ಮನೆಯಿಂದಲೇ ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯಿರಿ
ಬೆಂಗಳೂರು, ಅಕ್ಟೋಬರ್ 25: ಪಿಂಚಣಿದಾರರು ವರ್ಷಕ್ಕೊಮ್ಮೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 30, 2023ರವರೆಗೆ ಈ ವರ್ಷದಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ಸಮಯವನ್ನು ನಿಗದಿ ಮಾಡಲಾಗಿದೆ.
ಖಜಾನೆ ಆಯುಕ್ತರು, ಬೆಂಗಳೂರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಪಿಂಚಣಿದಾರರಿಗೆ ಬೆರಳಚ್ಚು ಆಧರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯದ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೊಂದಿಗಿನ ದಿನಾಂಕ 29/11/2022ರ ಒಪ್ಪಂದವನ್ನು ಉಲ್ಲೇಖ ಮಾಡಲಾಗಿದೆ.

ಸುತ್ತೋಲೆಯ ವಿವರಗಳು; ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುವಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನವರು, ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯವನ್ನು 70 ರೂ. ಶುಲ್ಕದೊಂದಿಗೆ, ಪಿಂಚಣಿದಾರರ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಮನೆ ಬಾಗಿಲಲ್ಲಿ ಲಭ್ಯಗೊಳಿಸುತ್ತಿದ್ದು ಈ ಕುರಿತು ಖಜಾನೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಡುವೆ ಒಪ್ಪಂದವೊಂದು (MoU) ಸಹಿಯಾಗಿರುತ್ತದೆ ಎಂದು ಹೇಳಿದೆ.
ಮೇಲ್ಕಂಡ ಒಪ್ಪಂದದಲ್ಲಿ ಅವಕಾಶವಿರುವಂತೆ, ಈ ಸೌಲಭ್ಯದ ಕುರಿತು ವ್ಯಾಪಕ ಪ್ರಚಾರ ನೀಡಲು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ರವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಭಿತ್ತಿಪತ್ರಗಳನ್ನು (Posters) ಬಿಡುಗಡೆ ಮಾಡಿದ್ದು, ಅವುಗಳನ್ನು ರಾಜ್ಯದ ಖಜಾನೆಗಳಲ್ಲಿ ಪ್ರದರ್ಶಿಸಲು ಅನುಮತಿ ಕೋರಿರುವ ಮೇರೆಗೆ, ಖಜಾನೆ ಆಯುಕ್ತಾಲಯದಿಂದ ಅನುಮತಿ ನೀಡಲಾಗಿದೆ.
ಆದುದರಿಂದ, ಸದರಿ ಭಿತ್ತಿಪತ್ರಗಳನ್ನು ಖಜಾನೆಗಳ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಲು (ಅಂಟಿಸಲು) ಕ್ರಮ ವಹಿಸುವಂತೆ ಸೂಚಿಸಿದೆ. ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ, ಅಪರ ಮುಖ್ಯಕಾರ್ಯದರ್ಶಿಗಳು, ಆರ್ಥಿಕ ಇಲಾಖೆ,ಬೆಂಗಳೂರು ರವರ ಮಾಹಿತಿಗಾಗಿ ಸಲ್ಲಿಸಿದೆ.
ಅಂಚೆ ಮೂಲಕ ಜೀವನ ಪ್ರಮಾಣ ಪತ್ರ; ಈ ಒಪ್ಪಂದದ ಅನ್ವಯ ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪಮಾಣ ಪತ್ರ ಪಿಂಚಣಿದಾರರಿಗೆ ನೀಡಲಾಗುತ್ತಿದೆ. ಕೇವಲ ಆಧಾರ್ ಧೃಢೀಕರಣದೊಂದಿಗೆ ಸಂಪೂರ್ಣ ಕಾಗದ ರಹಿತ ಡಿಜಿಟಲ್ ಜೀವನ ಪುಮಾಣ ಪತ್ರ ಮಾಡಿಕೊಡಲಾಗುತ್ತದೆ. ಪೋಸ್ಟ್ ಮ್ಯಾನ್ ಅಥವಾ ಹತ್ತಿರದ ಅಂಚೆ ಕಛೇರಿಯ ಮೂಲಕ ನಿಮ್ಮ ಮನೆ ಬಾಗಿಲಿನಲ್ಲೇ ಡಿಜಿಟಲ್ ಜೀವನ ಪ್ರಮಾಣ ಪತ್ರದ ತ್ವರಿತ ವಿತರಣೆ ಮಾಡಲಾಗುತ್ತದೆ.
ಜೀವನ ಪ್ರಮಾಣ ಪತ್ರಕ್ಕಾಗಿ ಪಿಂಚಿಣಿ ಇಲಾಖೆ ಅಥವಾ ಬ್ಯಾಂಕ್‌ಗಳಿಗೆ ಹೋಗುವ ಅಗತ್ಯವಿಲ್ಲ. ಡಿಜಿಟಲ್ ಜೀವನ ಪ್ರಮಾಣಪತ್ರದ ವಿವರಗಳನ್ನು ನೇರವಾಗಿ ಪಿಂಚಣಿ ಇಲಾಖೆಯೊಂದಿಗೆ ನವೀಕರಿಸಲಾಗುವುದು. ಈ ಸೇವೆಗಾಗಿ ರೂ. 70ರ ಶುಲ್ಕವನ್ನು ಪಾವತಿ ಮಾಡಬೇಕಿದೆ (ತೆರಿಗೆ ಸಹಿತ).
ಡಿಜಿಟಲ್ ಜೀವನ ಪ್ರಮಾಣಪತ್ರ ಈಗ ನಿಮ್ಮ ಹತ್ತಿರದ ಅಂಚೆ ಕಛೇರಿ ಅಥವಾ ಮನೆ ಬಾಗಿಲಲ್ಲಿ ಲಭ್ಯವಿದೆ. ಮನೆ ಬಾಗಿಲಿನ ಸೇವೆಯನ್ನು ಪಡೆಯಲು ಮನೆ ಬಾಗಿಲಿನ ಸೇವೆಗಾಗಿ ಪೋಸ್ಟ್ ಮ್ಯಾನ್/ ಗ್ರಾಮೀಣ ಅಂಚೆ ಸೇವಕರನ್ನು ಸಂಪರ್ಕಿಸಿ ಅಥವಾ ಪೋಸ್ಟ್ ಇನ್ಪೋ ಅಪ್ಲಿಕೇಶನ್‌ನಲ್ಲಿ ವಿನಂತಿಯನ್ನು ಸಲ್ಲಿಸಬಹುದಾಗಿದೆ.












Click it and Unblock the Notifications