ಟಿಪ್ಪು ಸುಲ್ತಾನ್ & ರಾಣಿ ಚೆನ್ನಮ್ಮ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು
ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ಟಿಪ್ಪು ಸುಲ್ತಾನ್ ಕುರಿತು ಮಾತನಾಡಿದ್ದಾರೆ. ಹಾಗೇ ಕನ್ನಡಿಗರ ನೆಲದ ರಾಣಿ & ಕೆಚ್ಚೆದೆಯ ಹೋರಾಟಗಾರ್ತಿ ರಾಣಿ ಚೆನ್ನಮ್ಮ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ. ಹಾಗಾದ್ರೆ ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದ್ದೇನು? ರಾಣಿ ಚೆನ್ನಮ್ಮ ಅವರ ಹೋರಾಟವನ್ನು ಸಿಎಂ ಸ್ಮರಿಸಿದ್ದು ಹೇಗೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂದಹಾಗೆ ಕನ್ನಡ & ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾಡಳಿತವು ರಾಣಿ ಚೆನ್ನಮ್ಮ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನ ಆಯೋಜಿಸಿದ್ದು, ಇಂದು ಈ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆಯನ್ನ ನೀಡಿದ್ರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿ ಎಂದರು. ಈ ಮೂಲಕ ರಾಣಿ ಚೆನ್ನಮ್ಮ ಅವರ ಹೋರಾಟವನ್ನು ಸಿಎಂ ಸಿದ್ದರಾಮಯ್ಯ ಸ್ಮರಿಸಿದ್ದಾರೆ. ಹಾಗೇ ಟಿಪ್ಪು ಸುಲ್ತಾನ್ ಹೋರಾಟದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನಾನು ಹಿಂದೆ ಸಿಎಂ ಆಗಿದ್ದಾಗಲೇ...
ಕಿತ್ತೂರು ರಾಣಿ ಚೆನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಅವರ ಧೈರ್ಯ & ಆದರ್ಶ ಯುವ ಸಮೂಹವನ್ನ, ಇವತ್ತಿನ ಪೀಳಿಗೆಯನ್ನ ತಲುಪಬೇಕು ಎಂಬ ಕಾರಣಕ್ಕೆ ನಾನು ಮೊದಲ ಬಾರಿ ಸಿಎಂ ಆದಾಗ, ಕಿತ್ತೂರು ಉತ್ಸವ ಮತ್ತು ಜಯಂತ್ಯುತ್ಸವ ಆರಂಭಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ವಿವರಿಸಿದರು. ಈ ನಡುವೆ ರಾಣಿ ಚೆನ್ನಮ್ಮ ಅವರ ಹೋರಾಟದ ಸ್ಫೂರ್ತಿ ಯುವ ಸಮೂಹಕ್ಕೆ ತಲುಪಬೇಕು ಎಂದರು.
ಇನ್ನು ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಬೈಲಹೊಂಗಲ ಶಾಸಕ ಮಹಂತೇಶ ಕೌಜಲಗಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೆ ಹಲವು ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಇನ್ನು ಈ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಬ್ರಿಟಿಷರ ವಿರುದ್ಧದ ಹೋರಾಟವನ್ನು ಸ್ಮರಿಸಲಾಯಿತು. ಕರ್ನಾಟಕದ ಮುಕುಟಮಣಿ ಬೆಳಗಾವಿಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ನಡೆಸಿದ ಹೋರಾಟ, ಭಾರತೀಯರ ಎದೆಯಲ್ಲಿ ಅಜರಾಮರ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಇಂದಿನ ಪೀಳಿಗೆಗೆ ಇದರ ಮಹತ್ವ ಸಾರಲು ಮಹತ್ವದ ಕಾರ್ಯಕ್ರಮ ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯ ಇಂದು ಅದಕ್ಕೆ ಚಾಲನೆ ನೀಡಿದ್ದಾರೆ.











Click it and Unblock the Notifications