ಆನ್‌ಲೈನ್ ಮೂಲಕ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ತಿದ್ದುಪಡಿ, ವಿವರ
ಬೆಂಗಳೂರು, ಅಕ್ಟೋಬರ್ 11; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಆನ್‌ಲೈನ್ ಮೂಲಕ ತಿದ್ದುಪಡಿ ಮಾಡುವ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಅಧ್ಯಕ್ಷರು ಕ.ಶಾ.ಪ.ಮೌ.ಮಂಡಳಿ ಅಧ್ಯಕ್ಷರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ ತಿದ್ದುಪಡಿಗಳನ್ನು ಆನ್‌ಲೈನ್ ಮುಖಾಂತರ ನಿರ್ವಹಿಸುತ್ತಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಲ್ಲಿ ಬಹುತೇಕ ಪರೀಕ್ಷಾ ಚಟುವಟಿಕೆಗಳನ್ನು ತಾಂತ್ರಿಕವಾಗಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಪ್ರಸ್ತುತ ಪ್ರಸ್ತಾವನೆಯನ್ನು ಭೌತಿಕವಾಗಿ ಸ್ವೀಕರಿಸಿ ಇತ್ಯರ್ಥಪಡಿಸಲಾಗುತ್ತಿದೆ. ಸದರಿ ಸೇವೆಯನ್ನು ಆನ್‌ಲೈನ್ ಮುಖಾಂತರ ನಿರ್ವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಹೇಗೆ ತಿದ್ದುಪಡಿ ಮಾಡುವುದು?; ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಪಸ್ತುತ ಚಾಲ್ತಿಯಲ್ಲಿರುವ ವಿಧಾನದ ಬಗ್ಗೆ ವಿವರಣೆ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರ ಮುಖಾಂತರ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾಗೀಯ ಕಛೇರಿಗಳಿಗೆ/ ಮಂಡಳಿಗೆ ಅಂಚೆ ಮೂಲಕ ಸಲ್ಲಿಸಬೇಕಾಗಿತ್ತು.
ವಿಭಾಗೀಯ ಕಛೇರಿಗಳಲ್ಲಿ ಸದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ತಿದ್ದುಪಡಿಯನ್ನು ಮಾಡಿ ಸಂಬಂಧಿಸಿದ ಶಾಲೆಗೆ ಭೌತಿಕವಾಗಿ ರವಾನಿಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಸದರಿ ಪ್ರಮಾಣ ಪತ್ರವನ್ನು ಪಡೆಯಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತಿತ್ತು. ಈ ರೀತಿಯ ಪತ್ರ ವ್ಯವಹಾರವನ್ನು ತಡೆಗಟ್ಟಿ ಸದರಿ ಸೇವೆಯನ್ನು ಆನ್‌ಲೈನ್ ಮೂಲಕ ನೀಡುವುದು ಸೂಕ್ತವೆಂದು ಮನಗಂಡು ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಈ ನೂತನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಿದೆ.
ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ ಪರಿಷ್ಕೃತ ಅಂಕಪಟ್ಟಿಯನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ವಿಧಾನದ ವಿವರಗಳನ್ನು ಸಹ ಸುತ್ತೋಲೆಯಲ್ಲಿ ನೀಡಲಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳಿದ್ದಲ್ಲಿ, ಅಭ್ಯರ್ಥಿಗಳು ತಾವು ಅಭ್ಯಸಿಸಿದ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರಿಗೆ ಪೂರಕ ದಾಖಲೆಗಳನ್ನು ಸಲ್ಲಿಸತಕ್ಕದ್ದು.
ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಿಗದಿತ ಶುಲ್ಕವನ್ನು ಆನ್‌ಲೈನ್ ಮುಖಾಂತರ ಅಂದರೆ ಎಲ್ಲಾ ಬ್ಯಾಂಕಿನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಈ ಸೌಲಭ್ಯ ಇಲ್ಲದವರು ಆಫ್‌ಲೈನ್‌ನಲ್ಲಿ ಪಾವತಿಸಲು ಚಲನ್‌ನನ್ನು ಸದರಿ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕ್‌ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿರುತ್ತದೆ.
ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಸದರಿ ಮಾಹಿತಿಯು ಸಂಬಂಧಿಸಿದ ವಿಭಾಗೀಯ ಕಛೇರಿ/ ಮಂಡಲಿಯ ಲಾಗಿನ್‌ಗೆ ಹೋಗುತ್ತದೆ. ಶಾಲಾ ಮುಖ್ಯೋಪಾಧ್ಯಾಯರು ಅಪ್‌ಲೋಡ್ ಮಾಡಲಾದ ಅಗತ್ಯ ದಾಖಲೆಗಳನ್ನು ವಿಭಾಗೀಯ/ ಮಂಡಲಿ ಕಛೇರಿಗಳಲ್ಲಿ ನಿಯಮಾನುಸಾರ ಪರಿಶೀಲಿಸಿ, ಪ್ರಸ್ತಾವನೆಯು ತಿದ್ದುಪಡಿಗೆ ಅರ್ಹವಿದ್ದಲ್ಲಿ ಸಂಬಂಧಿಸಿದ ವಿದ್ಯಾರ್ಥಿಯ ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ ಮಂಡಲಿಗೆ ಭೌತಿಕವಾಗಿ ಕಳುಹಿಸುವಂತೆ ಮುಖ್ಯ ಶಿಕ್ಷಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುವುದು.
ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಛೇರಿ/ ಮಂಡಲಿಗೆ ಸ್ವೀಕೃತವಾದ ನಂತರ ಅದನ್ನು ನಾಶಪಡಿಸಿ, ಪ್ರಸ್ತಾವನೆಯಲ್ಲಿ ಕೋರಿರುವ ತಿದ್ದುಪಡಿಗಳನ್ನು ಅಳವಡಿಸಿ ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ಸ್ಪೀಡ್ ಪೋಸ್ಟ್ ಮುಖಾಂತರ ರವಾನಿಸಲಾಗುತ್ತದೆ. ಆನ್‌ಲೈನ್ ಮುಖಾಂತರ ಪ್ರಸ್ತಾವನೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಅಪ್‌ಲೋಡ್ ಮಾಡುವ ದಾಖಲೆಗಳನ್ನು ತಿದ್ದುಪಡಿ/ ನಕಲಿ (Forged) ಮಾಡಿದಲ್ಲಿ ಅಂತಹ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಎಲ್ಲಾ ಪ್ರಕ್ರಿಯೆಗಳ ಕುರಿತು ಶಾಲಾ ಹಂತದಲ್ಲಿ ಮತ್ತು ವಿಭಾಗೀಯ ಕಛೇರಿಯ/ ಮಂಡಲಿಯಲ್ಲಿ ಕ್ರಮವಹಿಸುವ ಬಗ್ಗೆ ವಿವರವಾದ User Manual ಅನ್ನು ನೀಡಲಾಗಿದೆ. ಅದರಂತೆ ರಾಜ್ಯದ ಎಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿಭಾಗೀಯ ಕಛೇರಿ/ ಮಂಡಲಿಯಲ್ಲಿ ಕ್ರಮವಹಿಸಲು ತಿಳಿಸಲಾಗಿದೆ.
ಆನ್‌ಲೈನ್ ಮುಖಾಂತರ ಸೇವೆಯನ್ನು ನೀಡಲಾಗುತ್ತಿರುವ ಬಗ್ಗೆ ಅಭ್ಯರ್ಥಿಗಳಿಗೆ/ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡುವುದು. ಸದರಿ ಸೇವೆಯನ್ನು ಆನ್‌ಲೈನ್ ಮುಖಾಂತರ ಪ್ರಕ್ರಿಯೆಗೊಳಿಸಿದರೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ಜೊತೆಗೆ ಒಂದು ತಿಂಗಳವರೆಗೆ ಈ ಹಿಂದಿನ ವಿಧಾನದಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಿದಲ್ಲಿ ಸೇವೆಯನ್ನು ಒದಗಿಸಲು ಕ್ರಮವಹಿಸುವುದು. ಅದರ ನಂತರ ಭೌತಿಕವಾಗಿ ಪ್ರಸ್ತಾವನೆ ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications