ಪುನೀತ್ ಆರೋಗ್ಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ: ವೈದ್ಯರು
ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರವಾಗಿದ್ದು, ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಹೃದಯಾಘಾತಕ್ಕೆ ಏನೇನು ಸಾಧ್ಯವೋ ಎಲ್ಲ ಚಿಕಿತ್ಸೆ ನೀಡುತ್ತಿದ್ದೇವೆ. ಸ್ಥಿತಿ ಗಂಭೀರವಾಗಿದೆ. ಸದ್ಯ ಏನನ್ನೂ ಹೇಳಲು ಸಾಧ್ಯವಿಲ್ಲ. ಮುಂದಿನ ಒಂದು ತಾಸಿನೊಳಗೆ ಅಪ್‌ಡೇಟ್ ನೀಡುತ್ತೇವೆ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥ ನಾಯಕ್ ಹೇಳಿದ್ದಾರೆ.
ಬೆಳಿಗ್ಗೆ 11ಕ್ಕೆ ಪುನೀತ್ ಆಸ್ಪತ್ರೆಗೆ ಬಂದರು. ಅವರು ಬರುವಾಗಲೇ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಲಘು ಹೃದಯಾಘಾತದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ವಿಕ್ರಂ ಆಸ್ಪತ್ರೆಗೆ ಬರುವ ವೇಳೆಗಾಗಲೇ ಅವರ ಸ್ಥಿತಿ ಗಂಭಿರವಾಗಿತ್ತು ಎಂದು ಡಾ.ರಂಗನಾಥ್ ಹೇಳಿದ್ದಾರೆ.
ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅಂತಿವಾಗಿ ಯಾವೆಲ್ಲ ಚಿಕಿತ್ಸೆಗಳನ್ನು ನೀಡಬೇಕೋ ಎಲ್ಲವನ್ನೂ ಮಾಡುತ್ತಿದ್ದೇವೆ. ಸ್ಥಿತಿ ಮಾತ್ರ ಗಂಭೀರವಾಗಿದೆ. ಸದ್ಯ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದ ರೀತಿಯಲ್ಲಿ ಹೇಳಿಕೆ ನೀಡಿರುವುದು ಅಭಿಮಾನಿಗಳು ಮತ್ತು ಕುಟುಂಬಸ್ಥರಲ್ಲಿ ಆತಂಕ್ಕೆ ಕಾರಣವಾಗಿದೆ.
ನಟ ಪುನೀತ್ ರಾಜ್ಕುಮಾರ್ಗೆ ಹೃದಯಾಘಾತವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲವಲವಿಕೆಯಿಂದ ಇದ್ದ ಪುನೀತ್ ರಾಜ್‌ಕುಮಾರ್ ಈಗ ವಿಕ್ರಂ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸಹೋದರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿ ಕುಟುಂಬದ ಎಲ್ಲ ಸದಸ್ಯರು ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಅಭಿಮಾನಿಗಳು ಸಾಗರದಂತೆ ಆಸ್ಪತ್ರೆಯತ್ತ ಆಗಮಿಸುತ್ತಿದ್ದು, ಕಣ್ಣೀರಿನಲ್ಲಿ ಮುಳುಗಿದ್ದಾರೆ.
3ಕ್ಕೆ ಸಿಎಂ ಪತ್ರಿಕಾಗೋಷ್ಠಿ:
ಆಸ್ಪತ್ರೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಟ ಶಿವರಾಜ್‌ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.
ಪುನೀತ್ ರಾಜ್‌ಕುಮಾರ್ ಆರೋಗ್ಯದ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ಪತ್ರಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಪವರ್ ಸ್ಟಾರ್‌ಗಾಗಿ ಕಣ್ಣೀರ ಧಾರೆ!
ನಟ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಹೃದಯಾಘಾತ ಹಿನ್ನೆಲೆ ಪುನೀತ್ ರಾಜ್‌ಕುಮಾರ್ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುನೀತ್ ಅವನ್ನ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೇಯೆ ಇಡಿ ಸಿನಿಮಾ ರಂಗ ಮತ್ತು ಅಭಿಮಾನಿ ಬಳಗ ಆಸ್ಪತ್ರೆಗೆ ಹಾಜರಾಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಇನ್ನು ಅಪ್ಪು ಆರೋಗ್ಯ ಸರಿಯಾಗಲಿ ಅಂತ ನೆರೆದಿರುವವರು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಆಸ್ಪತ್ರೆಗೆ ಇಡೀ ರಾಜ್‌ಕುಟುಂಬ ಹಾಜರಾಯ್ತು. ಇನ್ನೂ ನಟ ಶಿವರಾಜ್‌ಕುಮಾರ್ ಆಸ್ಪತ್ರೆಗೆ ಬರುತ್ತಲೇ ಕಣ್ಣೀರು ಹಾಕುತ್ತಾ ಬಂದ್ರು. ಪತ್ನಿ ಗೀತ ಕೈ ಹಿಡಿದು ಭಾರವಾದ ಮನಸ್ಸಿನಿಂದ ಶಿವರಾಜ್‌ಕುಮಾರ್ ಆಸ್ಪತ್ರೆಗೆ ಬಂದ್ರು. ಇನ್ನೂ ಆಸ್ಪತ್ರೆಗೆ ಬಂದಂತಹ ನಟಿ ಶೃತಿ ಕಣ್ಣೀರು ಹಾಕುತ್ತಲೇ ಬಂದರು. ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಆಸ್ಪತ್ರೆಯ ಆವರಣದಲ್ಲಿ ಕಣ್ಣೀಹಾಕಿದ್ದಾರೆ.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ. ಕಣ್ಣೀರು ಹಾಕುತ್ತಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾರೆ. ಅಭಿಮಾನಿಗಳ ಕಣ್ಣೀರು ನಿಲ್ಲುತ್ತಿಲ್ಲ. ಆಸ್ಪತ್ರೆಗೆ ಮುಂದೆ ಜಮಾಯಿಸಿದ ಸಾವಿರಾರು ಮಂದಿ ಕಣ್ಣಲ್ಲಿ ನೀರು ಜಿಗುತ್ತಿದೆ. ಅಪ್ಪುಗೆ ಏನಾಯ್ತು ಅನ್ನೋ ಆತಂಕದಲ್ಲೇ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ.
ಅಷ್ಟೇ ಅಲ್ಲ ಆಸ್ಪತ್ರೆಗೆ ಭೇಟಡಿ ನೀಡಿದ ಸಿನಿಮಾ ಮಂದಿ, ಸಂಬಂಧಿಕರು ಕಣ್ಣೀರು ಹಾಕುತ್ತಲೆ ಆಸ್ಪತ್ರೆಗೆ ಒಳಗೆ ಹೋಗುತ್ತಿದ್ದಾರೆ. ಅಪ್ಪು ಎಲ್ಲರಿಗೂ ಅತಿ ಅಚ್ಚು ಮೆಚ್ಚು, ಹಾಗಾಗಿಯೇ ಅಪ್ಪು ಆಸ್ಪತ್ರೆಗ ದಾಖಲಾಗಿದ್ದಾರೆ ಅಂದ ಕೂಡಲೆ ಇಡೀ ಸಿನಿಮಾ ರಂಗ ಆಸ್ಪತ್ರೆಯತ್ತ ದೌಡಾಯಿಸಿದೆ.
ಪುನೀತ್ ರಾಜ್‌ಕುಮಾರ್ ಆರೋಗ್ಯ ಈ ರೀತಿಯ ಗಂಭೀರ ಪರಿಸ್ಥಿತಿ ತಲುಪಿರೋದು ನಂಬಲು ಅಸಾಧ್ಯವಾದ ವಿಚಾರ. ಸದಾ ಫಿಟ್ ಅಂಡ್ ಫೈನ್ ಆಗಿರುತ್ತಿದ್ದರು ಪುನೀತ್. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಫಿಟ್‌ನೆಸ್ ವಿಚಾರದಲ್ಲಿ ಪುನೀತ್ ರಾಜ್‌ಕುಮಾರ್ ಸಾಕಷ್ಟು ಮಂದಿಗೆ ಸ್ಪೂರ್ತಿ ಆಗಿದ್ದರು. ಹಾಗಾಗಿ ಈ ಸುದ್ದಿಯನ್ನು ಅಷ್ಟು ಸುಲಭಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.