NWKRTC: ಪ್ರಯಾಣಿಕರೇ ಲಗೇಜ್ ಚಿಂತೆ ಬಿಟ್ಟುಬಿಡಿ: ನಿಲ್ದಾಣದಲ್ಲಿದೆ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ, ಬಳಕೆ ಹೇಗೆ?
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ನಿತ್ಯ ಸಾವಿರಾರು ಜನರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಈ ಸಾರಿಗೆ ಬಸ್ ಪ್ರಯಾಣಿಕರು ಹಾಗೂ ಇತರ ಸಾರ್ವಜನಿಕರು ತಮ್ಮ ಲಗೇಜುಗಳನ್ನು ಸುರಕ್ಷಿತವಾಗಿ ಇಡಲು ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ( NWKRTC) ಅತ್ಯಾಧುನಿಕ ಡಿಜಿಟಲ್ ಲಾಕರ್ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.
ಹೌದು, ಹುಬ್ಬಳ್ಳಿ ನಗರದಲ್ಲಿ ಈ ಹಿಂದೆ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಡಿಜಿಟಲ್ ಲಗೇಜ ಲಾಕರ್ ವ್ಯವಸ್ಥೆ ಪರಿಚಯಿಸಿತ್ತು. ಇದೀಗ ಹೊಸೂರು ಬಸ್ ನಿಲ್ದಾಣದಲ್ಲಿ ಡಿಜಿಟಲ್ ಲಗೇಜ ಲಾಕರ್ ಮೂಲಕ ಪ್ರಯಾಣಿಕರಿಗೆ ಲಗೇಜುಗಳ ಚಿಂತೆ ದೂರ ಮಾಡಲಾಗಿದೆ. ಇದರ ಬಳಕೆ ಹೇಗೆ, ಶುಲ್ಕ ಎಷ್ಟು ಎಂಬಿತ್ಯಾದಿ ಮಾಹಿತಿ ಮುಂದಿದೆ.

ಇಂದು ಗುರುವಾರ ಹೊಸೂರು ಬಸ್ ನಿಲ್ದಾಣದಲ್ಲಿ NWKRTC ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಉಪಸ್ಥಿತಿಯಲ್ಲಿ ನೂತನ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು.
ತಂತ್ರಜ್ಞಾನ ಆಧಾರಿತ ಪ್ರಯಾಣಿಕ ಸ್ನೇಹಿ ಉಪಕ್ರಮ
ಈ ವೇಳೆ ಮಾತನಾಡಿದ ಎಚ್. ರಾಮನಗೌಡರ ಅವರು, ಸಾರ್ವಜನಿಕರ ಅವಶ್ಯಕತೆಗೆ ತಕ್ಕಂತೆ ಸಂಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಈ ನೂತನ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ರಾಜ್ಯದ ಸಾರಿಗೆ ಸಂಸ್ಥೆಗಳ ಪೈಕಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ ಎಂದರು.
ಅಲ್ಲಿ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ಸೌಲಭ್ಯವನ್ನು ಈಗ ಹೊಸೂರು ಬಸ್ ನಿಲ್ದಾಣದಲ್ಲಿ ವಿಸ್ತರಿಸಲಾಗಿದೆ. ಡುರೋಲ್ಟ ಟೆಕ್ನಾಲಜೀಸ್ ಖಾಸಗಿ ಸಂಸ್ಥೆಯು ಇದರ ನಿರ್ವಹಣೆ ಮಾಡುತ್ತದೆ ಎಂದು ಅವರು ವಿವರಿಸಿದರು.
ಲಗೇಜ್ ಲಾಕರ್ ಬಳಕೆಯ ಕಾರ್ಯ ವಿಧಾನ ಹೇಗೆ?
ಪ್ರಸ್ತುತ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆಯು ಆದುನಿಕ ತಂತ್ರಜ್ಞಾನ ಆಧಾರಿತ ಬಳಕೆದಾರ ಸ್ನೇಹಿಯಾಗಿದ್ದು, ಯಾವುದೇ ಸಿಬ್ಬಂದಿಯ ಅವಶ್ಯಕತೆಯಿಲ್ಲದೆ ಎಟಿಎಂ ಯಂತ್ರದ ಮಾದರಿಯಲ್ಲಿ ಸ್ವಯಂಚಾಲಿತವಾಗಿ, ಸರಳವಾಗಿ ಕೆಲಸ ನಿರ್ವಹಿಸುತ್ತದೆ.
