ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದತ್ತ ಎನ್‌ಡಿಎ: ಮುಂಗಾರು ಅಧಿವೇಶನದಲ್ಲಿ ಮಹತ್ವದ ಮಸೂದೆಗಳ ಅಂಗೀಕಾರ?
ಭಾರತೀಯ ರಾಜಕೀಯದಲ್ಲಿ ಕೆಲವೊಂದು ತ್ವರಿತ ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರದಲ್ಲಿ ಆಡಳಿತಾರೂಢ ಪಕ್ಷ ಎನ್‌ಡಿಎ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಾಧಿಸುವ ಸನಿಹದಲ್ಲಿದೆ. ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಎನ್‌ಡಿಎ ಬಲವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಇದೀಗ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವೂ ಹೋಳಾಗುವ ಸೂಚನೆ ಸಿಕ್ಕಿದೆ. ಸಂವಿಧಾನ ತಿದ್ದುಪಡಿ ಸೇರಿ ಪ್ರಮುಖ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಅಗತ್ಯವಿರುವ ಬಹುಮತವು ಮುಂಬರುವ ಮುಂಗಾರು ಅಧಿವೇಶನದ ವೇಳೆಗೆ ಆಡಳಿತ ಪಕ್ಷಕ್ಕೆ ಸಿಗುವ ಸ್ಪಷ್ಟ ಮುನ್ಸೂಚನೆ ಈ ಎಲ್ಲ ರಾಜಕೀಯ ಚಟುವಟಿಕೆಗಳಿಂದ ಸಿಗುತ್ತಿದೆ.
ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು: ಟಿಎಂಸಿ ಮತ್ತು ಶಿವಸೇನೆಯಲ್ಲಿ ಒಡಕು
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಈಗಾಗಲೇ ಹೋಳಾಗಿದೆ. ಪಕ್ಷದ 28 ಲೋಕಸಭಾ ಸಂಸದರ ಪೈಕಿ 20 ಮಂದಿ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದು, 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ'ದೊಂದಿಗೆ ವಿಲೀನಗೊಂಡಿದ್ದಾರೆ. ಈ ಬಂಡಾಯ ಗುಂಪು ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ. ಇದು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಭಾರಿ ದೊಡ್ಡ ಹೊಡೆತ ನೀಡಲಿದೆ.

ಇನ್ನೊಂದೆಡೆ, ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವೂ ಒಡೆಯುವ ಸೂಚನೆ ಸಿಕ್ಕಿದೆ. ಪಕ್ಷದ 9 ಲೋಕಸಭಾ ಸಂಸದರ ಪೈಕಿ ಆರು ಮಂದಿ ಬಂಡಾಯವೆದ್ದಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮೂಲ ಶಿವಸೇನೆ ಬಣವನ್ನು ಸೇರುವ ಸಾಧ್ಯತೆ ತುಂಬಾ ಹೆಚ್ಚಿದೆ. ಈ ಎಲ್ಲ ಬೆಳವಣಿಗೆಗಳು ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲವನ್ನು ಗಣನೀಯವಾಗಿ ಹೆಚ್ಚಿಸಲು ನೆರವಾಗಲಿವೆ.
ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲದ ಲೆಕ್ಕಾಚಾರ
ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಾಬೀತುಪಡಿಸಲು ಒಟ್ಟು 543 ಸ್ಥಾನಗಳ ಪೈಕಿ 362 ಸಂಸದರ ಬೆಂಬಲ ಅಗತ್ಯವಿದೆ. ಪ್ರಸ್ತುತ ಮೂರು ಸ್ಥಾನಗಳು ಖಾಲಿ ಇರುವ ಕಾರಣ, ಮ್ಯಾಜಿಕ್ ನಂಬರ್ 360ಕ್ಕೆ ಇಳಿದಿದೆ. ಟಿಎಂಸಿ, ಶಿವಸೇನೆ ಹಾಗೂ ಇತರ ಬಂಡಾಯ ನಾಯಕರ ಬೆಂಬಲದೊಂದಿಗೆ ಎನ್‌ಡಿಎ ಸಂಖ್ಯಾಬಲವು ಈಗ 318ರ ಗಡಿ ತಲುಪಿದೆ. ಒಂದು ವೇಳೆ ಇತರೆ ಪ್ರಾದೇಶಿಕ ಪಕ್ಷಗಳ ಲೋಕಸಭಾ ಸದಸ್ಯರ ಬೆಂಬಲ ಅಧಿಕೃತವಾಗಿ ಲಭಿಸಿದರೆ, ಎನ್‌ಡಿಎ ಬಲವು ಅನಾಯಾಸವಾಗಿ ಏರಲಿದೆ. ಈಗಾಗಲೇ ಉತ್ತರದ ಪ್ರದೇಶದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ 20 ಸದಸ್ಯರು ಎನ್‌ಡಿಎಗೆ ಬೆಂಬಲಿಸುತ್ತಾರೆಂಬ ಊಹಾಪೋಹಗಳು ಹುಟ್ಟಿಕೊಂಡಿದ್ದು, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಂತೆ ಉತ್ತರ ಪ್ರದೇಶದಲ್ಲಿಯೂ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದೆ.
ಕೇವಲ ಲೋಕಸಭೆ ಮಾತ್ರವಲ್ಲದೆ, ರಾಜ್ಯಸಭೆಯಲ್ಲೂ ಎನ್‌ಡಿಎ ಇದೇ ರೀತಿಯ ಸಮೀಕರಣಗಳನ್ನು ಹೆಣೆಯುತ್ತಿದೆ. ಮೇಲ್ಮನೆಯಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಹಾಗೂ ಸಂವಿಧಾನ ತಿದ್ದುಪಡಿ ತರಲು 164 ಸದಸ್ಯರ ಬೆಂಬಲ ಬೇಕಿದ್ದು, ಪ್ರಸ್ತುತ ಎನ್‌ಡಿಎ 150 ಸದಸ್ಯ ಬಲವನ್ನು ಹೊಂದಿದೆ. ಸಮಾಜವಾದಿ ಸೇರಿ ಇತರೆ ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಯಶಸ್ವಿಯಾಗಿ ಕ್ರೋಢೀಕರಿಸಿದರೆ ಈ ಗುರಿಯನ್ನು ಸುಲಭವಾಗಿ ತಲುಪಬಹುದು.
ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಸಂಸತ್ತಿನ ಎರಡೂ ಮನೆಗಳಲ್ಲಿ ಈ ಮಟ್ಟದ ಬಹುಮತ ಹೊಂದುವುದು ಯಾವುದೇ ಆಡಳಿತಾರೂಢ ಪಕ್ಷಕ್ಕೆ ಅತ್ಯಂತ ಮಹತ್ವದ ಸಾಧನೆಯಾಗಿರುತ್ತದೆ. ಸಂವಿಧಾನದಲ್ಲಿ ಮಾಡಬೇಕಾದ ಕಠಿಣ ತಿದ್ದುಪಡಿಗಳಿಗೆ ಈ ಬಹುಮತ ಅತ್ಯವಶ್ಯಕ.
ಆಡಳಿತಾರೂಢ ಮೈತ್ರಿಕೂಟದ ಈ ರಣತಂತ್ರ ಯಶಸ್ವಿಯಾದರೆ, ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಜಾರಿ, ಕ್ಷೇತ್ರಗಳ ಮರುಹಂಚಿಕೆ ಪ್ರಕ್ರಿಯೆಯಂತಹ ನಿರ್ಣಾಯಕ ಮಸೂದೆಗಳಿಗೆ ಸುಲಭವಾಗಿ ಅಂಗೀಕಾರ ಸಿಗಲಿದೆ. ಕೇಂದ್ರ ಸರ್ಕಾರವು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ಮುಂಬರುವ ಮುಂಗಾರು ಅಧಿವೇಶನವು ಅತ್ಯಂತ ಕುತೂಹಲ ಮೂಡಿಸಿದೆ.













Click it and Unblock the Notifications