
ಮಂಡ್ಯದಲ್ಲಿ ಆಪರೇಷನ್ ಕಮಲ; ಸುಮಲತಾ ಆಪ್ತ ಸಚ್ಚಿದಾನಂದ ಸೇರಿ ಹಲವರು ಬಿಜೆಪಿಗೆ
ಬೆಂಗಳೂರು, ನವೆಂಬರ್ 28: ವಿಧಾನಸಭಾ ಚುನಾವಣಾ ದೃಷ್ಠಿಯಿಂದ ಸಕ್ಕರೆ ನಾಡು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಈ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಅವರನ್ನ ಬಿಜೆಪಿ ಬಿಗ್ ಆಪರೇಷನ್ ಮಾಡಿದ್ದು, ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂಡುವಾಳು ಸಚ್ಚಿದಾನಂದ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಇಂಡುವಾಳು ಸಚ್ಚಿದಾನಂದ, ನಾಗಮಂಗಲ ರವಿ, ಶ್ರೀ ರಂಗ ಪಟ್ಟಣ ಲಿಂಗಾರಾಜು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಈ ವೇಳೆ ಪಕ್ಷದ ಬಾವುಟ ಹಾಗೂ ಶಾಲು ಹೊದಿಸಿ ಸಚಿವರಾದ ಸಿ.ಎನ್.ಅಶ್ವತ್ಥ್ ನಾರಾಯಣ್, ನಾರಾಯಣಗೌಡ, ಗೋಪಾಲಯ್ಯ ಮತ್ತು ಸಿ.ಪಿ.ಯೋಗೀಶ್ವರ್ ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ತರಲು ಈ ಪ್ರಯತ್ನ ನಡೆಯುತ್ತಿದೆ. ಸಚ್ಚಿದಾನಂದ ಸೇರಿದಂತೆ ಹಲವರ ಸೇರ್ಪಡೆ ಯಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಹಾಗೂ ಹೊಸ ಸಂಚಲನ ಮೂಡಿಸಿದೆ. ಮಂಡ್ಯದಲ್ಲಿ ಇವಾಗ ಒಬ್ಬರು ಎಂಎಲ್ ಎ ಇದ್ದಾರೆ, ಮುಂದೆ 7ಕ್ಕೆ 7 ಶಾಸಕರುಗಳು ಬಿಜೆಪಿಯಿಂದ ಆಯ್ಕೆ ಆಗುತ್ತಾರೆ ಎಂದರು. ಮಂಡ್ಯ ಜಿಲ್ಲಾ ಉಸ್ತುವಾ೯ರಿ ಸಚಿವರು ಮಾಡಿರುವ ಕೆಲಸದಿಂದ 7ಕ್ಕೆ 7 ಶಾಸಕರುಗಳು ಬಿಜೆಪಿಯಿಂದ ಆಯ್ಕೆಯಾಗುತ್ತಾರೆ. ನಾರಾಯಣಗೌಡ ಹಾಗೂ ಗೋಪಾಲಯ್ಯರ ಪ್ರಯತ್ನ ದಿಂದ ಕುಂಭಮೇಳ ಯಾತ್ರೆ ಯಶಸ್ವಿ ಆಗಿದೆ. ಈ ಯಾತ್ರೆಯಿಂದ ಮಂಡ್ಯದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಹಿಂದೂತ್ವ ಮತ್ತಷ್ಟು ಜಾಸ್ತಿ ಆಗುತ್ತದೆ ಮುಂದೆಯು ಕೂಡ ಅಲ್ಲಿ ಹಿಂದೂತ್ವದ ಆಧಾರದಲ್ಲೇ ಗೆಲ್ಲುತ್ತೇವೆ ಎಂದರು.
ನಾವು ಯಾರು ಕಾಂಗ್ರೆಸ್, ಜೆಡಿಎಸ್ ಗೆ ಭಯ ಪಡುವ ಅವಶ್ಯಕತೆ ಇಲ್ಲ: ನಾರಾಯಣ ಗೌಡ
ಇನ್ನೂ ಈ ಕುರಿತು ಸಚಿವ ನಾರಯಣಗೌಡ ಮಾತನಾಡಿ, ಇಡೀ ಭಾರತದಲ್ಲೇ ಒಳ್ಳೆಯ ಪಕ್ಷ ಅಂದರೆ ಅದು ಬಿಜೆಪಿ. ಅದಕ್ಕಾಗಿ ನಾನು ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ. ಆವಾಗ ಯಾವ ಕಡೆ ನೋಡಿದ್ರು ಯಾರು ಕಾಣಿಸ್ತಿರಲಿಲ್ಲ, ಆಗ ಮದ್ದೂರು ಸ್ವಾಮಿ ಸೇರಿದಂತೆ ಹಲವರು ನನ್ನ ಜೊತೆ ಬಿಜೆಪಿಗೆ ಬಂದ್ರು. ಒಂದು ಒಂದುವರೆ ವರ್ಷದಿಂದ ಸಚ್ಚಿದಾನಂದನಿಗೆ ನಾವು ಗಾಳ ಹಾಕ್ತಿದ್ವಿ, ಆದರೆ ಕೊನೆಗೂ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಯೋಗೇಶಣ್ಣ ನೀವು ನಮ್ಮ ಜಿಲ್ಲೆಯವರು ಅಲ್ಲ, ಆದರೆ ನಿಮ್ಮ ನೇತೃತ್ವದಲ್ಲಿ ಹಿಂದೆ ನಾವು ಬಿಜೆಪಿ ಸೇರಿದ್ದೇವೆ. ಮಂಡ್ಯ ಜಿಲ್ಲೆ ಬೇರೆ ಬೇರೆ ಭದ್ರಕೋಟೆ ಯಾಗಿತ್ತು. ಇವತ್ತು ನಮ್ಮ ಜಿಲ್ಲೆಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.
ಮಂಡ್ಯದಲ್ಲಿ ಬಿಜೆಪಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ನಮಗೆ ಖುಷಿ ತರಿಸಿದೆ. ಮಂಡ್ಯದಲ್ಲಿ ಮುಂದೆ 7 ಸೀಟೂ ಗಳನ್ನು ಗೆಲ್ಲುತ್ತೇವೆ, ನಾನು ಇಡೀ ಜಿಲ್ಲೆಯಲ್ಲಿ ಸೇವಕನಾಗಿ ಕೆಲಸ ಮಾಡುತ್ತೇನೆ.
ನಾವು ಯಾರು ಕಾಂಗ್ರೆಸ್, ಜೆಡಿಎಸ್ ಗೆ ಭಯ ಪಡುವ ಅವಶ್ಯಕತೆ ಇಲ್ಲ. ನೀವೆಲ್ಲರೂ ನಮ್ಮ ಜೊತೆ ಬಂದಿದ್ದು ನನಗೆ ದೊಡ್ಡ ಖುಷಿ ತಂದಿದೆ. ನಮ್ಮದೆ ಸರ್ಕಾರ ಇದೆ, ಅಲ್ಲಿ ಯಾವುದೇ ಗೂಂಡಾಗಳು ಇಲ್ಲ, ಆದರೆ ಹಿಂದೆ ನಾನು ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿದಾಗ, ಕೆ ಆರ್ ಪೇಟೆಯಲ್ಲಿ ದೊಡ್ಡ ಗುಂಡಾಗಳು ಇದ್ರು, ಅವಾಗ ನನಗೆ ಕಲ್ಲಿನಲ್ಲಿ ಹೊಡೆದ್ರು, ಎಕ್ಕಡದಲ್ಲಿ ಹೊಡೆದ್ರು. ಆದರೆ ಅವರಿಗೆ ಕೊನೆಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು.
