ಡಿಕೆಶಿ ಕರ್ನಾಟಕದ 'ಸಾರಥಿ'ಯಾಗಲಿ; ಸೋನಿಯಾ, ರಾಹುಲ್‌ಗೆ ಓಲಾ-ಉಬರ್ ಚಾಲಕರ ಸಂಘ ಒತ್ತಾಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದಿದೆ. ಇದೀಗ ಮುಖ್ಯಮಂತ್ರಿ ಆಯ್ಕೆಯೇ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ತಾನೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಸಡಿಲಿಸದೆ ಪ್ರಯತ್ನ ತೀವ್ರಗೊಳಿಸಿದ್ದಾರೆ.

ಸದ್ಯ ಸಿಎಂ ಆಯ್ಕೆ ವಿಚಾರ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಬಳಿಯಿದ್ದು, ಒಂದೆರಡು ದಿನಗಳಲ್ಲಿ ಕರ್ನಾಟಕ ಸಿಎಂ ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಆದರೆ, ಇಬ್ಬರು ನಾಯಕರ ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮ ನಾಯಕನೇ ಮುಖ್ಯಮಂತ್ರಿಯಾಗಬೇಕು ಎಂದು ಘೋಷಣೆ ಕೂಡಗುತ್ತಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಕರ್ನಾಟಕದ ಸಿಎಂ ಆಗಬೇಕೆಂದು ಕರ್ನಾಟಕದ ವಾಣಿಜ್ಯ ವಾಹನ (ಓಲಾ ಮತ್ತು ಉಬರ್) ಚಾಲಕರ ಸಂಘ ಒತ್ತಾಯಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಡಿ.ಕೆ. ಶಿವಕುಮಾರ್ ಮನೆ ಎದುರು ಡಿಕೆಶಿ ಸಿಎಂ, ಡಿಕೆಶಿ ಜೊತೆ ನಾವಿದ್ದೇವೆ ಎಂದು ಓಲಾ ಮತ್ತು ಉಬರ್ ಚಾಲಕರು ಬ್ಯಾನರ್ ಹಿಡಿದು ಬೆಂಬಲ ಸೂಚಿಸಿದ್ದಾರೆ.

ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರಂತಹ ಬಲಿಷ್ಠ ನಾಯಕ ನಮಗೆ ಬೇಕು. ಎಲ್ಲಾ ನಾಯಕರಿಗೆ ಬೆಂಬಲ ನೀಡಿದ್ದೇವೆ, ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಡಿ.ಕೆ. ಶಿವಕುಮಾರ್ ಚಾಲಕರ ಪರವಾಗಿ ನಿಂತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಲಿ ಎಂದು ಒತ್ತಾಯಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದೇವೆ. ಕೆಪಿಸಿಸಿಯಲ್ಲಿ ಚಾಲಕರಿಗಾಗಿಯೇ ಸಾರಿಗೆ ವಿಭಾಗ ತೆರೆದಿದ್ದಾರೆ. ಪ್ರಣಾಳಿಕೆಯಲ್ಲಿ ನಮ್ಮ ಪರವಾಗಿಯೂ ಘೋಷಣೆ ಮಾಡಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಸಾರಥಿಯಾಗಲಿ ಎಂದು ಹೇಳಿದರು.

ನಮ್ಮ ಸಮಸ್ಯೆಗಳನ್ನು ತಿಳಿದುಕೊಳ್ಳಲು ಡಿ.ಕೆ. ಶಿವಕುಮಾರ್ ಹಲವು ಸಭೆಗಳನ್ನು ನಡೆಸಿದ್ದಾರೆ. ಇದು ನಮ್ಮ ಚಾಲಕರ ಸಂಘ ಅವರಿಗೆ ಬೆಂಬಲಿಸಲು ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ನಮಗಿರುವ ಏಕೈಕ ಭರವಸೆಯ ನಾಯಕ ಎಂದು ಚಾಲಕರ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದರು.
ಕರ್ನಾಟಕದ ಮುಂದಿನ ಸಿಎಂ ಯಾರು?
ಸಿಎಂ ಆಯ್ಕೆಯ ಹೊಣೆಯನ್ನು ಹೈಕಮಾಂಡ್‌ಗೆ ವಹಿಸಿದ ಬೆನ್ನಲ್ಲೇ ಎಲ್ಲರ ಕಣ್ಣು ಇದೀಗ ದೆಹಲಿಯತ್ತ ನೆಟ್ಟಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಕರ್ನಾಟಕದ ಮುಂದಿನ ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ.
ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಒಂದೆರಡು ದಿನಗಳಲ್ಲಿ ತೆರೆ ಬೀಳಲಿದೆ. ಈಗಾಗಲೇ ಸಿದ್ದರಾಮಯ್ಯ ದೆಹಲಿ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಡಿ.ಕೆ. ಶಿವಕುಮಾರ್ ಕೂಡ ದೆಹಲಿಗೆ ಹಾರಲಿದ್ದಾರೆ.












Click it and Unblock the Notifications