NWKRTC: ಗಣೇಶ ಹಬ್ಬ ಪ್ರಯುಕ್ತ 6 ದಿನ 220 ಹೆಚ್ಚುವರಿ ಬಸ್‌ಗಳ ಸಂಚಾರ, ವೇಳಾಪಟ್ಟಿ
ಹುಬ್ಬಳ್ಳಿ, ಸೆಪ್ಟಂಬರ್ 01: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಸಾಲು ಸಾಲು ರಜೆ ಹಾಕಿಕೊಂಡು ಊರುಗಳಿಗೆ ಬರುವವರಿಗೆ ಮತ್ತು ಬಂದು ಹೋಗುವವರಿಗೆ ಅನುಕೂಲವಾಗಲೆಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) 220ವಿಶೇಷ ಬಸ್‌ಗಳನ್ನು ಹಬ್ಬದ ಪ್ರಯುಕ್ತ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಹಾಗಾದರೆ ಎಲ್ಲಿಂದ ಎಲ್ಲಿಗೆ? ದಿನಾಂಕ, ವೇಳಾಪಟ್ಟಿ ಇಲ್ಲಿದೆ.
ಗಣೇಶ ಹಬ್ಬದ ಪ್ರಯುಕ್ತ ಆಚರಣೆಗೆ ಹುಬ್ಬಳ್ಳಿಗೆ ಆಗಮಿಸುವವರು ಮತ್ತು ಇಲ್ಲಿಂದ ರಜೆ ಮುಗಿಸಿ ತೆರಳುವವರಿಗೆ ಹಾಗೂ ಸಾರ್ವಜನಿಕರಿಗೆ ಸಹಾಯವಾಗುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (NWKRTC) ಇದೇ ಸಪ್ಟೆಂಬರ್ 5 ರಿಂದ 10 ರವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ಬಿಡಲಾಗಿದೆ.

ವಿಶೇಷ ಬಸ್‌ಗಳ ಸಂಚಾರ ದಿನಾಂಕ
ಈ ಕುರಿತು NWKRTC ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಅವರು ಮಾಹಿತಿ ನೀಡಿದ್ದಾರೆ. ಈ ಬಾರಿ ಗೌರಿ-ಗಣೇಶ ಹಬ್ಬ ವಾರಾಂತ್ಯದಲ್ಲಿ ಬಂದಿದ್ದು ಸಾರ್ವಜನಿಕರು ಅದರಲ್ಲೂ ಪ್ರಮುಖವಾಗಿ ನೌಕರರಿಗೆ ಸಂಭ್ರಮ ಹೆಚ್ಚಿಸಿದೆ. ಸಪ್ಟೆಂಬರ್ 6ರಂದು ಶುಕ್ರವಾರ ಗೌರಿ ಹಬ್ಬ, 7ರಂದು ಶನಿವಾರ ಗಣೇಶ ಚತುರ್ಥಿ ಹಾಗೂ 8ರಂದು ರವಿವಾರ ಸಾರ್ವಜನಿಕ ರಜೆ ಇರಲಿದೆ. ಈ ಕಾರಣಕ್ಕೆ ಬಹುತೇಕ ತಮ್ಮ ತಮ್ಮ ಊರುಗಳಲ್ಲಿ ಹಬ್ಬ ಆಚರಣೆ ಮಾಡಲಿದ್ದಾರೆ.
ಹಬ್ಬದ ಆಚರಣೆಗಾಗಿ ಬೆಂಗಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ಆಗಮಿಸಲಿದ್ದಾರೆ. ಅವರ ಅನುಕೂಲಕ್ಕಾಗಿ ಸಪ್ಟೆಂಬರ್ 5ರಿಂದ 10ರವರೆಗೆ ಹೆಚ್ಚುವರಿ ವಿಶೇಷ ಬಸ್ ಗಳ ಕಾರ್ಯಾಚರಣೆ ನಡೆಸಲಿವೆ. ಅಲ್ಲದೇ ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ಮೇಲೆ ವಿಶೇಷ ರಿಯಾಯಿತಿ ಸಹ ಇರಲಿದೆ.

ಸಾರಿಗೆ ನಿಗಮವು ವೋಲ್ವೋ ಎಸಿ ಐರಾವತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ವಿವಿಧ ಮಾದರಿಯ ಬಸ್ ಗಳನ್ನು ಹಬ್ಬದಂದು ನಿರ್ವಹಣೆ ಮಾಡಲಿದೆ.
ಹಬ್ಬದ ಆಚರಣೆಗಾಗಿ ಆಗಮಿಸುವವರ ಅನುಕೂಲಕ್ಕಾಗಿ ಸಪ್ಟೆಂಬರ್ 5 ಮತ್ತು 6ರಂದು ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್ ಗಳು ಸಂಚಾರ ನಡೆಸಲಿವೆ.
ಸೆಪ್ಟಂಬರ್ 10 ರವರೆಗೆ ಹೆಚ್ಚುವರಿ ಬಸ್ ಸಂಚಾರ
ಅದೇ ರೀತಿ ಹಬ್ಬದ ರಜೆ ಮುಗಿಸಿಕೊಂಡು ತಮ್ಮ ಉದ್ಯೋಗದ ಸ್ಥಳ, ಊರುಗಳಿಗೆ ಹಿಂದಿರುಗುವವರ ಅನುಕೂಲಕ್ಕಾಗಿ ಸಪ್ಟೆಂಬರ್ 8ರಂದು ರವಿವಾರ ಹಾಗೂ 9ರಂದು ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಓಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸಪ್ಟೆಂಬರ್ 5 ರಿಂದ 10 ರವರೆಗೆ ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಅಕ್ಕಪಕ್ಕದ ಜಿಲ್ಲೆಗಳ ಪ್ರಮುಖ ಸ್ಥಳಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ರಿಯಾಯಿತಿ ಪಡೆಯಿರಿ
ಹಬ್ಬದ ವಿಶೇಷ ಬಸ್ಸುಗಳನ್ನು ನೀವು ಎಂದಿನಂತೆ ಆನ್‌ಲೈನ್ ಮೂಲಕ ಬುಕ್ ಮಾಡಬಹುದು.
https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ ಹೋಗುವ ಮತ್ತು ಹಿಂತಿರುಗಿ ಬರುವ ಎರಡು ಕಡೆಯ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ಪಡೆಯಲು ಅವಕಾಶ ಇದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications