ಹೈಕಮಾಂಡ್ ಅಂಗಳದಲ್ಲಿ ವಿಧಾನ ಪರಿಷತ್ ಟಿಕೆಟ್ ಫೈಟ್: ಯಾರಿಗೆ ಸಿಗಲಿದೆ ಅವಕಾಶ?
ನವದೆಹಲಿ, ಮೇ 29: ಆಡಳಿತರೂಢ ಕಾಂಗ್ರೆಸ್ ಪಾಳಯದಲ್ಲಿ ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರ ಸದ್ಯ ಹೈಕಮಾಂಡ್ ಅಂಗಳವನ್ನ ತಲುಪಿದ್ದು, ಏಳು ಸ್ಥಾನಗಳಿಗೆ ಬರೋಬ್ಬರಿ 400 ಕ್ಕೂ ಹೆಚ್ಚು ಆಕಾಂಕ್ಷಿಗಳು ಬೇಡಿಕೆ ಇಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ ನಾಯಕರು ಪರಿಷತ್ ಟಿಕೆಟ್ ಗೆ ಪಟ್ಟು ಹಿಡಿದಿದ್ದಾರೆ.
ಹೌದು, ಏಳು ಸ್ಥಾನಗಳಿಗೆ ಬರೋಬ್ಬರಿ 400 ಕ್ಕೂ ಹೆಚ್ಚು ನಾಯಕರು ಬೇಡಿಕೆ ಇಟ್ಟಿದ್ದು, ಸದ್ಯ ರಾಜ್ಯ ಕಾಂಗ್ರೆಸ್ ನಾಯಕರಿಗೆ ಗೊಂದಲದ ಗೂಡಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಗೆ ಪಟ್ಟಿಯೊಂದಿಗೆ ತೆರಳಿದ್ದಾರೆ. ಅಂತಿಮವಾಗಿ ದೆಹಲಿ ನಾಯಕರ ಜೊತೆಗೆ ಚರ್ಚೆ ನಡೆಸಿದ ಬಳಿಕ ಪಟ್ಟಿಯನ್ನ ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿದೆ.

ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿಯನ್ನು ಹೈಕಮಾಂಡಿಗೆ ಸಲ್ಲಿಸಿದ್ದೇನೆ. ಒಂದು ಸುತ್ತಿನ ಸಭೆ ನಡೆದಿದ್ದು. ಎಐಸಿಸಿ ಅಧ್ಯಕ್ಷರು ಹಾಗೂ ಇತರರ ಜೊತೆ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಎಲ್ಲಾ ಸಮಾಜಗಳಿಗು ಅವಕಾಶ ಮಾಡಿಕೊಡಬೇಕು. 300 ಕ್ಕೂ ಹೆಚ್ಚು ಜನ ಆಂಕಾಕ್ಷಿಗಳು ಇರುವ ಕಾರಣ ಒಂದಷ್ಟು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ವರ್ಗದವರಿಗೂ ಈ ಬಾರಿ ಅವಕಾಶ ಮಾಡಿಕೊಡಲು ಆಗಿಲ್ಲ. ಪ್ರಾಥಮಿಕವಾಗಿ ಒಂದಷ್ಟು ಹೆಸರುಗಳನ್ನು ನಾವು ಸೂಚಿಸಿದ್ದೇವೆ. ಜೊತೆಗೆ ಸಚಿವರು, ಎಐಸಿಸಿ ಕಾರ್ಯದರ್ಶಿಗಳು ತಮ್ಮ ಆಯ್ಕೆಗಳನ್ನು ಶಿಫಾರಸ್ಸು ಮಾಡಿದ್ದಾರೆ.
ಮುಂದಿನ ಎರಡು ವರ್ಷಗಳ ನಂತರ ಮತ್ತೊಮ್ಮೆ ಇದೇ ರೀತಿ ಅವಕಾಶ ಬರುವ ಕಾರಣ ಅವರಿಗೆಲ್ಲ ಮುಂದಿನ ಬಾರಿ ಸ್ಥಾನ ನೀಡಲಾಗುವುದು. ಈಗ ಏಳರಿಂದ- ಎಂಟು ಮಂದಿಗೆ ಅವಕಾಶ ಮಾಡಿ ಕೊಡಲಾಗುವುದು. ಪಕ್ಷ ಸಂಘಟನೆಗೆ ದುಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಪಕ್ಷ ಏನು ಹೇಳುತ್ತದೆ ಅದರಂತೆ ಕೇಳಬೇಕು. ನಮ್ಮ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ಹೈಕಮಾಂಡ್ ಎಐಸಿಸಿ ಕಾರ್ಯದರ್ಶಿಗಳ ಬಳಿಯು ಪಟ್ಟಿ ತೆಗೆದುಕೊಳ್ಳುತ್ತದೆ. ಚುನಾವಣಾ ಸಮಯದಲ್ಲಿ ಕೆಲಸ ಮಾಡಿದವರು ಯಾರು, ಅವರ ಹಿನ್ನೆಲೆ, ತ್ಯಾಗ, ಶ್ರಮ ಪಟ್ಟಿರುವರ ಹೆಸರು ಹೈಕಮಾಂಡ್ ಗೆ ಸಲ್ಲಿಕೆಯಾಗುತ್ತದೆ. ಹಿರಿಯರು, ಯುವಕರು ಸೇರಿದ ಸಮತೋಲನದ ಪಟ್ಟಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ" ಎಂದು ತಿಳಿಸಿದರು.
ಕುಟುಂಬದವರಿಗೆ ಬೇಡ ಕಾರ್ಯಕರ್ತರಿಗೆ ನೀಡಿ ಎನ್ನುವ ಮಾತು ಕೇಳಿಬರುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾವ ಕುಟುಂಬದವರಿಗೂ ಇಲ್ಲ. ಶಾಸಕ ಸ್ಥಾನ ಬಿಟ್ಟು ಕೊಟ್ಟ ಕಾರಣಕ್ಕೆ, ಒಂದು ಸ್ಥಾನಕ್ಕೆ ಮಾತ್ರ ಈ ಮೊದಲು ಮಾತು ಕೊಟ್ಟಂತೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಕೊಡಲಾಗುತ್ತದೆಯೇ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ ಮಾತುಗಳನ್ನು ನಾನು ಕೇಳಲು ಆಗುವುದಿಲ್ಲ. ನಾವು ಕೆಲವರಿಗೆ ಮಾತು ಕೊಟ್ಟಿದ್ದೇವೆ. ಆ ಮಾತಿನಂತೆ ಕೆಲವೊಂದು ಸಂದರ್ಭದಲ್ಲಿ ನಡೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಈ ವಿಚಾರವಾಗಿ ತನಿಖೆ ನಡೆಸಲು ಈಗಾಗಲೇ ಸಿಎಂ ಮತ್ತು ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅತ್ಯಂತ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.












Click it and Unblock the Notifications