಂಜ್ ಹಾಕಿದೆ. ಆದರೆ ಈ ಬಗ್ಗೆ ಬಿಜೆಪಿ ಯಾವುದೇ ರೀಪ್ಲೇ ಕೊಟ್ಟಿಲ್ಲ. ಹೀಗಾಗಿ ಈಗ ಗ್ಯಾರಂಟಿ ವಾರ್ ಬದಲು ವಿಪಕ್ಷ ನಾಯಕನ ಆಯ್ಕೆ ವಿಚಾರ ಹೊಸ ಗುದ್ದಾಟಕ್ಕೆ ವೇದಿಕೆ ಒದಗಿಸಿದಂತಾಗಿದೆ.
'ಭಜರಂಗದಳದ ವಿರುದ್ಧ ಕಾಂಗ್ರೆಸ್‌ಗೆ ದ್ವೇಷ'
ಅತ್ತ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಗೆ ಚಾಲೆಂಜ್ ಹಾಕಿದ್ದರೆ, ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದೆ. 'ರಾಜ್ಯದಲ್ಲಿ @INCKarnataka ಮೊದಲಿನಿಂದಲೂ ಭಜರಂಗದಳದ ವಿರುದ್ಧ ದ್ವೇಷಕಾರುತ್ತಾ ಬಂದಿದೆ. ಹೀಗಾಗಿಯೇ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಚೋದಿಸಿ ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ. ಮಾನ್ಯ @siddaramaiah ರವರೇ, ನಿಮ್ಮ ತುಘಲಕ್ ಸರ್ಕಾರದ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೇ..? ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೈಯಲ್ಲಿ ಹರಿಯುತ್ತಿರುವುದು, ನಿಮ್ಮ ಮೈಯಲ್ಲಿ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತವೇ ಹೊರೆತು, ಹಸಿರು ಬಣ್ಣದ ರಕ್ತವಲ್ಲ... ಇದೇನಾ ನಿಮ್ಮ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆ?' ಎಂದು ಆರೋಪ ಮಾಡಿದೆ.
ಒಟ್ನಲ್ಲಿ ಎರಡೂ ಪಕ್ಷಗಳ ನಡುವೆ ಕಿತ್ತಾಟ ಬಲು ಜೋರಾಗಿದೆ. ಅದ್ರಲ್ಲೂ ಕಾಂಗ್ರೆಸ್‌ನ 5 ಗ್ಯಾರಂಟಿಗಳ ವಿಚಾರದಲ್ಲಿ ಬಿಜೆಪಿ ನಾಯಕರು ಇಷ್ಟುದಿನ ಆರೋಪ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಕಾಂಗ್ರೆಸ್ ವಿಪಕ್ಷ ನಾಯಕನ ಆಯ್ಕೆ ವಿಚಾರ ಮುಂದಿಟ್ಟುಕೊಂಡು ಅಸ್ತ್ರ ಪ್ರಯೋಗ ಮಾಡಿದೆ. ಸದ್ಯಕ್ಕೆ ಬಿಜೆಪಿ ಆಂತರಿಕ ಜಗಳ ತಣ್ಣಗಾಗುವ ಲಕ್ಷಣ ಇಲ್ಲ. ಹಾಗೇ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಆರೋಪ ಮಾಡುತ್ತಿದೆ. ಇದೆಲ್ಲಾ ಎಲ್ಲಿಗೆ ಕೊನೆಯಾಗುತ್ತೋ, ಕಿತ್ತಾಟ ಯಾವಾಗ ಮುಗಿಯುತ್ತೋ ಅಂತಾ ಜನ ಕೇಳ್ತಿದ್ದಾರೆ.












Click it and Unblock the Notifications