ಬಿಜೆಪಿ ಸೇರಲು ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷ ಆರೋಪ: ಕರ್ನಾಟಕದಲ್ಲಿ ಮತ್ತೆ ಆಕ್ಟಿವ್ ಆಯ್ತಾ ಆಪರೇಷನ್ ಕಮಲ?
ದಾವಣಗೆರೆ, ಅಕ್ಟೋಬರ್ 28: 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗಲು ಕಾರಣರಾದವರು ಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ. ಪಕ್ಷದ ಶಾಸಕರಿಗೆ ಸಚಿವ ಸ್ಥಾನದ ಆಮಿಷ ಒಡ್ಡಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ಶುಕ್ರವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
'ಪಕ್ಷ ಬದಲಾಯಿಸಲು ನಮ್ಮ ಶಾಸಕರಿಗೆ ಆಮಿಷ ಒಡ್ಡಲಾಗುತ್ತಿದೆ. ಸರ್ಕಾರ ರಚಿಸಲು ನಮ್ಮ ಶಾಸಕರಿಗೆ ಪ್ರತಿಪಕ್ಷ ನಾಯಕರು ಮಂತ್ರಿ ಸ್ಥಾನದ ಭರವಸೆಯನ್ನು ನೀಡುತ್ತಿದ್ದಾರೆ. ಜೊತೆಗೆ 50 ಕೋಟಿ ರೂಪಾಯಿ ನೀಡುವುದಾಗಿ ಹೇಳುತ್ತಿದ್ದಾರೆ. ಈ ಕುರಿತಂತೆ ವಿಡಿಯೊ ಪುರಾವೆ ನಮ್ಮ ಬಳಿ ಇದೆ. ಸದ್ಯದಲ್ಲೇ ಮಂಡ್ಯದಲ್ಲಿ ವಿಡಿಯೊ ಬಿಡುಗಡೆ ಮಾಡಲಾಗುವುದು' ಎಂದರು.

'ನಮ್ಮ ಶಾಸಕರಿಗೆ ವಿಶೇಷ ವಿಮಾನಗಳನ್ನು ವ್ಯವಸ್ಥೆಗೊಳಿಸಲಾಗುವುದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆಯನ್ನು ಆಯೋಜಿಸಲಾಗುವುದು' ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಬಿಜೆಪಿ ನಾಯಕರು ನಮ್ಮ ನಾಲ್ವರು ಶಾಸಕರನ್ನು ಭೇಟಿ ಮಾಡಿದ್ದಾರೆ. ನಮ್ಮ ಬಳಿ ವಿಡಿಯೊ ಪುರಾವೆಗಳಿವೆ. ನಮ್ಮ ಶಾಸಕರನ್ನು ಸಂಪರ್ಕಿಸಿದವರಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಾಜಿ ಪಿಎ ಆಗಿದ್ದಾರೆ. ಮೈಸೂರು ಭಾಗದ ಒಬ್ಬರು ಮತ್ತು ಬೆಳಗಾವಿ ಪ್ರದೇಶದ ಇನ್ನೊಬ್ಬರು ಈ ತಂಡದ ಭಾಗವಾಗಿದ್ದಾರೆ ಎಂದು ಗಾಣಿಗ ಹೇಳಿದ್ದಾರೆ.
'ಬೆಳಗಾವಿ ಭಾಗದ ಕಾಂಗ್ರೆಸ್ ಶಾಸಕರೊಬ್ಬರನ್ನು ಸಂಪರ್ಕಿಸಲಾಗಿದೆ. ಮೈಸೂರು, ಬೆಳಗಾವಿ, ಅರಸೀಕೆರೆಯಲ್ಲಿ ವಿರೋಧ ಪಕ್ಷದ ನಾಯಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ ಎಂದು ಗಾಣಿಗ ಹೇಳಿದ್ದಾರೆ.
ಬಿಜೆಪಿಯ ಈ ಕಾರ್ಯಾಚರಣೆ ವಿಫಲವಾಗಿದೆ. ವಾಸ್ತವವಾಗಿ, ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಆದರೆ ನಾವು ಅವರಿಗೆ ಯಾವುದೇ ಆಮಿಷಗಳನ್ನು ನೀಡಿಲ್ಲ. ನಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಅವರು ಪ್ರಭಾವಿತರಾಗಿದ್ದಾರೆ. ನಮ್ಮದು 135 ಶಾಸಕರ ಬಹುಮತದ ಸರ್ಕಾರ. ಸರ್ಕಾರ ನಡೆಸಲು ನಮಗೆ ಯಾವುದೇ ಬೆಂಬಲ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯನವರ ಎರಡೂವರೆ ವರ್ಷಗಳ ಅವಧಿಯ ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗಾಣಿಗ ತಿಳಿಸಿದ್ದಾರೆ.
ಮತ್ತೆ ಆಕ್ಟಿವ್ ಆಯ್ತಾ ಅಪರೇಷನ್ ಲೋಟಸ್
2019 ರಂತೆ ಬಿಜೆಪಿ ಪಕ್ಷವು ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಿದೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ, ಕಳೆದ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಬಂದಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದರೂ ಅದು ಸಫಲವಾಗುವುದು ಸುಲಭವಲ್ಲ ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.












Click it and Unblock the Notifications