ಪಕ್ಷದ ಅಸ್ತಿತ್ವ ಅನಿವಾರ್ಯತೆ ಇರೋದ್ರಿಂದ ನಮಗೆ ಹೆಚ್ಚು ಆದ್ಯತೆ ಕೊಡಬೇಕು: ಸಿಪಿವೈ
ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮಾತನಾಡಿ, ಈ ಹಿಂದೆ ಮಂಡ್ಯ ಭಾಗದಲ್ಲಿ ಅಭ್ಯರ್ಥಿ ಗಳ ಕೊರತೆ ಇತ್ತು, ಆದರೆ ಈ ಬಾರಿ ಎಲ್ಲ ಕ್ಷೇತ್ರ ಗಳಲ್ಲೂ ಅಭ್ಯರ್ಥಿ ಗಳು ಇರೋದ್ರಿಂದ ಕೊರತೆ ನೀಗಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಬೇಕಾದ್ರೆ, ಸರ್ಕಾರದ ಯಂತ್ರ ಕೆಲಸ ಮಾಡಬೇಕು. ಮಂಡ್ಯ ಭಾಗದಲ್ಲಿ ಬರೀ ಭಾವನಾತ್ಮಕಕಾಗಿ ಗೆಲ್ಲೋಕೆ ಆಗಲ್ಲ, ಆದರೆ ಅಲ್ಲಿ ಅಭಿವೃದ್ಧಿ ಮೂಲಕ ಅಲ್ಲಿ ಗೆಲ್ಲಬೇಕು ಎಂದರು. ರಾಜಕೀಯ ಅಂದರೆ ಸ್ಪರ್ಧೆ ಇದ್ದೆ ಇರುತ್ತದೆ, ಆದರೆ ಸರ್ಕಾರದ ಆಡಳಿತ ಯಂತ್ರ ಗಟ್ಡಿಯಾಗಿರಬೇಕು. ನಮ್ಮ ಸರ್ಕಾರದಲ್ಲಿ ವಿರೋಧ ಪಕ್ಷಗಳಿಗೆ ಹೆಚ್ಚು ಜಾಸ್ತಿ ಸಹಾಯ ಆಗುತ್ತದೆ. ಇದನ್ನು ಎಷ್ಟೋ ಸಾರಿ ನಾನು ಬಹಿರಂಗವಾಗಿ ಹೇಳಿದ್ದೇನೆ ಆದರೆ ನಮ್ಮ ಪಕ್ಷದ ಅಸ್ತಿತ್ವ ಅನಿವಾರ್ಯತೆ ಇರೋದ್ರಿಂದ ನಮಗೆ ಹೆಚ್ಚು ಆದ್ಯತೆ ಕೊಡಬೇಕು. ಜಿಲ್ಲೆಯಲ್ಲಿ ನಮ್ಮ ಅಸ್ತಿತ್ವ ಪ್ರಶ್ನೆ ಯಿಂದ ಮೊದಲು ನಮಗೆ ಆದ್ಯತೆ ಕೊಡಬೇಕು ಎಂದು ಪರೋಕ್ಷವಾಗಿ ತಮ್ಮದೇ ಸರ್ಕಾರದ ಸಿಎಂ ಹಾಗೂ ಸಚಿವರ ವಿರುದ್ಧ ಅಸಮಧಾನ ಹೊರ ಹಾಕಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಗೋಪಾಲಯ್ಯ ಮಾತನಾಡಿ, ಮುಂದೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡಬೇಕು. ನಾವು ಶಾಸಕರಾಗಿ ರಾಜೀನಾಮೆ ಕೊಟ್ಟು ಬಂದಿದ್ದೇವೆ, ಇವಾಗ ನಮಗೆ ಖುಷಿ ಇದೆ. ನಮ್ಮ ಶಾಸಕರು ಇದ್ರೆ ಮಾತ್ರ ನಮ್ಮ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡೋಕೆ ಸಾಧ್ಯ, ಹೀಗಾಗಿ ಇನ್ನೂ ಆರು ತಿಂಗಳು ನೀವೆಲ್ಲರೂ ಹಗಲು - ರಾತ್ರಿ ಕೆಲಸ ಮಾಡಬೇಕು ಎಂದು ಸಚಿವ ಗೋಪಾಲಯ್ಯ ಕರೆ ಕೊಟ್ಟರು.
ಶಾಸಕರಾದ ಸತೀಶ್ ರೆಡ್ಡಿ, ಎಲ್. ರವಿಸುಬ್ರಹ್ಮಣ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಮಂಡ್ಯ ಜಿಲ್ಲಾ ಪ್ರಭಾರಿ ಜಗದೀಶ್ ಹಿರೇಮನಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆ.ಪಿ.ಸಿ.ಸಿ ಮಾಜಿ ಸದಸ್ಯ ಎಸ್ ಸಚ್ಚಿದಾನಂದ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮತ್ತು 2013 ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್. ಲಿಂಗರಾಜು, ಮುಖಂಡ ಬಾಬು ಹನುಮಾನ್, ಮಲ್ಲಿಕಾರ್ಜುನ್ (ಫೈಟರ್ ರವಿ), ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರಾಮಲಿಂಗಯ್ಯ, ಮಮತಾ ಧನಂಜಯ್, ಶ್ರೀಮತಿ ನಾಗರತ್ನ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಾಮೇಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ನಂದಮಣಿ ಚಂದ್ರಶೇಖರ್, ಯೋಗಾನಂದ ಪಟೇಲ್, ಶ್ರೀಮತಿ ಲಕ್ಷ್ಮಮ್ಮ, ಇಂಡುವಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಸ್ವಾಮಿ, ಬೇವಿನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ್, ಸೂನಗಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಕೆ, ಇಂಡುವಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಸ್ವಾಮಿ ಅವರು ಪಕ್ಷ ಸೇರಿದರು.