ಎಲ್ಲಾ ಪ್ರಕ್ರಿಯೆಗಳು ಸಿಸಿ ಟಿವಿ ಕಣ್ಗಾವಲಿನಲ್ಲಿ ಇರುತ್ತದೆ. ಪ್ರಯಾಣಿಕರು ಇಲ್ಲಿ ತಮ್ಮ ಲಗೇಜುಗಳನ್ನು ಇಟಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ. ಕಿಯೋಸ್ಕ್ ನಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸುವ ಮೂಲಕ ಪ್ರಕ್ರಿಯೆ ಆರಂಭಿಸಬೇಕು. ಆ ಸಂಖ್ಯೆಗೆ ಬರುವ ಒಟಿಪಿ ದಾಖಲಿಸಿ ಅಗತ್ಯ ಮಾಹಿತಿ ನೀಡಬೇಕು. ತಮ್ಮ ಅವಶ್ಯಕತೆಗೆ ತಕ್ಕಂತೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಲಗೇಜ ಲಾಕರ್ ಹಾಗೂ ಬಳಕೆಯ ಅವಧಿಯನ್ನು ಆಯ್ಕೆ ಮಾಡಿಕೊಂಡು ನಿಗದಿತ ಮೊತ್ತವನ್ನು ಯಪಿಐ ಮೂಲಕ ಪಾವತಿಸಿ ಲಗೇಜ್ ಲಾಕರ್ ಬಳಸಬಹುದಾಗಿದೆ.
ವಿಶೇಷವೆಂದರೆ ಈ ಡಿಜಿಟಲ್ ಲಾಕರ್ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ನೀವ ಬಳಸುವಷ್ಟರ ಮಟ್ಟಿಗೆ ಪ್ರಯಾಣಿಕ ಸ್ನೇಹಿಯಾಗಿದ್ದು, ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ. ನಿಮ್ಮ ಲಗೇಜ್‌ಗಳನ್ನು ಗಂಟೆಗಳ ಅವಧಿ, ದಿನದ ಅವಧಿಯಲ್ಲೂ ಇಲ್ಲಿ ಸುರಕ್ಷಿತವಾಗಿ ಇಡಬಹುದಾಗಿದೆ.
ಲಾಕರ್ ಶುಲ್ಕ ಎಷ್ಟು?
ಲಗೇಜ್ ಗಾತ್ರದ ಮೇಲೆ ಶುಲ್ಕ ಇರಲಿದೆ. ಆರಂಭಿಕ ಶುಲ್ಕ 40 ರೂಪಾಯಿ. ಒಟ್ಟು 19 ಬ್ಯಾಗ್‌ಗಳನ್ನು ಇಡಬಹುದಾದ ದೊಡ್ಡ ಲಾಕರ್ ಇದಾಗಿದೆ. ದಿನದ 24 ಗಂಟೆಯೂ ಸಿಸಿಟಿವಿ ಕಣ್ಗಾವಲಿನಲ್ಲಿ ಈ ಲಾಕರ್ ವ್ಯವಸ್ಥೆ ಬಳಕೆಗೆ ಲಭ್ಯ ಇರುತ್ತದೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಇತರೆ ಬಸ್ ನಿಲ್ದಾಣಗಳಲ್ಲಿ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದರು.
ಈ ವೇಳೆ ವಿಭಾಗೀಯ ಸಾರಿಗೆ ಅಧಿಕಾರಿ ವೈ.ಎಂ.ಶಿವರಡ್ಡಿ, ವಿಭಾಗೀಯ ತಾಂತ್ರಿಕ ಇಂಜಿನಿಯರ ದೀಪಕ ಜಾಧವ, ಡಿಪೊ ಮ್ಯಾನೇಜರಗಳಾದ ಎಲ್.ಎಚ್.ರಾಠೋಡ, ಅನಿಲಕುಮಾರ ಹಳ್ಳದ,ಪ್ರಶಾಂತ ಪಾನಬುಡೆ, ನಿಲ್ದಾಣಾಧಿಕಾರಿ ಸುಭಾಸ ಲಂಕೆಣ್ಣವರ, ಸಿಬ್ಬಂದಿಗಳು, ಡುರೋಲ್ಟ ಟೆಕ್ನಾಲಜೀಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಂಜಯ ವಸ್ತ್ರದ, ಪ್ರಯಾಣಿಕರು ಮತ್ತಿತರರು ಉಪಸ್ಥಿತರಿದ್ದರು.


Click it and Unblock the Notifications
