ನವೆಂಬರ್‌ನಲ್ಲಿ ರಾಜ್ಯಕ್ಕೆ ಹೊಸ ಸಿಎಂ ಬರ್ತಾರೆ: ಭವಿಷ್ಯ ನುಡಿದಿದ್ಯಾರು?
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಸ್ಫೋಟಕ ಸುದ್ದಿಯೊಂದು ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ದಿನಾಂಕದ ಸಮೇತ ಅಶೋಕ್ ಭವಿಷ್ಯ ನುಡಿದಿದ್ದು, ಈ ವರ್ಷದ ನವೆಂಬರ್ ತಿಂಗಳಲ್ಲೇ ಸಿಎಂ ಬದಲಾಗಲಿದ್ದಾರೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ತಮ್ಮವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿ ಅಶೋಕ್ ಈ ಹೇಳಿಕೆ ನೀಡಿದ್ದಾರೆ.

ಮುಂದಿನ ನವೆಂಬರ್ 15 ಅಥವಾ 16ನೇ ತಾರೀಖಿನಂದು ಸಿಎಂ ಸಿದ್ದರಾಮಯ್ಯ ತಮ್ಮ ಗಂಟು ಮೂಟೆ ಕಟ್ಟಬೇಕಾಗುತ್ತದೆ. ಆ ಸಮಯದಲ್ಲಿ ಕಾಂಗ್ರೆಸ್ ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮ್ಯೂಸಿಕಲ್ ಚೇರ್‌ನಂತೆ ಸ್ಪರ್ಧೆ ಇರಲಿದೆ. ಇದು ನೂರರಷ್ಟು ಪಕ್ಕಾ ನ್ಯೂಸ್ ಎಂದು ಆರ್.ಅಶೋಕ್ ನುಡಿದಿರುವ ಭವಿಷ್ಯವಾಣಿಯು ರಾಜ್ಯ ರಾಜಕಾರಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕಾಂಗ್ರೆಸ್‌ನಲ್ಲಿ ಮೊದಲೇ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ. ನಾನು ಜ್ಯೋತಿಷಿಯೇನಲ್ಲ, ಆದರೆ ಕಾಂಗ್ರೆಸ್‌ನಲ್ಲಿ ನನಗೂ ಆಪ್ತರಿದ್ದಾರೆ. ಹೀಗಾಗಿಯೇ ಸಿಎಂ ಬದಲಾಗುವ ವಿಚಾರ ನನಗೆ ತಿಳಿದಿದೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿಯನ್ನು ಒದ್ದಾದರೂ ಅಧಿಕಾರವನ್ನು ಕಿತ್ತುಕೊಳ್ಳಲಿದ್ದಾರೆ ಎಂದು ಅಶೋಕ್ ಬಾಂಬ್ ಸಿಡಿಸಿದ್ದಾರೆ.

ಇದೇ ವೇಳೆ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ವಂಚನೆ ಮಾಡಿದೆ. 5ನೇ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಮೋಸ ಮಾಡಿದೆ. ಬೇಡಿಕೆ ಈಡೇರುವ ತನಕ ಪಕ್ಷ ನಿಮ್ಮೊಂದಿಗೆ ಇರಲಿದೆ ಅಂದ್ರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಅಡ್ಡಿಪಡಿಸಿ ಟೆಂಟ್ ಕಿತ್ತುಕೊಳ್ಳೋಕೆ ಸಿದ್ದು ಸರ್ಕಾರ ಮುಂದಾಗಿದೆ. ನಿಮ್ಮ ಟೆಂಟ್ ಕಿತ್ತುಕೊಳ್ತಾರೆ ಇರೋ ಸ್ವಲ್ಪ ದಿನದಲ್ಲಿ ಇವರಿಗೆ ಒಳ್ಳೆಯದು ಮಾಡಿ ಅಂತಾ ಲೇವಡಿ ಮಾಡಿದ್ರು.
ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ: ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಆರ್.ಅಶೋಕ್ ಬೆಂಬಲ ನೀಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೂಲಕ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಹಿಟ್ಲರ್ ಧೋರಣೆ ತೋರಿದೆ.
ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ನ್ಯಾಯ? ತಮ್ಮ ನಾಯಕ ರಾಹುಲ್ ಗಾಂಧಿ ಅವರು ಹೋಗಿಬಂದಲ್ಲೆಲ್ಲ ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಸಾಮಾನ್ಯ ನಾಗರಿಕರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ವಾ? ಅಥವಾ ನಮ್ಮ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಏನಾದರೂ ಇದೆಯೇ? ನಿಮ್ಮ ಈ ಹಿಟ್ಲರ್ ಧೋರಣೆ ಜಾಸ್ತಿ ದಿನ ನಡೆಯುವುದಿಲ್ಲ. ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ತಿರುಗಿ ಬೀಳುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications