ಇನ್ನು ಮುಂದೆ ರಸ್ತೆ ಮೇಲೆ ಕಸ ಸುರಿದವರಿಂದಲೇ ತೆರವು, ಸ್ವಚ್ಛ ಬೆಂಗಳೂರು ಕನಸು ಈಡೇರುತ್ತಾ?
ಬೆಂಗಳೂರು: ಎಲ್ಲಿಯೋ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಿದೆ ಎಂದೆನಿಸುತ್ತಿರುವಾಗಲೇ ಇದೀಗ ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗಿ ಮತ್ತೆ ಮಾರ್ಪಾಡಾಗುತ್ತಿದ್ದು, ಎಲ್ಲೆಡೆ ಕಸದಿಂದ ತುಂಬಿ ತುಳುಕುತ್ತಿದೆ. ಗಬ್ಬು ನಾರುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಬೇರೆ. ಅಪ್ಪಿ ತಪ್ಪಿ ಕಸದ ರಾಶಿ ಇರುವೆಡೆ ಜಾಮ್ ಆಯಿತೋ, ಯಮಯಾತನೆ ಅನುಭವಿಸೋದು ಸಿಲಿಕಾನ್ ಸಿಟಿಯ ಜನರಿಗೆ ಕಾಮನ್ ಆಗಿದೆ. ಇಂಥದ್ದೊಂದು ಗಂಭೀರವಾದ ಸಮಸ್ಯೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣೇ ಭೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ನು ಮಂದೆ ಕಸ ಸುರಿದವರೇ ಅದನ್ನು ತೆರವುಗೊಳಿಸಬೇಕೆಂದು ಆದೇಶಿಸಿದ್ದಾರೆ. ಆ ಮೂಲಕ ಬೆಂಗಳೂರಿಗರ ಸ್ವಚ್ಛ ಬೆಂಗಳೂರಿನ ಕನಸು ಈಡೇರುತ್ತೆ ಎಂಬ ಆಶಯ ಗರಿಗೆದರಿದೆ.
ಜಿಬಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಎಲ್ಲೆಡೆ ಕಸ ಇರುವುದಕ್ಕೆ ಅಗತ್ಯ ಕ್ರಮಕೈಗೊಳ್ಳದಿರಲು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯ ರಸ್ತೆಗಳಲ್ಲಿ ಇರುವ ಕಸ, ಕಟ್ಟಡ ಅವಶೇಷಗಳು (ಡೆಬ್ರಿಸ್) ಹಾಗೂ ಕಳೆಗಳನ್ನು ವಿಶೇಷ ಅಭಿಯಾನದಡಿ ಒಂದು ಬಾರಿ ಸಂಪೂರ್ಣವಾಗಿ ತೆರವುಗೊಳಿಸಲು ನಿರ್ದೇಶಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಕಸ ಸುರಿದವರಿಂದಲೇ ಅದನ್ನು ತೆರವುಗೊಳಿಸಲಾಗುವುದು, ಎಂದಿದ್ದಾರೆ.

ಸ್ವಚ್ಛ ಬೆಂಗಳೂರು - ನಮ್ಮೆಲ್ಲರ ಜವಾಬ್ದಾರಿ:
ನಗರದಲ್ಲಿ 2017ರವರೆಗೂ ಎಲ್ಲೂ ಕಸದ ಬುಟ್ಟಿಗಳನ್ನಿಡುವ ಪದ್ಧತಿ ಇರಲಿಲ್ಲ. ಯಾರಿಗೋ ದುಡ್ಡು ಮಾಡಿಕೊಡಲು ಕೆಲವೆಡೆ ಮಾತ್ರ ಬುಟ್ಟಿ ಇಡಲಾಗಿತ್ತು. ಪರಿಣಾಮ ಜನ ಕಸದ ಬುಟ್ಟಿಗೆ ಮಾತ್ರವಲ್ಲದೆ ರಸ್ತೆಯ ಎಲ್ಲೆಡೆ ಕಸ ಎಸೆಯಲು ಶುರು ಮಾಡಿದರು. ಈಗಲೂ ಇದೇ ಪದ್ಧತಿ ಮುಂದುವರೆದಿರುವುದು ಎಲ್ಲಾ ಸಮಸ್ಯೆಗೂ ಮೂಲವಾಗಿದೆ, ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಸಿ-ಒಣ ತ್ಯಾಜ್ಯ ಬೇರ್ಪಡಿಕೆ:
ಹಸಿ - ಒಣ ತ್ಯಾಜ್ಯಗಳನ್ನು ಮನೆಗಳಲ್ಲಿ ಜನರೇ ಬೇರ್ಪಡಿಸಿ ಕಸದ ಗಾಡಿಗೆ ನೀಡಬೇಕು. ಕಸದ ಗಾಡಿಯೂ ತ್ಯಾಜ್ಯಗಳನ್ನು ಬೇರ್ಪಡಿಸಿಯೇ ಘಟಕಗಳಿಗೆ ತಲುಪಿಸಬೇಕು. ಹೀಗೆ ವ್ಯವಸ್ಥೆಯ ಅಡಿಪಾಯದಿಂದಲೇ ಬದಲಾವಣೆ ತರುವ ದೂರದೃಷ್ಠಿ ಯೋಜನೆ ಇಲ್ಲದೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಬೆಂಗಳೂರು ಅಂದ್ರೆ ಬರೀ ಗಾರ್ಬೇಜು ಗಾರ್ಬೇಜು ಅನ್ನೋದೇ ದೊಡ್ಡ ಚರ್ಚೆಯಾಗಿದೆ. ಇದನ್ನ ನಾವು ಪರಿಹರಿಸದಿದ್ದಲ್ಲಿ ಜನರ ಮುಂದೆ ಮುಖ ತೋರಿಸುವುದೂ ಕಷ್ಟ, ಎಂದರು.
ಬೆಂಗಳೂರು ನಗರದ ಕಸದ ಸಮಸ್ಯೆ ಉಲ್ಬಣಗೊಳ್ಳಲು ಕಾರಣವೇನು? ಹಾಗೂ ಈ ಸಮಸ್ಯೆಯ ಪರಿಹಾರಕ್ಕೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳೇನು? ಎಂಬ ಬಗ್ಗೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಸಂಬಂಧಿತ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ ಸಚಿವರು.
ಎರಡು ದಿನಗಳ ಹಿಂದೊಂದು ಸಭೆ ನಡೆಸಿದ ಸಚಿವರು, ಹೊಂಡವಿಲ್ಲದೇ ಬೆಂಗಳೂರಲ್ಲಿ ರಸ್ತೆ ನಿರ್ಮಿಸೋದು ರಾಕೆಟ್ ಸೈನ್ಸಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಮೂಲಕ ಎಲ್ಲೆಡೆ ಹೊಂಡ ಗುಂಡಿಗಳಿಂದ ತುಂಬಿರುವ ನಗರದ ರಸ್ತೆ ಸರಿ ಹೋಗುವ ಭರವಸೆ ಬೆಂಗಳೂರಿನ ನಾಗರಿಕರಿಗೆ ಮೂಡಿದೆ. ಇದೀಗ ಉಲ್ಬಣವಾಗುತ್ತಿರುವ ಕಸದ ಸಮಸ್ಯೆಗೂ ಒಂದು ಮುಕ್ತಿ ಹಾಡಲು ಸಚಿವರು ನಿರ್ದೇಶಿಸಿದ್ದು ಏನಾಗುತ್ತೆಂದು ಕಾದು ನೋಡಬೇಕಿದೆ.
ಕಸ ವಿಲೇವಾರಿಗೆ ಸಂಬಂಧಿಸಿ ನಾನು ಹೊಸತೇನೋ ಮಾಡಿ ಅಂತ ಹೇಳ್ತಾ ಇಲ್ಲ. ಬದಲಾಗಿ ಈಗಾಗಲೇ ನಮ್ಮ ಸಿಸ್ಟಂ ಏನಿದೊಯೋ.. ರೂಲ್ಸ್ ಏನಿದೆಯೋ ಅದನ್ನೇ ಸರಿಯಾಗಿ ಫಾಲೋ ಮಾಡಿ ಸಾಕು. ಆದರೆ, ಸಿಸ್ಟಂ ಸರಿಯಾಗಿ ಕೆಲಸ ಮಾಡದಿದ್ದರೆ ನನ್ನ ಫ್ಯೂಸ್ ಬ್ಲೋ ಆಗುತ್ತೆ. ಅದರ ಪರಿಣಾಮವನ್ನೂ ಎದುರಿಸಲು ಸಿದ್ಧರಾಗಿ, ಎಂದಿದ್ದಾರೆ.
ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಇಲ್ಲಿ ಎಲ್ಲೆಡೆ ಬಂದ ಜನರಿದ್ದಾರೆ. ಆದರೆ, ಪ್ರತಿಯೊಬ್ಬರೂ ದೂರುವುದು ಟ್ರಾಫಿಕ್ ಹಾಗೂ ಗಾರ್ಬೇಜ್ ಸಮಸ್ಯೆ ಬಗ್ಗೆ. ಎಷ್ಟೇ ಕಡಿದರೂ ನಗರ ಇನ್ನೂ ಗಿಡ-ಮರಗಳು ಹಸಿರಿನಿಂದ ಕಂಗೊಳಿಸುತ್ತಿದೆ. ದಿಲ್ಲಿಗೆ ಹೋಲಿಸಿದಲ್ಲಿ ಸ್ವಚ್ಛವಾದ ವಾತಾವರಣವೂ ಇದೆ. ಸದಾ ತಂಪಾಗಿಯೇ ಇರುವ ಬೆಂಗಳೂರಲ್ಲಿ ಕೆಲಸ ಹುಡುಕಿಕೊಳ್ಳುವುದು ಅನೇಕರ ಕನಸು. ಅಂಥ ನಗರವೀಗ ಕಸದಿಂದು ತುಂಬಿ ತುಳುಕುತ್ತಿದ್ದು, ಜನರು ತಮ್ಮ ನಾಗರಿಕ ಪ್ರಜ್ಞೆಯನ್ನು ಮರೆತು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಕೆಲವು ರಸ್ತೆಗಳ ಇಕ್ಕೆಲಗಳು ಗಬ್ಬು ನಾರುತ್ತಿದೆ. ಅಲ್ಲಿ ಮೂಗು ಮುಚ್ಚಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂಡ ಏನು ಮಾಡುತ್ತೋ, ಬಿಡುತ್ತೋ ಗೊತ್ತಿಲ್ಲ. ಕಸದಿಂದ ತುಂಬಿರುವ ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿ ಮಾಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಇದೇ ಬೆನ್ನಲ್ಲೇ ಸಚಿವರ ಇಂಥ ಕಟ್ಟಿನಿಟ್ಟಿನ ಆದೇಶ ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದು ನೋಡಬೇಕು.














Click it and Unblock the Notifications