ಹಾವೇರಿಯಲ್ಲಿ ಜಾಮೀನು ಪಡೆದ ಅತ್ಯಾಚಾರ ಆರೋಪಿಗಳಿಂದ ರೋಡ್ ಶೋ; ಮತ್ತೆ ಬಂಧನ
ಹಾವೇರಿಯಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಸಾಮೂಹಿಕ ಅತ್ಯಾಚಾರ ಆರೋಪದಡಿ ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದು ಕಾರುಗಳಲ್ಲಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಪಿಗಳನ್ನು ಮತ್ತೆ ಬಂಧಿಸಲಾಗಿದೆ.
ಹಾವೇರಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಏಳು ಪ್ರಮುಖ ಆರೋಪಿಗಳಲ್ಲಿ ನಾಲ್ಕು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಗಳು ಹಾವೇರಿಯ ಅಕ್ಕಿ ಅಲ್ಲೂರಿನ ಬೀದಿಗಳಲ್ಲಿ ಕಾರುಗಳಲ್ಲಿ ಮೆರವಣಿಗೆ ಮಾಡಲಾಗಿತ್ತು.

ಮೇ 20 ರಂದು ಈ ಘಟನೆ ನಡೆದಿದೆ. ಆರೋಪಿಗಳು ಸಂಭ್ರಮದಿಂದ ಮೆರವಣಿಗೆ ಮಾಡಿದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರಿ ಟೀಕೆಗೆ ಗುರಿಯಾದವು, ಜನಾಕ್ರೋಶ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾದರು.
ಆರೋಪಿಗಳ ವಿರುದ್ಧ ಪ್ರಕರಣ
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಶ್ರೀವಾಸ್ತವ ಘಟನೆ ಬಗ್ಗೆ ವರದಿಗಾರರಿಗೆ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಕಾನೂನುಬಾಹಿರ ಸಭೆ ಮತ್ತು ಅಶಿಸ್ತಿನ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಏಳು ಜನರ ವಿರುದ್ಧ ಪೊಲೀಸರು ವರದಿ ತಯಾರಿಸಿದ್ದು ಎಲ್ಲರ ಜಾಮೀನು ರದ್ದುಗೊಳಿಸುವಂತೆ ಕೋರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಬಂಧಿತರನ್ನು ಸಮಿಯುಲ್ಲಾ ಲಾಲನವರ್, ಮೊಹಮ್ಮದ್ ಸಾದಿಕ್ ಅಗಸಿಮಾನಿ, ಶೋಯಿಬ್ ಮುಲ್ಲಾ ಮತ್ತು ರಿಯಾಜ್ ಸಾವಿಕೇರಿ ಎಂದು ಗುರುತಿಸಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಮೂವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
2024 ರ ಜನವರಿಯಲ್ಲಿ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಏಳು ಪ್ರಮುಖ ಆರೋಪಿಗಳು ಸೇರಿದಂತೆ ಹತ್ತೊಂಬತ್ತು ಜನರನ್ನು ಬಂಧಿಸಲಾಯಿತು. ಪ್ರಕರಣದ ಇತರ ಹನ್ನೆರಡು ಆರೋಪಿಗಳನ್ನು 10 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
26 ವರ್ಷದ ಸಂತ್ರಸ್ತೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಂತರ, ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರು. ಹಾನಗಲ್ ತಹಶೀಲ್ದಾರ್ ಮುಂದೆ ನಡೆದ ಗುರುತಿನ ಪೆರೇಡ್‌ನಲ್ಲಿ ಅವರು ಶಂಕಿತರನ್ನು ಗುರುತಿಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications