ಡೆಲ್ಟಾಗಿಂತಲೂ ಅಪಾಯಕಾರಿ ಓಮಿಕ್ರಾನ್ : ಡಾ. ಯು.ಎಸ್. ವಿಶಾಲ್ ರಾವ್ ಕೊಟ್ಟ ಅಚ್ಚರಿ ಮಾಹಿತಿ
ಬೆಂಗಳೂರು, ಡಿ. 08: ಡೆಲ್ಟಾಗಿಂತಲೂ ಓಮಿಕ್ರಾನ್ ವೈರಸ್ ಅತಿ ಅಪಾಯಕಾರಿ. ಡೆಲ್ಟಾದಲ್ಲಿ ಕೇವಲ 16 ಮ್ಯೂಟೆಂಟ್ ಇದ್ದರೆ, ಓಮಿಕ್ರಾನ್‌ನಲ್ಲಿ 34 ಮ್ಯೂಟೆಂಟ್ ಇವೆ. ಓಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ 2020 ನೇ ವರ್ಷದ ಕೊರೊನಾ ಪರಿಣಾಮಕ್ಕಿಂತಲೂ ಘೋರವಾದುದನ್ನು ನಾವು ಎದುರಿಸಬೇಕಾಗಬಹುದು ಎಂದು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಡೀನ್ ಡಾ. ಯು. ಎಸ್. ವಿಶಾಲ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಓಮಿಕ್ರಾನ್ ವೈರಸ್ ಕುರಿತು ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಅವರು, ಓಮಿಕ್ರಾನ್ ಅಪಾಯಕಾರಿ ಕುರಿತು ಈಗಾಗಲೇ ವಿಶ್ವಸಂಸ್ಥೆ ಜಗತ್ತನ್ನು ಎಚ್ಚರಿಸಿದೆ. ಆಫ್ರಿಕಾದಲ್ಲಿ ಈ ಮೊದಲು ದಿನಕ್ಕೆ ಕೇವಲ 280 ಪ್ರಕರಣ ದಾಖಲಾಗುತ್ತಿತ್ತು. ಇದೀಗ ಏಕಾಏಕಿ ದಿನಕ್ಕೆ 16 ಸಾವಿರ ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿವೆ. ಇದು ಡೆಲ್ಟಾಗಿಂತಲೂ ಹೆಚ್ಚು ಹರಡುವ ಶಕ್ತಿ ಹೊಂದಿದೆ. ಈ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ವಿಶ್ವ ಅರೋಗ್ಯ ಸಂಸ್ಥೆ ಈವರೆಗೂ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಇದಕ್ಕೆ ಹರಡುವ ಶಕ್ತಿ ಜಾಸ್ತಿಯಿದೆ, ಓಮಿಕ್ರಾನ್ ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗುವ ಸಾಧ್ಯತೆಯೂ ಹೆಚ್ಚು ಹಾಗೂ ಈವರೆಗೂ ತೆಗೆದುಕೊಂಡಿರುವ ಲಸಿಕೆಗಳು ಕೆಲಸ ಮಾಡುವ ಸಂಭವನೀಯತೆ ಕಡಿಮೆ ಇರಬಹುದು ಎಂದು ಹೇಳಲಾಗಿತ್ತು. ವಿಶ್ವಸಂಸ್ಥೆ ಹೇಳಿದ್ದು ಇದೀಗ ಅಧ್ಯಯನಗಳಿಂದಲೇ ಸಾಬೀತಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ದಿನಕ್ಕೆ 280 ಪ್ರಕರಣ ವರದಿಯಾಗುತ್ತಿತ್ತು. ಇದೀಗ ಅವುಗಳ ಸಂಖ್ಯೆ 16 ಸಾವಿರ ಗಡಿ ದಾಟಿದೆ. ಓಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತಾಗಿದೆ. ಇನ್ನೂ ಓಮಿಕ್ರಾನ್ ಸೋಂಕಿನ ವಿರುದ್ಧ ಲಸಿಕೆಗಳು ಒಂದಷ್ಟು ಕೆಲಸ ಮಾಡುತ್ತಿವೆ. ಹಿಗಾಗಿ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ. ಜತೆಗೆ ಸಾಮಾಜಿಕ ಅಂತರ ಕಾಪಾಡುವ ಜತೆಗೆ ಕೊರೊನಾ ಸೋಂಕು ನಿಯಂತ್ರಣ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಡಾ. ಯು.ಎಸ್. ವಿಶಾಲ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕಾಣಿಸಿಕೊಂಡಿದ್ದ ಡೆಲ್ಟಾ, ಡಿಸೆಂಬರ್ ನಿಂದ ಏಪ್ರಿಲ್ ಅಂತ್ಯದ ವೇಳೆಗೆ ಶೇ. 25 ರಷ್ಟು ಮಂದಿಗೆ ಹೆಚ್ಚಳವಾಗಿತ್ತು. ಅದಕ್ಕಿಂತೂ ದುಪ್ಪಟ್ಟು ವೇರಿಯಂಟ್ ಗಳನ್ನು ಓಮಿಕ್ರಾನ್ ಹೊಂದಿದೆ. ಹೀಗಾಗಿ ಓಮಿಕ್ರಾನ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ಕೂಡ ಲಸಿಕೆ ಹಾಕಿಸಿಕೊಂಡು ಕೋವಿಡ್ ಸುರಕ್ಷತಾ ನಿಯಮ ಪಾಲನೆ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ. ಭಾರತದಲ್ಲಿ ಸಹ ಓಮಿಕ್ರಾನ್ ಹರಡುವ ಭೀತಿಯಿದೆ ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಓಮಿಕ್ರಾನ್ ಪತ್ತೆ ಮಾದರಿ:
ಓಮಿಕ್ರಾನ್ ಪತ್ತೆ ಸಂಬಂಧ ಎಲ್ಲರಿಗೂ ಜಿನೋಮ್ ಸೀಕ್ವೆನ್ಸಿಂಗ್ ಸರ್ವೆ ಮಾಡುವ ಅಗತ್ಯವಿಲ್ಲ. ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದಾಗ N - ಜೀನ್ ( ನ್ಯೂಕ್ಲಿಯರ್ ) ಹಾಗೂ ಎನ್ವಲಪ್ ಜೀನ್ ಪಾಸಿಟೀವ್ ಬಂದರೆ ಮಾತ್ರ ಎಸ್. ಜೀನ್ ಬಗ್ಗೆ ಸೀಕ್ವೆನ್ಸಿಂಗ್ ಮಾಡಬೇಕು. ಎಸ್. ಜೀನ್ ನೆಗಟೀವ್ ಬಂದರೆ ಓಮಿಕ್ರಾನ್ ಎಂದು ಭಾವಿಸಬೇಕಾಗುತ್ತದೆ. ಹೀಗಾಗಿ ಶಂಕಿತ ಕೊರೊನಾ ಪ್ರಕರಣಗಳನ್ನು ಎನ್ ಮತ್ತು ಇ ಜೀನ್ ಪರೀಕ್ಷೆಗೆ ಒಳಪಡಿಸಬೇಕು. ಆದರೆ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜೀನೋಮಿಕ್ ಸರ್ವೆಲೆನ್ಸ್ ಸರಿಯಾಗಿ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಓಮಿಕ್ರಾನ್ ನಿಂದ ಏನೂ ಆಗಲ್ಲ, ಓಮಿಕ್ರಾನ್‌ನಿಂದ ಯಾವುದೇ ಅಪಾಯವಿಲ್ಲ ಎಂದು ತಮಾಷೆ ಮಾಡುವ ಅಗತ್ಯವಿಲ್ಲ. ನಾವು ಮುನ್ನೆಚ್ಚರಿಕೆ ಕ್ರಮ ವಹಿಸಲೇಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಜಿನೋಮಕ್ ಸರ್ವೆಲೆನ್ಸ್ ನಡೆಸುವ ಸಂಬಂಧ ಕ್ರಮ ಜರುಗಿಸಬೇಕಾಗಿದೆ. ಓಮಿಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದ ಮೂರು ಅಂಶಗಳು ಸತ್ಯ ಎಂಬುದಕ್ಕೆ ನಮಗೆ ಸಾಕ್ಷಾಧಾರಗಳು ಲಭ್ಯವಾಗುತ್ತಿವೆ. ಡೆಲ್ಟಾ ಮತ್ತಿತರ ವೈರಸ್ ಗಳಿಗಿಂತಲೂ ಅಪಾಯಕಾರಿಯಾಗಿರುವ ಓಮಿಕ್ರಾನ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಡಾ. ಯು.ಎಸ್. ವಿಶಾಲ್ ರಾವ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications